ತಾಲ್ಲೂಕಿನಾದ್ಯಂತ ಉಚಿತವಾಗಿ ಲಸಿಕೆ

ದೊಡ್ಡಬಳ್ಳಾಪುರ: ಕಾಲುಬಾಯಿ ರೋಗ ಬಾರದಂತೆ ತಡೆಗಟ್ಟುವ ಸಲುವಾಗಿ ಪಶುಪಾಲನಾ ಇಲಾಖೆ ಹಾಗೂ ಬಮೂಲ್ ಸಹಕಾರದೊಂದಿಗೆ ಆರಂಭವಾಗಿರುವ ರಾಷ್ಟ್ರೀಯ ಕಾಲುಬಾಯಿ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ರೈತರು ಮುಂಜಾಗ್ರತರಾಗಿ ಲಸಿಕೆ ಹಾಕಿಸಿದರೆ ರಾಸುಗಳು ಜ್ವರಕ್ಕೆ ತುತ್ತಾಗುವುದು ತಪ್ಪಲಿದೆ ಎಂದು ಬಮೂಲ್ ನಿರ್ದೇಶಕ ಎಚ್.ಅಪ್ಪಯ್ಯ ಹೇಳಿದರು.
ತಾಲ್ಲೂಕಿನ ನೇರಳೆಘಟ್ಟ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಬಮೂಲ್ ಸಹಕಾರದೊಂದಿಗೆ ಆರಂಭವಾಗಿರುವ ಲಸಿಕಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಮೂಲ್ ಹಾಗೂ ಪಶುಸಂಗೋಪನೆ ಇಲಾಖೆ ಸಹಯೋಗದಲ್ಲಿ ಫೆ.16ರವರೆಗೆ ತಾಲ್ಲೂಕಿನಾದ್ಯಂತ ಉಚಿತವಾಗಿ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ. ತಾಲ್ಲೂಕಿನ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಕಾಲುಬಾಯಿ ಸಂಪೂರ್ಣವಾಗಿ ನಿಯಂತ್ರಿಸಲು ಸಾಮೂಹಿಕವಾಗಿ ಎಲ್ಲ ರಾಸುಗಳಿಗೂ ಮುಂಜಾಗ್ರತವಾಗಿ ಲಸಿಕೆ ಹಾಕಿಸಬೇಕು. ಏಕ ಕಾಲಕ್ಕೆ ಇಡೀ ತಾಲ್ಲೂಕಿನ ಎಲ್ಲ ಹೋಬಳಿಗಳಲ್ಲೂ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತರು ಸೂಕ್ತ ಸಮಯಕ್ಕೆ ಗ್ರಾಮಗಳಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಬಳಿಗೆ ರಾಸುಗಳನ್ನು ಕರೆತಂದು ಲಸಿಕೆ ಹಾಕಿಸುವಂತೆ ಮನವಿ ಮಾಡಿದರು.
ತಾಲ್ಲೂಕು ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ರಾಜೇಂದ್ರ ಮಾತನಾಡಿ, ಕಾಲುಬಾಯಿ ರೋಗಕ್ಕೆ ಸಿಲುಕಿದ ರಾಸುಗಳಲ್ಲಿ ವಿಪರೀತ ಜ್ವರ ಕಾಣಿಸಿಕೊಳ್ಳಲಿದೆ. ನಾಲಿಗೆ ಮೇಲ್ಪದರ ಒಸಡುಗಳು ಒಡೆಯುವುದರಿಂದ ಮೇವು ತಿನ್ನಲು ಸಾಧ್ಯವಾಗುವುದಿಲ್ಲ. ಕಾಲಿನ ಗೊರಸು ಒಡೆದು ಹುಳುಗಳು ಬೀಳಲಿದೆ. ಇದರಿಂದ ರಾಸುಗಳು ನಡೆಯಲಾರದ ಪರಿಸ್ಥಿತಿಗೆ ತಲುಪಿ ನಿತ್ರಾಣಗೊಳ್ಳಲಿವೆ. ವಕಾಲುಬಾಯಿ ರೋಗ ಮಾರಣಾಂತಿಕವಾಗಿದ್ದು ರೋಗ ಪೀಡಿತ ರಾಸುಗಳು ಮೃತಪಡುವುದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತದೆ ಎಂದರು.
ರೋಗ ನಿಯಂತ್ರಿಸಲು ರಾಷ್ಟ್ರಮಟ್ಟದಲ್ಲಿ ಪ್ರತಿವರ್ಷ ಎರಡು ಬಾರಿ ಲಸಿಕಾ ಅಭಿಯಾನ ಕೈಗೊಳ್ಳಲಾಗುತ್ತಿದೆ. ತಾಲ್ಲೂಕಿನಲ್ಲಿ 62 ಸಾವಿರ ಹಸುಗಳು, 8 ಸಾವಿರ ಎಮ್ಮೆಗಳು ಹಾಗೂ ಹಂದಿಗಳಿಗೆ ಕಾಲುಬಾಯಿ ಲಸಿಕೆ ಹಾಕುವ ಗುರಿ ಹೊಂದಾಗಿದೆ. ಹೋಬಳಿಗೊಂದು ತಂಡ ರಚಿಸಲಾಗಿದೆ. ಬಮೂಲ್ ಸಹಕಾರದೊಂದಿಗೆ ನಡೆಸುತ್ತಿರುವ ಈ ಕಾರ್ಯಕ್ರಮದಲ್ಲಿ ರೈತರು ರಾಸುಗಳೊಂದಿಗೆ ಭಾಗವಹಿಸಿ ಲಸಿಕೆ ಹಾಕಿಸಬೇಕು ಎಂದರು.
ಬರಹ ಇಷ್ಟವಾಯಿತೆ?
0
0
0
0
0
0 comments
View All