ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಕಣಜ ಆನೇಕಲ್‌ನಲ್ಲಿ ಈ ಬಾರಿ ಉತ್ತಮ ಫಸಲು: ರೈತರಲ್ಲಿ ಸಂತಸ

ಹಸ್ತ, ಚಿತ್ತ ಮಳೆ ನಿರೀಕ್ಷೆಯಲ್ಲಿ ರೈತರು, ಶೇ 50 ರಷ್ಟು ಪ್ರದೇಶದಲ್ಲಿ ರಾಗಿ ಬಿತ್ತನೆ
Last Updated 28 ಸೆಪ್ಟೆಂಬರ್ 2019, 12:53 IST
ಅಕ್ಷರ ಗಾತ್ರ

ಆನೇಕಲ್:‘ರಾಗಿ ಕಣಜ’ವೆಂದು ಖ್ಯಾತಿ ಗಳಿಸಿರುವ ಆನೇಕಲ್‌ ತಾಲ್ಲೂಕಿನಲ್ಲಿ ಮತ್ತೆ ವೈಭವ ಮರುಕಳಿಸುತ್ತಿದ್ದು ಉತ್ತಮ ರಾಗಿ ಪೈರು ಬಂದಿದ್ದು ರೈತರಲ್ಲಿ ಸಂತಸ ಮೂಡಿದೆ.

ಕಳೆದ ವರ್ಷ ಮಳೆ ಕೈಕೊಟ್ಟಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿತ್ತು. ಆದರೆ ಈ ಬಾರಿ ಆಗಸ್ಟ್‌ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ವಾಡಿಕೆಯ ಮಳೆಯಾಗಿದ್ದು ಬಿತ್ತನೆ ಕಾರ್ಯ ಚುರುಕಿನಿಂದ ಆಗಿದೆ. ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಹಸಿರಿನಿಂದ ನಳನಳಿಸುವ ರಾಗಿ ಬೆಳೆದಿದ್ದು ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ.

ತಾಲ್ಲೂಕಿನ ಚಿಕ್ಕಹೊಸಹಳ್ಳಿ, ಇಂಡ್ಲವಾಡಿ, ತಮ್ಮನಾಯಕನಹಳ್ಳಿ, ಚೂಡಹಳ್ಳಿ, ಸಮಂದೂರು, ಗೆರಟಿಗನಬೆಲೆ, ಭಕ್ತಿಪುರ, ದಾಸನಪುರ, ಮಾಯಸಂದ್ರ, ಕರ್ಪೂರು, ಬೆಸ್ತಮಾನಹಳ್ಳಿ ಸೇರಿದಂತೆ ಆನೇಕಲ್ ಕಸಬಾದಲ್ಲಿ ತಾಲ್ಲೂಕಿನ ಶೇ 50ರಷ್ಟು ಪ್ರದೇಶಕ್ಕೆ ರಾಗಿ ಬಿತ್ತನೆ ಮಾಡಲಾಗಿದ್ದು, ಎಲ್ಲೆಡೆ ಉತ್ತಮ ಬೆಳೆಯಾಗಿದೆ.

ತಾಲ್ಲೂಕಿನಲ್ಲಿ 5,740 ಹೆಕ್ಟೇರ್‌ ರಾಗಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ 5,079 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. ಈ ಪೈಕಿ ಕಸಬಾದಲ್ಲಿ 2,278 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಉಳಿದ ಹೋಬಳಿಗಳಿಗಿಂತ ಹೆಚ್ಚಾಗಿದೆ. ಅತ್ತಿಬೆಲೆಯಲ್ಲಿ 550 ಹೆಕ್ಟೇರ್, ಜಿಗಣಿಯಲ್ಲಿ 1,000 ಹೆಕ್ಟೇರ್‌, ಸರ್ಜಾಪುರ 1,250 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ.

66 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದೆ. ತೊಗರಿ 60 ಹೆಕ್ಟೇರ್‌, ಹುರುಳಿ 8 ಹೆಕ್ಟೇರ್‌, ಅಲಸಂದೆ 45 ಹೆಕ್ಟೇರ್, ಅವರೆ 565 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ನೆಲಗಡಲೆ 22 ಹೆಕ್ಟೇರ್‌, ಸಾಸಿವೆ ಸೇರಿದಂತೆ ಎಣ್ಣೆ ಕಾಳುಗಳು 55 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಕಳೆದ ಐದಾರು ವರ್ಷಗಳಿಗಿಂತ ಈ ವರ್ಷ ರಾಗಿ ಬೆಳೆ ಚೆನ್ನಾಗಿದೆ. ಉತ್ತರೆ ಮಳೆ ಚೆನ್ನಾಗಿ ಆಗಿದೆ. ಹಸ್ತ ಮಳೆ ಪ್ರಾರಂಭವಾಗುತ್ತಿದೆ. ಹಸ್ತ ಮಳೆ ಮತ್ತು ಚಿತ್ತೆ ಮಳೆ ಚೆನ್ನಾಗಿ ಆದರೆ ಉತ್ತಮ ಫಸಲು ಬರುವುದು ಖಚಿತ ಎನ್ನುತ್ತಾರೆ ತಮ್ಮನಾಯಕನಹಳ್ಳಿಯ ಸಿದ್ದೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT