ಗುರುವಾರ , ಜೂನ್ 30, 2022
21 °C
ಕಸಬಾ ಹೋಬಳಿ, ನಗರದ ಅಂಚಿನ ಹಸುಗಳಲ್ಲಿ ರೋಗ ಉಲ್ಬಣ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಸುಗಳಿಗೆ ಕಾಲುಬಾಯಿ ರೋಗ ಬಾಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಸುಗಳಿಗೆ ಕಾಲುಬಾಯಿ ರೋಗ ಬಾಧಿಸುತ್ತಿದ್ದು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಪ್ರತಿ ವರ್ಷ ಎರಡು ಬಾರಿ ಕಾಲುಬಾಯಿ ರೋಗ ಬಾರದಂತೆ ಮುಂಜಾಗೃತವಾಗಿ ಲಸಿಕೆ ಹಾಕಲಾಗುತ್ತಿತ್ತು. ಆದರೆ ಈ ಬಾರಿ  ಲಾಕ್‌ಡೌನ್‌ ಕಾರಣದಿಂದಾಗಿ ಲಸಿಕೆ ಹಾಕಿಲ್ಲ. ಈ ಹಿನ್ನೆಲೆಯಲ್ಲಿ ರಾಸುಗಳಿಗೆ ಕಾಲುಬಾಯಿ ರೋಗ ವೇಗವಾಗಿ ಹರಡುತ್ತಿದೆ.

ನಗರ ಹಾಗೂ ಕಸಬಾ ಹೋಬಳಿಯಲ್ಲಿಯೇ ಕಾಲುಬಾಯಿ ರೋಗ ತೀವ್ರವಾಗಿ ಹರಡುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಕಾಲುಬಾಯಿ ರೋಗಕ್ಕೆ ತುತ್ತಾಗಿರುವ ರಾಸುವಿನ ಜೊಲ್ಲು ಅಥವಾ ರೋಗಕ್ಕೆ ತುತ್ತಾಗಿರುವ ರಾಸುವಿನೊಂದಿಗೆ ಒಡನಾಟ ಹೊಂದಿರುವ ಪಾಲಕರು ಮತ್ತೊಂದು ರಾಸುವನ್ನು ಮುಟ್ಟಿದರೂ ಆರೋಗ್ಯವಂತ ರಾಸುವಿಗೆ ರೋಗ ಹರಡಲಿದೆ. ಇದಲ್ಲದೆ ರೋಗ ಹರಡಿರುವ ಗ್ರಾಮದಿಂದ ರಾಸುಗಳನ್ನು ಖರೀದಿಸಿ ತಂದಾಗ, ರಾಸುಗಳು ಗುಂಪಾಗಿ ಮೇವು ಮೇಯಲು ಕೆರೆ ಅಂಗಳ ಮತ್ತಿತರೆ ಕಡೆಗಳಲ್ಲಿ ಸೇರಿದಾಗಲು ಕಾಲುಬಾಯಿ ರೋಗ ಒಂದು ರಾಸುವಿನಿಂದ ಮತ್ತೊಂದು ರಾಸುವಿಗೆ ಹರಡಲಿದೆ ಎನ್ನುತ್ತಾರೆ ಪಶುವೈದ್ಯರು.

ಕಾಲುಬಾಯಿ ರೋಗಕ್ಕೆ ತುತ್ತಾದ ರಾಸುವಿನ ಬಾಯಿಂದ ಜೊಲ್ಲು ಸೋರಲು ಆರಂಭವಾಗುತ್ತದೆ. ರಾಸುವಿನ ಬಾಯಲ್ಲಿ ಸಣ್ಣ ಗುಳ್ಳೆಗಳು ಆಗುವ ಮೂಲಕ ಹುಣ್ಣಾಗಲಿದೆ. ಇದರಿಂದ ಹುಲ್ಲು ತಿನ್ನಲು ಸಾಧ್ಯವಾಗದೇ ರಾಸು ನಿಶಕ್ತಿಯಾಗುತ್ತ ಹೋಗುತ್ತದೆ. ರಾಸುವಿನ ಗೊರಸುಗಳಲ್ಲೂ ಗಾಯಗಳಾಗಿ ನಡೆಯಲು ಕಷ್ಟವಾಗುತ್ತದೆ. ಈ ಎಲ್ಲ ಲಕ್ಷಣಗಳು ಆರಂಭವಾಗುತ್ತಿದ್ದಂತೆ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೇ ಇದ್ದರೆ ರಾಸು ಮೃತಪಡುವ ಅಪಾಯವೇ ಹೆಚ್ಚಾಗಿರುತ್ತದೆ ಎನ್ನುತ್ತಾರೆ ರೈತರು.

ಕಸಬಾ ಹೋಬಳಿ, ನಗರಸಭೆ ವ್ಯಾಪ್ತಿಯ ನಗರದ ಅಂಚಿನಲ್ಲಿ ಸಾಕಾಣಿಕೆ ಮಾಡಿರುವ ಹಸುಗಳಲ್ಲಿಯೇ ಈ ಬಾರಿ ಹೆಚ್ಚಾಗಿ ಕಾಲುಬಾಯಿ ರೋಗ ಕಾಣಿಸಿಕೊಂಡಿದೆ. ಕೋವಿಡ್‌ ಎರಡನೇ ಅಲೆಯಲ್ಲಿ ಸೋಂಕು ಗ್ರಾಮೀಣ ಪ್ರದೇಶದಲ್ಲೇ ಹೆಚ್ಚಾಗಿರುವುದರಿಂದ ಪಶು ವೈದ್ಯರು ಗ್ರಾಮಗಳಿಗೆ ಭೇಟಿ ನೀಡಿ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಕಾಲುಬಾಯಿ ರೋಗಕ್ಕೆ ತುತ್ತಾಗಿರುವ ರಾಸುಗಳು ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ನರಳುವಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು