ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಮಿಯಾನ ಹಾಕುವಾಗ ದುರ್ಘಟನೆ: ವಿದ್ಯುತ್ ತಗುಲಿ ನಾಲ್ವರು ಕಾರ್ಮಿಕರ ಸಾವು

Last Updated 7 ಏಪ್ರಿಲ್ 2021, 20:08 IST
ಅಕ್ಷರ ಗಾತ್ರ

ಆನೇಕಲ್: ತಾಲ್ಲೂಕಿನ ಇಂಡ್ಲಬೆಲೆ ಬಳಿ ಬುಧವಾರ ಅಪಾರ್ಟ್‌ಮೆಂಟ್‌ ನಿರ್ಮಾಣದ ಭೂಮಿಪೂಜೆಗಾಗಿ ಶಾಮಿಯಾನ ಹಾಕುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್‌ ತಗುಲಿ ನಾಲ್ವರು ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೃತ ಕಾರ್ಮಿಕರನ್ನು ಕಲಬುರ್ಗಿಯ ಆಕಾಶ್‌ (30), ಚಾಮರಾಜನಗರ ಜಿಲ್ಲೆಯ ಹನೂರಿನ ಮಾದೇಶ್‌ (35), ಟಿ. ನರಸೀಪುರದ ವಿಷಕಂಠ (35) ಮತ್ತು ಜಾರ್ಖಂಡ್‌ ಮೂಲದ ವಿಜಯ್‌ ಸಿಂಗ್ ‌(30) ಎಂದು ಗುರುತಿಸಲಾಗಿದೆ.

ಕಲಬುರ್ಗಿಯ ಅರುಣ್‌ಕುಮಾರ್ ‌(20), ಬೀರಣ್ಣ (19), ಬಿಹಾರದ ದೀಪಕ್‌ಕುಮಾರ್‌ (20) ಜಾರ್ಖಂಡ್‌ನ ವಿಷ್ಣುಕುಮಾರ್‌ (19) ಮತ್ತು ಗುರುದೇವ್‌ (25) ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಉಷಾಕಿರಣ ಟೆಂಟ್‌ಹೌಸ್‌‌ ಮಾಲೀಕ ಜಗದೀಶ್‌ ಮತ್ತು ಅಪಾರ್ಟ್‌ಮೆಂಟ್‌ ಸೈಟ್‌ ಎಂಜಿನಿಯರ್‌ ರಾಮಕುಮಾರ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಗೆ ಕಾರಣ ಏನು?: ಇಂಡ್ಲಬೆಲೆ ಬಳಿ ಜಿ.ಆರ್. ಸಂಸ್ಕೃತಿ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನಿಗದಿಯಾಗಿತ್ತು. ಕನ್ನಲ್ಲಿಯ ಉಷಾಕಿರಣ್‌ ಟೆಂಟ್‌ಹೌಸ್‌ಗೆ ಶಾಮಿಯಾನ ಹಾಕುವ ಕೆಲಸ ವಹಿಸಲಾಗಿತ್ತು. ಶಾಮಿಯಾನ ಹಾಕಿ ವೇದಿಕೆ ಸಿದ್ಧಪಡಿಸುವ ಸಂದರ್ಭದಲ್ಲಿ ಶಾಮಿಯಾನದ ಕಬ್ಬಿಣದ ಕಂಬವೊಂದು ಆಕಸ್ಮಿಕವಾಗಿ ವಿದ್ಯುತ್‌ ತಂತಿಗೆ ತಗುಲಿದೆ. ಕಂಬದಲ್ಲಿ ವಿದ್ಯುತ್‌ ಪ್ರವಹಿಸಿದ ಕಾರಣ ಅದನ್ನು ಹಿಡಿದಿದ್ದ ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಜತೆ ಕೆಲಸ ಮಾಡುತ್ತಿದ್ದ ಉಳಿದ ಐವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಶಾಮಿಯಾನ ಹಾಕುತ್ತಿದ್ದ ಸ್ಥಳದ ಮೇಲ್ಭಾಗದಲ್ಲಿ 66:11 ಕೆ.ವಿ ವಿದ್ಯುತ್‌ ಲೈನ್‌ ಹಾದುಹೋಗಿತ್ತು. ಕಾರ್ಮಿಕರು ವೇದಿಕೆ ಸಿದ್ಧಪಡಿಸುವ ಭರದಲ್ಲಿ ವಿದ್ಯುತ್‌ ತಂತಿಯ ಬಗ್ಗೆ ಗಮನಹರಿಸದಿರುವುದು ಈ ಅವಘಡಕ್ಕೆ ಕಾರಣ’ ಎಂದು ಅತ್ತಿಬೆಲೆ ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ವಲಯ ಐಜಿಪಿ ಚಂದ್ರಶೇಖರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್‌, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀ ಗಣೇಶ್, ತಹಶೀಲ್ದಾರ್ ಪಿ. ದಿನೇಶ್‌, ಡಿವೈಎಸ್‌ಪಿ ಡಾ.ಎಚ್.ಎಂ.ಮಹದೇವಪ್ಪ, ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ. ವಿಶ್ವನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.‌ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT