ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಾಂತರಕ್ಕೆ ಜಯ, ಬಂಡಾಯಕ್ಕೆ ಸೋಲು

ಪಕ್ಷಾಂತರಿಗಳಿಗೆ ಮಣೆ ಹಾಕಿದ ಜಿಲ್ಲೆಯ ಮತದಾರರು
Last Updated 16 ಮೇ 2018, 10:24 IST
ಅಕ್ಷರ ಗಾತ್ರ

ಬಳ್ಳಾರಿ: ಈ ಬಾರಿಯ ಚುನಾವಣೆಯಲ್ಲಿ ಪಕ್ಷಾಂತರ ಮತ್ತು ಬಂಡಾಯವೇ ಫಲಿತಾಂಶವನ್ನು ಬಹುತೇಕ ನಿರ್ಧರಿಸಿದೆ.

ಈ ಎರಡು ಅಂಶಗಳು ಯಾರು ಯಾರನ್ನು ಸೋಲಿಸಬಹುದು ಎಂದು ಅಂದಾಜಿಸಲಾಗಿತ್ತೋ ಅವರೆಲ್ಲರೂ ಬಹುಮತಗಳಿಂದ ಗೆದ್ದಿದ್ದಾರೆ. ಸೋತರೂ, ಮತ ಕಸಿದ ಸಂತೋಷದಲ್ಲಿ ಬಂಡಾಯಗಾರರಿದ್ದಾರೆ. ಪಕ್ಷಾಂತರ ಮಾಡಿದರೂ ಗೆಲ್ಲಬಲ್ಲೆವು ಎಂದು ಸಾಬೀತು ಮಾಡಿದವರೂ ಇದ್ದಾರೆ. ಸೋತವರೂ ಇದ್ದಾರೆ.

ಇದು ಫಲಿತಾಂಶದ ಜಾದೂ. ಕಾಂಗ್ರೆಸ್‌ ಮತ್ತು ಬಿಜೆಪಿ ಏಕಕಾಲಕ್ಕೆ ಪಕ್ಷಾಂತರದ ಲಾಭವನ್ನೂ, ಬಂಡಾಯದ ನಷ್ಟವನ್ನು ಅನುಭವಿಸಿವೆ. 2008ರ ಚುನಾವಣೆಯಲ್ಲಿ ಸೋತವರು ಅಧಿಕಾರದಲ್ಲಿ ಇಲ್ಲದಿದ್ದರೂ ಜನರ ನಡುವೆ ಇದ್ದು ಉಳಿಸಿಕೊಂಡಿದ್ದ ವರ್ಚಸ್ಸೇ ಕೆಲವೆಡೆ ಸೋಲು–ಗೆಲುವನ್ನು ನಿರ್ಧರಿಸಿದೆ.

ಹಡಗಲಿಯಲ್ಲಿ ಬಿಜೆಪಿಯ ಚಂದ್ರಾನಾಯ್ಕ ಸೋತಿದ್ದಾರೆ. ಅವರು 2008ರಲ್ಲಿ ಶಾಸಕರಾಗಿದ್ದರು. ಅದೇ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಓದೋ ಗಂಗಪ್ಪ ಅವಕಾಶ ಸಿಗದೆ, ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿ ಎರಡನೇ ಸ್ಥಾನದಲ್ಲಿ ನಿಂತು ಚಂದ್ರಾನಾಯ್ಕ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ.

ಅನುಪಮಾ ಶೆಣೈ ವರ್ಗಾವಣೆ ಪ್ರಕರಣದಿಂದ ಸರ್ಕಾರಕ್ಕೆ ಮುಜುಗರ ತಂದಿದ್ದ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಮತ್ತೆ ಆಯ್ಕೆಯಾಗಿರುವುದು, ಅವರ ಜನಪ್ರಿಯತೆಗೆ ಕುಂದು ಬಂದಿಲ್ಲ ಎಂಬುದನ್ನು ಸೂಚಿಸುತ್ತದೆ.

ಸಿರುಗುಪ್ಪದಲ್ಲಿ ಎಂ.ಎಸ್‌.ಸೋಮಲಿಂಗಪ್ಪ ಭರ್ಜರಿ ಗೆಲುವನ್ನು ಪಡೆಯಲು ಪ್ರತಿ ಕ್ಷೇತ್ರದಲ್ಲೂ ಅವರಿಗಿದ್ದ ಬೆಂಬಲಿಗರು ಹಾಗೂ ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದ ಯುವಕ ಬಿ.ಮುರಳಿಕೃಷ್ಣ. ಅಪರಿಚಿತತೆಯ ನಡುವೆಯೂ ಅವರು 61 ಸಾವಿರಕ್ಕೂ ಹೆಚ್ಚು ಮತ ಗಳಿಸಿರುವುದು ಕಾಂಗ್ರೆಸ್‌ ಪಕ್ಷದ ತಳಮಟ್ಟದ ಬಲವನ್ನೂ ತೋರುತ್ತದೆ.

ಟಿಕೆಟ್‌ ದೊರಕದೆ ಬಂಡಾಯವೆದ್ದಿದ್ದ ಹಾಲಿ ಶಾಸಕ ಬಿ.ಎಂ.ನಾಗರಾಜ ಅವರ ಮುನಿಸೂ ಕೂಡ ಪಕ್ಷಕ್ಕೆ ಹಿನ್ನಡೆ ತಂದಿದೆ. ಆದರೆ, ಪಕ್ಷೇತರರಾಗಿ ಸ್ಪರ್ಧಿಸಿದ್ದ ಅವರ ಸಹೋದರ ಬಿ.ಎಂ.ವೆಂಕಟೇಶ ನಾಯಕರಿಂದ ಪಕ್ಷಕ್ಕೆ ಹೆಚ್ಚೇನೂ ಹಾನಿಯಾಗಿಲ್ಲ.

ಸೋಲುಂಡ ಜೆಡಿಎಸ್‌:
ಕೂಡ್ಲಿಗಿಯಲ್ಲಿ ಎರಡು ಬಾರಿ ಶಾಸಕರಾಗಿದ್ದು, ಐದನೇ ಬಾರಿ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ಎನ್‌.ಟಿ.ಬೊಮ್ಮಣ್ಣ ಸೋಲುಂಡಿದ್ದಾರೆ.

ಇಡೀ ಜಿಲ್ಲೆಯಲ್ಲಿ ಇಲ್ಲಿ ಮಾತ್ರ ಜೆಡಿಎಸ್‌ ಗೆಲ್ಲಬಹುದು ಎಂಬ ನಿರೀಕ್ಷೆ ಇತ್ತು. ಆ ಪಕ್ಷಕ್ಕೂ ಆ ಭರವಸೆ ಇತ್ತು. ಆದರೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ಎನ್‌.ವೈ.ಗೋಪಾಲಕೃಷ್ಣ ಆ ಭರವಸೆಯನ್ನು ಧೂಳಿಪಟ ಮಾಡಿದರು.

ಸಿರುಗುಪ್ಪದಲ್ಲಿ ಆದಂತೆ, ಇಲ್ಲಿಯೂ ಹೊಸಪೇಟೆಯ ರಘು ಗುಜ್ಜಲ್‌ ಕಾಂಗ್ರೆಸ್‌ಗೆ ಗೆಲುವನ್ನು ತಂದುಕೊಡಲು ಆಗಿಲ್ಲ. ಕಾಂಗ್ರೆಸ್‌ ಟಿಕೆಟ್‌ ವಂಚಿತರಾಗಿ, ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ ಲೋಕೇಶ್‌ವಿ.ನಾಯಕ ಆ ಪಕ್ಷದ ಬಹುತೇಕ ಮತಗಳನ್ನು ಗಳಿಸಿದ್ದರೆಂದಲೇ ರಘು ಸೋಲನ್ನು ಎದುರಿಸಬೇಕಾಯಿತು.

ಸಂಡೂರಿನಲ್ಲಿ ಬಿಜೆಪಿ ಟಿಕೆಟ್‌ ದೊರಕದೆ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಬಂಗಾರ ಹನುಮಂತು ಕನಿಷ್ಠ ಹತ್ತು ಸಾವಿರ ಮತವನ್ನೂ ಪಡೆಯಲು ಆಗಿಲ್ಲ.

ಕಾಂಗ್ರೆಸ್‌ನಲ್ಲೇ ಇದ್ದು, ಚುನಾವಣೆ ಸಮಯದಲ್ಲಿ ಬಿಜೆಪಿ ಸೇರಿ ಸ್ಪರ್ಧಿಸಿದ್ದ ಡಿ.ರಾಘವೇಂದ್ರ ಎರಡನೇ ಸ್ಥಾನ ಪಡೆದಿದ್ದು ಕೂಡ ವಿಶೇಷವೇ. ಅವರು ಚುನಾವಣೆಗೆ ಸ್ಪರ್ಧಿಸುವ ಸಲುವಾಗಿಯೇ ಪುರಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಿರಂತರ ಪ್ರಚಾರ ನಡೆಸಿದರೂ ಎಸ್‌ಯುಸಿಐ ಅಭ್ಯರ್ಥಿ ರಾಮಾಂಜನಪ್ಪ ನಾಲ್ಕಂಕಿಯ ಮತಗಳನ್ನಷ್ಟೇ ಪಡೆದರು.

ಗಟ್ಟಿಗ ಭೀಮಾನಾಯ್ಕ:
ಹಿಂದಿನ ಬಾರಿ ಜೆಡಿಎಸ್‌ನಿಂದ ಗೆದ್ದು, ನಂತರ ಕಾಂಗ್ರೆಸ್‌ ಸೇರಿ ಆ ಪಕ್ಷದ ಅಭ್ಯರ್ಥಿಯಾಗಿ ಗೆದ್ದಿರುವ ಎಲ್‌ಬಿಪಿ ಭೀಮಾನಾಯ್ಕ ಇಡೀ ಜಿಲ್ಲೆಯಲ್ಲಿ ಹೆಚ್ಚು ಗಟ್ಟಿಗರು ಎಂಬುದೂ ಸಾಬೀತಾಗಿದೆ.

ಅವರ ವಿರುದ್ಧ ಎರಡೂ ಪಕ್ಷದ ಟಿಕೆಟ್‌ ಆಕಾಂಕ್ಷಿಗಳು ಮತ್ತು ಕಾರ್ಯಕರ್ತರ ಅಸಮಾಧಾನವಿತ್ತು. ಆದರೆ ಅದು ಭೀಮಾನಾಯ್ಕರನ್ನು ತಟ್ಟಿಲ್ಲ. ಆದರೆ ಬಿಜೆಪಿಯ ನೇಮರಾಜನಾಯ್ಕ ತೀವ್ರ ಪೈಪೋಟಿ ನೀಡಿದ್ದಂತೂ ನಿಜ. ಪ್ರಾದೇಶಿಕ ಸಾರಿಗೆ ನಿವೃತ್ತ ಅಧಿಕಾರಿ ಎಲ್‌.ಪರಮೇಶ್ವರ ಅವರು ಜೆಡಿಎಸ್‌ನ ಕೃಷ್ಣಾನಾಯ್ಕ ಅವರನ್ನು ನಾಲ್ಕನೇ ಸ್ಥಾನಕ್ಕೆ ನೂಕಿದ್ದಾರೆ.

ಉದಾಸೀನಕ್ಕೆ ಪಾಠ:
ಬಳ್ಳಾರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕ ಅನಿಲ್‌ಲಾಡ್ ತಮ್ಮ ಉದಾಸೀನಕ್ಕೆ ಬೆಲೆ ತೆತ್ತಿದ್ದಾರೆ. ಅವರು ಅಭಿವೃದ್ಧಿ ಕಾರ್ಯ ಮಾಡಿರಬಹುದಾದರೂ, ಕ್ಷೇತ್ರದಲ್ಲಿ ಅವರ ಉಪ್ಥಸ್ಥಿತಿ ಇರಲಿಲ್ಲ ಎಂಬ ಆರೋಪ ಐದು ವರ್ಷ ನಿರಂತರವಾಗಿತ್ತು. ಪರಿಣಾಮವಾಗಿ, ‘ಬೇಲ್‌ ಡೀಲ್‌’ನಂಥ ಗಂಭೀರ ಆರೋಪದ ನಡುವೆಯೂ ಬಿಜೆಪಿಯ ಜಿ.ಸೋಮಶೇಖರ ರೆಡ್ಡಿ ಗೆದ್ದರು. ಜೆಡಿಎಸ್‌ನ ಮಹ್ಮದ್‌ ಇಕ್ಬಾಲ್‌ ಹೊತೂರ್‌ ಅವರಿಗೆ ಐದಂಕಿ ಮತಗಳನ್ನು ಗಳಿಸಲೂ ಆಗಲಿಲ್ಲ. ಸಂಸದ ಬಿ.ಶ್ರೀರಾಮುಲು ಹೊತೂರ್‌ ಅವರನ್ನು ’ಹರಕೆಯ ಕುರಿ’ ಎಂದಿದ್ದು ಸಾಬೀತಾದಂತಾಗಿದೆ. ಮೂವರೂ ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತಿದ್ದರೂ, ಈ ಬಗ್ಗೆ ಕ್ಷೇತ್ರದಲ್ಲಿ ಹೆಚ್ಚು ಚರ್ಚೆ ನಡೆಯಲಿಲ್ಲ.

ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯ ಎಸ್‌.ಪಕ್ಕೀರಪ್ಪ ಅವರನ್ನು ಕಾಂಗ್ರೆಸ್‌ನ ಬಿ.ನಾಗೇಂದ್ರ ಸೋಲಿಸಿದ್ದಾರೆ. ಇದೇ ಕ್ಷೇತ್ರದವರಾದರೂ, ಈ ಇಬ್ಬರ ಸೋಲು–ಗೆಲುವು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಫಲಿತಾಂಶ ನಿರ್ಧರಿಸಿದ ಮತಗಳ ಅಂತರ ಬಹಳ ಕಡಿಮೆ ಇದೆ. ನಾಗೇಂದ್ರ ರಾಹುಲ್‌ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದ್ದರು. ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತಿರುವ ಅವರು ‘ಸಂಪರ್ಕಕ್ಕೆ ಸುಲಭವಾಗಿ ಸಿಗುವುದಿಲ್ಲ’ ಎಂಬ ಆರೋಪವೂ ಇದೆ.

ಕಂಪ್ಲಿಯಲ್ಲಿ ಚುನಾವಣೆಗೆ ಮೊದಲೇ ಗೆದ್ದಂತೆ ವರ್ತಿಸಿದ್ದ ಬಿಜೆಪಿಯ ಟಿ.ಎಚ್‌.ಸುರೇಶ್‌ಬಾಬು ಅವರನ್ನು ಕಾಂಗ್ರೆಸ್‌ನ ಜಿ.ಎನ್‌.ಗಣೇಶ್‌ ಮಣಿಸಿರುವುದು ಕೂಡ ಹೊಸ ದಾಖಲೆ. ಮೂರನೇ ಗೆಲುವಿಗಾಗಿ ಎದುರು ನೋಡುತ್ತಿದ್ದವರನ್ನು ಮಣಿಸಿ ಗಣೇಶ್‌ ಮೊದಲ ಬಾರಿಗೆ ಶಾಸಕರಾಗಿದ್ದಾರೆ.

‘ವಿಜಯನಗರ ಕ್ಷೇತ್ರದ ಫಲಿತಾಂಶ ಮೊದಲೇ ನಿರ್ಧಾರವಾಗಿತ್ತು’ ಎಂಬ ಸನ್ನಿವೇಶವನ್ನು ಬಿಜೆಪಿಯ ಎಚ್‌.ಆರ್‌.ಗವಿಯಪ್ಪ ಕೊನೇ ಕ್ಷಣದವರೆಗೂ ಅತಂತ್ರವಾಗಿಯೇ ಇಟ್ಟರು. ಅವರ ಎದುರು ಗೆಲ್ಲಲು ಕಾಂಗ್ರೆಸ್‌ನ ಆನಂದ್‌ಸಿಂಗ್‌ ಸಾಕಷ್ಟು ಪೈಪೋಟಿ ನೀಡಲೇಬೇಕಾಯಿತು. ಸಿಂಗ್‌ ಅವರ ಮೇಲೂ ಅಕ್ರಮ ಗಣಿಗಾರಿಕೆಯ ಆರೋಪವಿದೆ. ಈ ಇಬ್ಬರು ಚುನಾವಣೆಗೆ ಮುಂಚೆ ಎದುರಾಳಿ ಪಕ್ಷಗಳಲ್ಲಿದ್ದವರು ಎಂಬುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT