ಮಂಗಳವಾರ, ಜನವರಿ 21, 2020
29 °C

ಘಾಟಿ: ವಿಜೃಂಭಣೆಯ ಬ್ರಹ್ಮ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು.

ರಾಜ್ಯದ ವಿವಿಧೆಡೆಗಳಿಂದ ಹಾಗೂ ನೆರೆ ರಾಜ್ಯಗಳಿಂದ ಬಂದಿದ್ದ ಸಹಸ್ರಾರು ಜನ ಭಕ್ತಾದಿಗಳು ರಥಕ್ಕೆ ಹೂವು, ಹಣ್ಣು ಸಮರ್ಪಿಸಿ ಧನ್ಯತೆ ಮೆರೆದರು.

ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆಯಲು ಬೆಳಗ್ಗಿನಿಂದ ಭಕ್ತಾದಿಗಳು ಸಾಲುಗಟ್ಟಿ ನಿಂತಿದ್ದರು. ಷಷ್ಠಿಯ ದಿನವಾದ ಕಾರಣ ಕ್ಷೇತ್ರದಲ್ಲಿರುವ ನಾಗರಕಲ್ಲುಗಳಿಗೆ ಭಕ್ತ ಸಮೂಹ ಹಾಲೆರೆದು ಪೂಜಿಸುತ್ತಿದ್ದುದು ಕಂಡುಬಂತು.

ಘಾಟಿ ರಥೋತ್ಸವಕ್ಕೆ ಹಣಬೆಯ ವಕೀಲರಾದ ಎಚ್.ವಿ.ಸುಬ್ರಹ್ಮಣ್ಯ, ಭಾನುಮತಿ ಅವರು ಸೇವಾರ್ಥವಾಗಿ ನೀಡಿದ್ದ ಹೂವಿನ ಅಲಂಕಾರ ವಿಶೇಷವಾಗಿತ್ತು.

ದೇವಾಲಯದಲ್ಲಿ ವಿಶೇಷ ಹೂವಿನ ಅಲಂಕಾರ, ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಯಾವುದೇ ತೊಂದರೆಗಳು ಆಗದಂತೆ ಮುಂಜಾಗ್ರತೆಯಾಗಿ ಸಿಸಿ ಟಿವಿ ಕ್ಯಾಮೆರಾಗಳ ಅಳವಡಿಕೆ, ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಹೊಸ ವರ್ಷದ ಮೊದಲ ದಿನವಾಗಿದ್ದರಿಂದ ರಥೋತ್ಸವಕ್ಕೆ ಪ್ರತಿ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದಿದ್ದರು.

ಬ್ರಹ್ಮ ರಥೋತ್ಸವದ ಅಂಗವಾಗಿ ದೊಡ್ಡಬಳ್ಳಾಪುರ ತಾಲ್ಲೂಕು ಖಾಸಗಿ ಬಸ್ ಮಾಲೀಕರು ಮತ್ತು ಕಾರ್ಮಿಕರ ಸಂಘ, ಮೋದಿ ಬಾಯ್ಸ್ ಹಾಗೂ ವ್ಯಾಪಾಸ್ಥರ ಸಹಕಾರದೊಂದಿಗೆ ಉಚಿತವಾಗಿ ಖಾಸಗಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿತ್ತು.

ರಥೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ದೊಡ್ಡಬಳ್ಳಾಪುರ, ಬೆಂಗಳೂರು ಕಡೆಗಳಿಂದ ರಾಜ್ಯ ಸಾರಿಗೆ ಸಂಸ್ಥೆ ವತಿಯಿಂದ ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಲಾಗಿತ್ತು. ರಥೋತ್ಸವದಲ್ಲಿ ಶಾಸಕರಾದ ಟಿ.ವೆಂಕಟರಮಣಯ್ಯ, ನಿಸರ್ಗ ನಾರಾಯಣಸ್ವಾಮಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)