ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋನಾಳು ಗಲಭೆ: ಊರು ತೊರೆದ ರೈತರು

ವರುಣನ ಕೃಪೆ: ಆರಂಭವಾಗದ ಮುಂಗಾರು ಕೃಷಿ ಚಟುವಟಿಕೆ
Last Updated 12 ಜೂನ್ 2018, 10:25 IST
ಅಕ್ಷರ ಗಾತ್ರ

ಕಂಪ್ಲಿ: ‘ಈ ಬಾರಿ ಮಳೆ ಭೇಷ್‌ ಆಗೈತ್ರಿ. ನಾಲ್ಕು ಎಕ್ರೆ ಸ್ವಂತ ಭೂಮಿ ಐತ್ರಿ. ಆದ್ರೆ ಇನ್ನು ಮಾಗಿ ಉಳುಮೇನೆ ಮಾಡಿಲ್ಲ. ಯಾಕಂದ್ರೆ ಊರಾಗ ಗಲಾಟೆ ಆಗಿದ್ರಿಂದ ಇಬ್ಬರು ಮಕ್ಕಳು ಊರಾ ಬಿಟ್ಟಾರಿ’.

‘ನಮ್ಮ ಕುಟುಂಬ್‌ದವರೆಲ್ಲ ಕೂಲಿ ಮಾಡಿ ಜೀವ್ನ ಮಾಡ್ತೀವ್ರಿ. ಈ ಊರಾಗ ಮಳೆ ಭೇಷ್‌ ಆಗಿದ್ರೂ ಹೊಲದ ಕೆಲ್ಸಕ್ಕ ಯಾರೂ ಹೋಗಿಲ್ಲ. ಏಕಂದ್ರ ಈ ಊರಾಗ ಒಬ್ಬರಿಗೊಬ್ಬರು ಬಡದಾಡಿಕೊಂಡು ಊರು ಬಿಟ್ಟಾರ್ರಿ. ಇದ್ರಿಂದ ನಮಗೆ ಕೂಲಿ ಕೆಲ್ಸ ಇಲ್ಲದಂಗ ಆಗಿ ಜೀವ್ನ ಭಾಳಾ ತ್ರಾಸ್‌ ಆಗೈತ್ರಿ. ಹೆಂಗೋ ಸರ್ಕಾರದೋರು ಅಕ್ಕಿ ಕೊಡ್ತಾರ, ತವರು ಮನೆಯವರು ಒಂದಿಷ್ಟು ಅಕ್ಕಿ ಕಳಿಸ್ಯಾರ. ಅದ್ರಿಂದ ಸದ್ಯ ಹೊಟ್ಟೆಗೆ ಏನ್‌ ತೊಂದ್ರೆ ಇಲ್ಲ’.

‘ಗಣಮಕ್ಳು ಬರೋತನಕ ಹೊಲ್ದಕಾ ಎಲ್ಲಿ ಹೋಗನ್ರಿ. ಅವರು ಬಂದ ಮ್ಯಾಲೆ ಹೊಲ ಹಸನು ಮಾಡಿಕೊಂಡು ನೆಲ್ಲು ಸಸಿ ಹಚ್ಚಾಕ (ನಾಟಿ) ರೆಡಿ ಮಾಡಿಕ್ಯಾಬೇಕ್ರಿ’.

ತಾಲ್ಲೂಕಿನ ಗೋನಾಳು ಗ್ರಾಮದಲ್ಲಿ ಮೇ 25ರಂದು ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ನಂತರ ಬಹುತೇಕ ರೈತರು ಗ್ರಾಮ ತೊರೆದಿದ್ದು, ಸಂಪೂರ್ಣ ನೀರಾವರಿ ಪ್ರದೇಶದಿಂದ ಆವೃತವಾದ ಈ ಭಾಗದಲ್ಲಿ ಇನ್ನೂ ಕೃಷಿ ಚಟುವಟಿಕೆಗಳು ಆರಂಭವಾಗಿಲ್ಲ. ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ರೈತ ಕೆ. ಸೋಮಪ್ಪ ಮತ್ತು ಕೂಲಿಕಾರ ಮಹಿಳೆ ಹರಿಜನ ಶಕುಂತಲಾ, ಹುಲಿಗೆಮ್ಮ, ಎಚ್. ಮಂಗಮ್ಮ ತಮ್ಮ ಮನದಾಳದ ನೋವನ್ನು ಹೊರ ಹಾಕಿದರು.

ಗ್ರಾಮ ಭೌಗೋಳಿಕವಾಗಿ 1774 ಎಕರೆ ವಿಸ್ತೀರ್ಣ ಹೊಂದಿದೆ. ಇದರಲ್ಲಿ 482 ರೈತರ 1646 ಎಕರೆ ಪಟ್ಟಾ ಭೂಮಿ ಇದ್ದು, ತುಂಗಭದ್ರಾ ಬಲದಂಡೆ ಮೇಲ್ಮಟ್ಟ ಮತ್ತು ಕೆಳಮಟ್ಟದ ಕಾಲುವೆ ಹಾಗೂ ದರೋಜಿ ಕೆರೆಯಿಂದ ನೀರು ದೊರೆಯುತ್ತದೆ.

ಇಡೀ ಗ್ರಾಮವೇ ಕೃಷಿಯನ್ನೆ ನೆಚ್ಚಿಕೊಂಡು ಬದುಕು ಸಾಗಿಸುತ್ತದೆ. ಹೆಚ್ಚಾಗಿ ಭತ್ತ, ಮೆಣಸಿಕಾಯಿ, ಮುಸುಕಿನಜೋಳವನ್ನು ರೈತರು ಬೆಳೆಯುತ್ತಾರೆ. ಆದರೆ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ನಡೆದ ಜಗಳ ಇಡೀ ಊರಿಗೆ ವ್ಯಾಪಿಸಿ ಇಂದು ಗ್ರಾಮದ 186 ಮನೆಗಳಲ್ಲಿ 60ಕ್ಕೂ ಹೆಚ್ಚು ಮನೆಗಳಿಗೆ ಬೀಗ ಹಾಕಿದ್ದರಿಂದ ಕೃಷಿ ಭೂಮಿಯಲ್ಲಿ ಮಾಗಿ ಉಳುಮೆಯೇ ಮಾಯಾವಾಗಿದೆ.
‘ಗ್ರಾಮ ಸಹಜ ಸ್ಥಿತಿಗೆ ಮರಳಲು ಪೊಲೀಸ್‌ ಇಲಾಖೆ ಮತ್ತು ಜಿಲ್ಲಾಡಳಿತ ಶಾಂತಿ ಸಭೆ, ಸಾಮರಸ್ಯಕ್ಕಾಗಿ ಪಾದಯಾತ್ರೆ ನಡೆಸಿದೆ. ಘಟನೆ ನಡೆದ ದಿನಕ್ಕೂ ಸದ್ಯದ ಪರಿಸ್ಥಿತಿಗೂ ಹೋಲಿಸಿದರೆ ಗ್ರಾಮ ತೊರೆದ ಕೆಲವರು ಮರಳಿ ಬಂದಿದ್ದಾರೆ. ಕೆಲ ದಿನಗಳಲ್ಲಿ ಎಲ್ಲರೂ ನೈಜ ಜೀವನ ಕಟ್ಟಿಕೊಳ್ಳಲಿದ್ದಾರೆ’ ಎಂದು ತಹಶೀಲ್ದಾರ್‌ ಶರಣವ್ವ ತಿಳಿಸಿದರು.

ಪಂಡಿತಾರಾಧ್ಯ ಎಚ್‌.ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT