ಶನಿವಾರ, ಜನವರಿ 28, 2023
24 °C
ಬೆಟ್ಟಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರಿಗೆ ಸನ್ಮಾನ

ಹೆಣ್ಣು ಮಕ್ಕಳಿಗೆ ಸಮಾನ ಗೌರವ ನೀಡಿ: ಶರಣಪ್ಪ ಕಂಬಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ‘ಸಾಮಾಜಿಕ ತಾರತಮ್ಯಗಳು ತೊಲಗಬೇಕಾದರೆ ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಸಮಾನ ಗೌರವ ದೊರೆಯಬೇಕಿದೆ’ ಎಂದು ಶಿಕ್ಷಣ ತಜ್ಞ ಶರಣಪ್ಪ ಕಂಬಳಿ ಹೇಳಿದರು.

ತಾಲ್ಲೂಕಿನ ಸೂಲಿಬೆಲೆ ಹೋಬಳಿಯ ಬೆಟ್ಟಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಜೇನುಗೂಡು ರೂರಲ್‌ ಡೆವಲಪ್‌ಮೆಂಟ್‌ ಆ್ಯಂಡ್‌ ಕಲ್ಚರಲ್‌ ಟ್ರಸ್ಟ್ ಹಾಗೂ ನಾಡಪ್ರಭು ಕೆಂಪೇಗೌಡ ಯುವಕರ ಸಂಘದಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಹೆಣ್ಣು ಮಕ್ಕಳು ಕೇವಲ ಅಡುಗೆ ಮನೆಗೆ ಸೀಮಿತವಾಗಿದ್ದ ಕಾಲ ಸರಿದು ಹೋಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಸಬಲರಾಗಿದ್ದಾರೆ. ಪ್ರತಿ ಹೆಣ್ಣು ಮಕ್ಕಳಿಗೆ ಆಸ್ತಿಗಿಂತ ಶಿಕ್ಷಣ ತುಂಬಾ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಜೇನುಗೂಡು ರೂರಲ್‌ ಡೆವಲಪ್‌ಮೆಂಟ್‌ ಆ್ಯಂಡ್‌ ಕಲ್ಚರಲ್‌ ಟ್ರಸ್ಟ್‌ನ ಹಿರಿಯ ನಿರ್ದೇಶಕ ದೇವಿದಾಸ್‌ ಸುಬ್ರಾಯ್‌ ಶೇಠ್‌ ಮಾತನಾಡಿ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಹೆಣ್ಣು ಮಕ್ಕಳ ದಿನಾಚರಣೆಗೆ ಒತ್ತು ನೀಡಿದೆ ಎಂದರು.

ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ತಪ್ಪಿಸುವ ಉದ್ದೇಶದಿಂದ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೊಳಿಸಿದೆ. ಸುಮಾರು 15 ವರ್ಷದಿಂದ ಈ ಕಾರ್ಯಕ್ರಮ ಜಾರಿಯಾಗಿದ್ದು, ಹೆಣ್ಣು ಮಕ್ಕಳು ತಮ್ಮ ಹಕ್ಕು, ಕರ್ತವ್ಯಗಳನ್ನು ಒತ್ತಾಯಿಸಿ ಪಡೆಯಬೇಕು ಎಂದರು.

ಮುಖ್ಯಶಿಕ್ಷಕ ರಾಜು ಮಾತನಾಡಿ, ಜೇನುಗೂಡು ಟ್ರಸ್ಟ್‌ನಿಂದ ಹೆಣ್ಣು ಮಕ್ಕಳ ರಾಷ್ಟ್ರೀಯ ದಿನಾಚರಣೆ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ಟ್ರಸ್ಟ್‌ ಖಜಾಂಚಿ ಜಿ. ವಿದ್ಯಾಶ್ರೀ ಮಾತನಾಡಿ, ಬೆಟ್ಟಹಳ್ಳಿ ಸರ್ಕಾರಿ ಶಾಲೆಯಲ್ಲಿನ ಪ್ರತಿಭಾವಂತ ಹೆಣ್ಣು ಮಕ್ಕಳನ್ನು ಗೌರವಿಸಲಾಗಿದೆ. ಲೇಖನ ಸಾಮಗ್ರಿ ವಿತರಿಸಲಾಗಿದೆ. ಅವರ ಶ್ರೇಯೋಭಿವೃದ್ಧಿಗೆ ಟ್ರಸ್ಟ್ ಮತ್ತಷ್ಟು ಜನಪರ ಕಾರ್ಯಕ್ರಮ ಆಯೋಜಿಸಲಿದೆ ಎಂದು ಹೇಳಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ್, ಜೇನುಗೂಡು ಟ್ರಸ್ಟ್ ನಿರ್ದೇಶಕ ಸೈಯದ್‌ ಮಹಬೂಬ್, ಮಾನವ ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷ ಎಂ.ಆರ್‌. ಉಮೇಶ್, ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್, ಸಹ ಶಿಕ್ಷಕಿ ನಳಿನಿ, ವೆಂಕಟಲಕ್ಷ್ಮೀ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು