ಸೋಮವಾರ, ಜನವರಿ 17, 2022
19 °C
ಚಿಗರೇನಹಳ್ಳಿ ಕಸ ವಿಲೇವಾರಿ ಘಟಕ ಬಂದ್‌ಗೆ ಕನ್ನಡಪರ ಸಂಘಟನೆಗಳ ಆಗ್ರಹ

ಕಸ: ಹೋರಾಟಕ್ಕೆ ಮತ್ತಷ್ಟು ಕಸುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಚಿಗರೇನಹಳ್ಳಿ ಎಂಎಸ್‍ಜಿಪಿ ಕಸ ವಿಲೇವಾರಿ ಘಟಕದ ವಿರುದ್ಧ ನಡೆಯುತ್ತಿದ್ದ ಹೋರಾಟ ಮತ್ತೊಂದು ತಿರುವ ಪಡೆದುಕೊಂಡಿದೆ. ಎಂಎಸ್‍ಜಿಪಿಯನ್ನು ತಾಲ್ಲೂಕಿನಿಂದ ಶಾಶ್ವತವಾಗಿ ಹೊರಕಳುಹಿಸಲು ಕನ್ನಡ ಪರ, ದಲಿತ ಪರ, ರೈತ ಪರ ಸಂಘಟನೆಗಳು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಂಜೆ ನಡೆದ ಸಭೆಯಲ್ಲಿ ಬೆಂಬಲ ಘೋಷಿಸಿವೆ.

ನವ ಬೆಂಗಳೂರು ಹೋರಾಟ ಸಮಿತಿ ವತಿಯಿಂದ 13 ದಿನಗಳ ನಿರಂತರ ಹೋರಾಟವನ್ನು ಜಿಲ್ಲಾ ಉಸ್ತುವಾರಿ ಸಚಿವರ ಭರವಸೆಯಂತೆ ತಾತ್ಕಾಲಿಕವಾಗಿ ಹೋರಾಟವನ್ನು ಹಿಂದಕ್ಕೆ ಪಡೆದ್ದವು. ಆದರೆ ಸರ್ಕಾರ ಪೊಲೀಸ್ ಬೆಂಗಾವಲಿನಲ್ಲಿ ಮತ್ತೆ ಕಸವನ್ನು ಸುರಿಯಲು ಆರಂಭ ಮಾಡಲಾಗಿದೆ. ಈ ಹಿನ್ನೆಲೆ ಮತ್ತೆ ಹೋರಾಟ ಹೊಸ ತಿರುವಿನೊಂದಿಗೆ ಚುರುಕು ಪಡೆದುಕೊಳ್ಳುತ್ತಿದೆ.

ಸಭೆಯಲ್ಲಿ ಮಾತನಾಡಿದ ನವ ಬೆಂಗಳೂರು ಹೋರಾಟ ಸಮಿತಿ ಗೌರವ ಅಧ್ಯಕ್ಷ ಕೆ.ವಿ.ಸತ್ಯಪ್ರಕಾಶ್, ‘ಚಳಿಗಾಲದ ಅಧಿವೇಶನ ಮುಗಿದ ನಂತರ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಸಭೆ ನಡೆಸಿ ಕಸ ನಿಲ್ಲಿಸುವ ನಿರ್ಧಾರದ ಕುರಿತು ಮಾತನಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜು ಭರವಸೆ ನೀಡದ ನಂತರ ಹೋರಾಟವನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿತ್ತು. ಆದರೆ ಮಾತಿಗೆ ತಪ್ಪಿರುವ ಸರ್ಕಾರ ಕಸವನ್ನು ಮತ್ತೆ ಸುರಿಯಲು ಆರಂಭಿಸಿದೆ. ಈ ನಿಟ್ಟಿನಲ್ಲಿ ಈ ವ್ಯಾಪ್ತಿಯ 100ಕ್ಕೂ ಹೆಚ್ಚು ಹಳ್ಳಿ ಜನ ಆಕ್ರೋಶಕ್ಕೆ ಒಳಗಾಗಿದ್ದು, ತಮ್ಮ ಮನೆ ಮಕ್ಕಳು, ಕುರಿ, ಮೇಕೆ, ಜಾನುವಾರುಗಳೊಂದಿಗೆ ಬೀದಿಗೆ ಇಳಿದು ಹೋರಾಟಕ್ಕೆ ಸಜ್ಜಾಗಿದ್ದಾರೆ. ಈಗಲೂ ಸರ್ಕಾರ ಎಚ್ಚುತ್ತುಕೊಳ್ಳುದಿದ್ದರೆ. ಇದಕ್ಕೆ ನೇರ ಹೊಣೆ ಸರ್ಕಾರ, ಜಿಲ್ಲಾಡಳಿ, ಬಿಬಿಎಂಪಿ ಕಮೀಷನರ್ ಸರ್ಫರಾಜ್‌ಖಾನ್ ನೇರ ಹೊಣೆಯಾಗಿರುತ್ತಾರೆ’ ಎಂದು ನೇರ ಎಚ್ಚರಿಕೆ ನೀಡಿದರು.

ಸಚಿವ ಮಾಧುಸ್ವಾಮಿ ಹೇಳಿಕೆಗೆ ಆಕ್ರೋಶ: ‘ಅಧಿವೇಶನದಲ್ಲಿ ಕ್ಷೇತ್ರದ ಶಾಸಕ ಟಿ.ವೆಂಕಟರಂಣಯ್ಯ ಅವರು ಎಂಎಸ್‍ಜಿಪಿ ಘಟಕದಿಂದ ಸ್ಥಳೀಯ ಜನರಿಗೆ ಆಗುತ್ತಿರುವ ಪರಿಣಾಮವನ್ನು ವಿವರಿಸಿ ಕಸವನ್ನು ನಿಲ್ಲಿಸುವಂತೆ ಆಗ್ರಹಿಸಿದ್ದರು. ಉತ್ತರ ನೀಡಿದ್ದ ಕಾನೂನು ಸಚಿವ ಮಾಧುಸ್ವಾಮಿ ಅವರು ‘ನಾನು ಕಸ ವಿಲೇವಾರಿ ಘಟಕವನ್ನು ವೀಕ್ಷಣೆ ಮಾಡಿದ್ದೇನೆ. ಮಾವತ್ತೂರು ಕೆರೆಗೆ ವಿಷಯುಕ್ತ ನೀರು ಹೋಗಿಯೇ ಇಲ್ಲ’ ಎಂದು ಹೇಳಿರುವ ಅವರಿಗೆ ಕಸ ವಿಲೇವಾರಿ ಘಟಕ ಎಲ್ಲಿದೆ ಎನ್ನುವುದೇ ಗೊತ್ತಿಲ್ಲ. ಕಸ ಒಂದು ದೊಡ್ಡ ಮಾಫಿಯಾ ಮಾಡಿಕೊಂಡಿರುವ ಇವರು ಬೆಂಗಳೂರಿನಲ್ಲಿ ನಾಯಿ ಕಚ್ಚಿದರೆ ಸಭೆ ಸೇರುತ್ತಾರೆ. ಇಲ್ಲಿನ ಕಸ ನಮ್ಮನ್ನು ಕೊಲ್ಲುತ್ತಿದ್ದರು ಬೆಂಗಳೂರಿನ ಕಸವನ್ನು ನಮ್ಮ ಗ್ರಾಮೀಣ ಪ್ರದೇಶಕ್ಕೆ ಸುರಿದು ನಮ್ಮನ್ನು ಸರ್ವ ನಾಶ ಮಾಡಲು ಹೊರಟಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಕನ್ನಡ ಪಕ್ಷ ಅಧ್ಯಕ್ಷ ಸಂಜೀವ್‍ನಾಯಕ್, ಕನ್ನಡ ಪರ ಹಿರಿಯ ಹೋರಾಟಗಾರ ತ.ನ.ಪ್ರಭುದೇವ್, ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಲಿಂಗಯ್ಯ, ನವ ಬೆಂಗಳೂರು ಹೋರಾಟ ಸಮಿತಿ ಅಧ್ಯಕ್ಷ ಜಿ.ಎನ್.ಪ್ರದೀಪ್, ಕರವೇ ನಾರಾಯಣಗೌಡ ಬಣದ ರಾಜ್ಯ ಕಾರ್ಮಿಕ ಸಂಘದ ಅಧ್ಯಕ್ಷ ಹನುಮಂತರೆಡ್ಡಿ, ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸು.ನರಸಿಂಹಮೂರ್ತಿ, ತಾಲ್ಲೂಕು ಅಧ್ಯಕ್ಷ ಡಿ.ಎನ್.ಮಂಜುನಾಥ್, ಕರವೇ ಕನ್ನಡಿಗರ ಬಣ ರಾಜ್ಯಾಧ್ಯಕ್ಷ ಬಿ.ಎಸ್.ಚಂದ್ರಶೇಖರ್, ತಾಲ್ಲೂಕು ಅಧ್ಯಕ್ಷ ತರಿದಾಳ್ ಶ್ರೀನಿವಾಸ್, ವಕೀಲರಾದ ಅಂಜನೇಗೌಡ, ಲೋಕೇಶ್, ಕಸಾಪ ಮಾಜಿ ತಾಲ್ಲೂಕು ಅಧ್ಯಕ್ಷೆ ಪ್ರಮೀಳಾ ಮಹದೇವ್, ಕನ್ನಡ ಪರ ಸಂಘನೆಗಳ ಒಕ್ಕೂಟದ ಅಗ್ನಿ ವೆಂಕಟೇಶ್, ಎ.ನಂಜಪ್ಪ ಸೇರಿದಂತೆ ಬಹುತೇಕ ಕನ್ನಡಪರ ಸಂಘಟನೆಗಳ ಮುಖಂಡರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.