ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಿಂಸಾತ್ಮಕ ಹೋರಾಟ ಇಂದಿಗೂ ಪ್ರಸ್ತುತ

Last Updated 2 ಅಕ್ಟೋಬರ್ 2018, 14:10 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಮಹಾತ್ಮ ಗಾಂಧಿ ಹಾಗೂ ಲಾಲ್‍ ಬಹದ್ದೂರ್ ಶಾಸ್ತ್ರಿ ಅವರ ಆದರ್ಶಗುಣಗಳು ಪ್ರತಿಯೊಬ್ಬರಿಗೂ ಪ್ರೇರಣೆಯನ್ನಾಗಿಸಿಕೊಳ್ಳಬೇಕು ತಹಶೀಲ್ದಾರ್ ಬಿ.ಎ.ಮೋಹನ್ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ’ಯಲ್ಲಿ ಮಾತನಾಡಿದರು.

ರಕ್ತ ಕ್ರಾಂತಿಯ ಮೂಲಕ ಸ್ವಾತಂತ್ರ್ಯ ಪಡೆಯುತ್ತಿರುವ ಸಂದರ್ಭದಲ್ಲಿ ಅಹಿಂಸಾತ್ಮಕ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಮಾದರಿ ಇಡೀ ವಿಶ್ವದಲ್ಲಿಯೇ ಹೆಸರಾಗಿದೆ. ಜಾಗತೀಕರಣದ ಇಂದಿನ ದಿನಗಳಲ್ಲಿ ದೇಶಗಳು ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಗಾಂಧೀಜಿ ಅವರ ಅಹಿಂಸಾತ್ಮಕ ಹೋರಾಟ ಮತ್ತೆ ಪ್ರಸ್ತುತವಾಗುತ್ತಿದೆ ಎಂದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮೀನಾಕ್ಷಿಕೆಂಪಣ್ಣ, ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮೀನಟರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ರಂಗಪ್ಪ, ವಿವಿಧ ಸಂಘಟನೆಗಳ ಮುಖಂಡರು, ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಬಟ್ಟೆ ಕೈ ಚೀಲಗಳ ವಿತರಣೆ: ಗಾಂಧಿಜಯಂತಿ ಅಂಗವಾಗಿ ನಗರದ ವಾಸವಿ ಯುವಜನ ಸಂಘದ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಾರ್ವಜನಿಕರಿಗೆ ಸಿಹಿ ವಿತರಿಸಿದರು. ಈ ವೇಳೆ ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಮೂಡಿಸುವುದಕ್ಕಾಗಿ ಬಟ್ಟೆ ಕೈ ಚೀಲಗಳನ್ನು ಸಾರ್ವಜನಿಕರಿಗೆ ವಿತರಿಸಿ, ಪ್ಲಾಸ್ಟಿಕ್ ತ್ಯಜಿಸುವಂತೆ ವಿನಂತಿಸಿದರು.

ಹಿರಿಯ ಪತ್ರಕರ್ತ ಎಂ.ಜೆ.ರಾಜಶೇಖರ್ ಶೆಟ್ಟಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರಕಲು ಮಹಾತ್ಮಗಾಂಧಿಯವರು ನಡೆಸಿರುವ ಹೋರಾಟ ಪ್ರಧಾನಿಯಾಗಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ದಿಟ್ಟತನವನ್ನು ಪ್ರತಿಯೊಬ್ಬರು ಅರಿಯಬೇಕಿದೆ. ಇಂತಹ ಆಚರಣೆಗಳು ಕೇವಲ ಸರ್ಕಾರಿ ಕಾರ್ಯಕ್ರಮಗಳಾಗಿರದೆ ಮನೆಮನೆಯ ಹಬ್ಬವಾಗಿರಬೇಕು. ಇಡೀ ಜಗತ್ತೇ ಮೆಚ್ಚಿದ ವ್ಯಕ್ತಿ ಗಾಂಧೀಜಿ ಎಂದರು.

ವಾಸವಿ ಯುವಜನ ಸಂಘದ ಪ್ರಧಾನ ಕಾರ್ಯದರ್ಶಿ ಎಲ್.ಎನ್.ಮಹೇಶ್, ಜಂಟಿ ಕಾರ್ಯದರ್ಶಿ ಎಂ.ಆರ್.ರಂಜಿತ್ ಕುಮಾರ್, ಖಜಾಂಚಿ ಸಿ.ಎನ್.ಶ್ರೀನಿವಾಸ್, ಜಂಟಿ ಖಜಾಂಚಿ ಕೆ.ಪಿ.ರಘುನಂದನ್ ಹಾಗೂ ನಿರ್ದೇಶಕರಾದ ಲತೀಶ್ ಬಾಬು, ಡಿ.ವಿ.ಶ್ರೀನಿವಾಸ್, ಸಿ.ವಿ.ಚಿರಾಗ್, ಎ.ಪಿ.ಪವನ್,ಎ.ಎಸ್. ಸಂತೋಷ್, ಎಂ.ವಿ.ಆದರ್ಶ್ ಹಾಗೂ ಆರ್ಯವೈಶ್ಯ ಮಂಡಳಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

ರಾಮಣ್ಣ ಬಾವಿ ಸ್ವಚ್ಛತೆ: ನಗರದ ಖಾಸ್‍ಬಾಗ್ ದರ್ಗಾಪುರದ ಶ್ರೀರಾಮ ಯುವಕರ ಬಳಗ, ಡಾ.ರಾಜ್‍ಕುಮಾರ್ ಅಭಿಮಾನಿ ಬಳಗ, ಪವರ್‍ಸ್ಟಾರ್ ಪುನೀತ್ ಬಾಯ್ಸ್ ನೇತೃತ್ವದಲ್ಲಿ ಗಾಂಧಿ ಜಯಂತಿ ಅಂಗವಾಗಿ ಪುರಾತನ ರಾಮಣ್ಣ ಬಾವಿ ಸ್ವಚ್ಛತೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರಸಭಾ ಸದಸ್ಯ ಕೆ.ಬಿ.ಮುದ್ದಪ್ಪ, ಸ್ವಚ್ಛತೆಯ ಮೂಲಕ ಗಾಂಧೀಜಯಂತಿ ಆಚರಣೆ ಮಾಡುತ್ತಿರುವ ಯುವ ಸಮುದಾಯದ ಕಾರ್ಯ ಶ್ಲಾಘನೀಯ. ಎಲ್ಲರಿಗೂ ಇದು ಮಾದರಿಯಾಗಬೇಕು ಎಂದರು.

ಶಾಲಾ ಕಾಲೇಜುಗಳಲ್ಲಿ: ತಾಲ್ಲೂಕಿನ ಮೆಳೇಕೋಟೆ ಕ್ರಾಸ್ ಎಸ್.ಜೆ.ಸಿ.ಆರ್.ವಿದ್ಯಾನಿಕೇತನ ಶಾಲೆಯಲ್ಲಿ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಜಯಂತ್ಯುತ್ಸವ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಶ್ರಮದಾನ ಹಾಗೂ ಸ್ವಚ್ಚತಾ ಆಂದೋಲನ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.

ಶಾಲಾ ಮಕ್ಕಳಿಂದ ಭಜನೆ ಕಾರ್ಯಕ್ರಮ ನಡೆಯಿತು. ನಾಗರಾಜ ಶಾಸ್ತ್ರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗಾಂಧೀಜಿ ಬದುಕಿನ ಬಗ್ಗೆ ಮಾತನಾಡಿದರು.ಮುಖ್ಯಶಿಕ್ಷಕ ಎಸ್.ವೆಂಕಟೇಶಪ್ಪ ಅಧ್ಯಕ್ಷತೆವಹಿಸಿದ್ದರು. ಸಹ ಮುಖ್ಯಶಿಕ್ಷಕ ಎಚ್.ಎಲ್.ವಿಜಯಕುಮಾರ್ ಇದ್ದರು.

ಸರಸ್ವತಿ ಶಾಲೆಯಲ್ಲಿ: ನಗರದ ಸರಸ್ವತಿ ಶಾಲೆಯಲ್ಲಿ ಮಕ್ಕಳಿಂದ ದೇಶಭಕ್ತಿಗೀತಗಾಯನ ಹಾಗೂ ಮಹಾನ್ ದೇಶ ಭಕ್ತರ ವೇಷಭೂಷಣಗಳು ಗಮನ ಸೆಳೆದವು. ಗಾಂಧೀಜಿಗೆ ಹೆಚ್ಚು ಪ್ರಿಯವಾದ ರಾಮಭಜನೆಯನ್ನು ಮಕ್ಕಳು ಹಾಡಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಎ.ಸುಬ್ರಮಣ್ಯ, ಕಾರ್ಯದರ್ಶಿ ಮಂಜುಳಾ,ಮುಖ್ಯಶಿಕ್ಷಕ ಬಿ.ಕೆ.ಸಂಪತ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT