ಜಿ20 ಶೃಂಗಸಭೆಗೆ ರಂಗೇರಿದ ದೇವನಹಳ್ಳಿ

ದೇವನಹಳ್ಳಿ: ‘ಇಲ್ಲಿನ ನಂದಿ ಬೆಟ್ಟದ ರಸ್ತೆಯಲ್ಲಿರುವ ಜೆ ಡಬ್ಲೂ ಮ್ಯಾರಿಯೇಟ್ ಹೋಟೆಲ್‌ನಲ್ಲಿ ಇಂದಿನಿಂದ ನಡೆಯಲಿರುವ
ಜಿ20 ಶೃಂಗ ಸಭೆಗೆ ಕಳೆದೊಂದು ತಿಂಗಳಿಂದ ಭರ್ಜರಿ ತಯಾರಿ ನಡೆಯುತ್ತಿದ್ದು, ಈಗಾಗಲೇ ಸಾಕಷ್ಟು ವಿದೇಶಿ ಗಣ್ಯರು ಆಗಮಿಸಿದ್ದಾರೆ. ಸ್ಥಳೀಯ ಸಂಸ್ಕೃತಿಕ ವೈಭವನ ಆತಿಥ್ಯ ಪಡೆಯುತ್ತಿದ್ದಾರೆ.
ನಂದಿ ಉಪಚಾರ್ ವೃತ್ತದಿಂದ ಹೊಟೇಲ್‌ನ ಮಾರ್ಗವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಟು ಮಾಡಲಾಗಿದ್ದು, ಭದ್ರತೆ ದೃಷ್ಟಿಯಿಂದ 700ಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಒಟ್ಟು 6 ಕಡೆಯಲ್ಲಿ ಪೊಲೀಸ್ ಚೆಕ್ ಪೋಸ್ಟ್ ಅನ್ನು ತಾತ್ಕಲಿಕವಾಗಿ ನಿರ್ಮಿಸಿದ್ದು, ಪ್ರತಿಯೊಂದು ವಾಹನಗಳ ತಪಾಸಣೆ ಮಾಡಲಾಗುತ್ತಿದೆ.
ಅತಿಥಿಗಳನ್ನು ಸ್ವಾಗತಿಸಲು ಬೇಲೂರು ಹಳೇಬೀಡಿನ ಶಿಲ್ಪ ಸೌಂದರ್ಯ ಹೊಲುವ, ಹೊಯ್ಸಳ ಕಲಾಕೃತಿ ಒಳಗೊಂಡಿರುವ ಮೂರು ಮಹಾದ್ವಾರ ನಿರ್ಮಿಸಲಾಗಿದೆ. ರಾಯಭಾರಿಗಳಿಗೆ ಸ್ವಾಗತಿ ಕೋರಲಾಗುತ್ತಿದೆ.
ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ‘ಒಂದು ರಾಜ್ಯ ಹಲವು ಜಗತ್ತು’ ಎಂಬ ಧ್ಯೇಯದೊಂದಿಗೆ ಪ್ರಸಿದ್ಧ ಐತಿಹಾಸಿಕ ರಮಣೀಯ ತಾಣಗಳ ಕುರಿತು, ಇಲ್ಲಿನ ಕಲೆ, ನೃತ್ಯದ ಪರಿಚಯ ಮಾಡಿಕೊಡಲು ಸಾಕಷ್ಟು ಪ್ರಚಾರದ ಕೆಲಸವೂ ಆಗುತ್ತಿದೆ. ಇನ್ನೊಂದೆಡೆ ಕೊನೆ ಕ್ಷಣದ ವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಇರುವ ಮರಗಳಿಗೆ ಕೆಂಪು, ಬಿಳಿ ಬಣ್ಣವನ್ನು ಬೆಳೆದು ಶೃಂಗಾರ ಮಾಡಲಾಗುತ್ತಿದೆ.
ವಿದೇಶಿ ರಾಯಭಾರಿಗಳ ಓಡಾಟಕ್ಕೆ ತೊಂದರೆಯಾಗಬಾರದು ಎಂದು ತರಾತುರಿಯಲ್ಲಿ ಹಾಕಿದ್ದ ರಸ್ತೆ ಡಾಂಬರು ಮಳೆಯಿಂದಾಗಿ ಕಿತ್ತು ಕೆಲವೆಡೆ ಗುಂಡಿಗಳು ಬಿದ್ದಿವೆ. ಇನ್ನೂ ಸ್ಚಚ್ಚತಾ ಕಾರ್ಯವನ್ನು ಎಡಬಿಡದೆ ಮಾಡುತ್ತಿರುವ ಪೌರಕಾರ್ಮಿಕರು ರಸ್ತೆ ಬದಿಯಲ್ಲಿನ ಕಸವನ್ನು ಸಾಗಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಣ್ಣದೊಂದು ಪ್ಲಾಸ್ಟಿಕ್ ದೊರೆತರು ಅದನ್ನು ತೆಗೆಯಲು ಹೆಚ್ಚುವರಿ ಸಿಬ್ಬಂದಿಯನ್ನು ಇತರೇ ಪಂಚಾಯಿತಿ, ಪುರಸಭೆಗಳಿಂದ ನಿಯೋಜನೆ ಮಾಡಲಾಗಿದ್ದು, ವಿಮಾನ ನಿಲ್ದಾಣದಿಂದ ದೇವನಹಳ್ಳಿಯನ್ನು ಒಪ್ಪ ಮಾಡುವ ಕೆಲಸವಂತೂ ಹಗಲು ರಾತ್ರಿ ನಡೆಯುತ್ತಲೇ ಇದೆ. ಯುರೋಪಿಯನ್ ಒಕ್ಕೂಟದ 40 ದೇಶಗಳಿಂದ ಗಣ್ಯರು ಆಗಮಿಸಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.