ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಕೊಡುಗೆ ನೀಡಿ

7

ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಕೊಡುಗೆ ನೀಡಿ

Published:
Updated:
ಜಿಗಣಿ ಸರ್ಕಾರಿ ಶಾಲೆಯಲ್ಲಿ ಸಾಯಿರಾಮ್ ಎಂಟರ್‌ಪ್ರೈಸಸ್‌ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಮೂಲ್ ನಿರ್ದೇಶಕ ಆರ್.ಕೆ.ರಮೇಶ್ ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳನ್ನು ವಿತರಿಸಿದರು

ಆನೇಕಲ್: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳು ಹಾಗೂ ಸಂಘ ಸಂಸ್ಥೆಗಳು ಸಹಕಾರ ನೀಡಬೇಕು. ಈ ಮೂಲಕ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಕೊಡುಗೆ ನೀಡಬೇಕು ಎಂದು ‘ಬಮೂಲ್’ ನಿರ್ದೇಶಕ ಆರ್.ಕೆ. ರಮೇಶ್ ತಿಳಿಸಿದರು.

ತಾಲ್ಲೂಕಿನ ಜಿಗಣಿ ಸರ್ಕಾರಿ ಶಾಲೆಯಲ್ಲಿ ಸಾಯಿರಾಮ್ ಎಂಟರ್‌ಪ್ರೈಸಸ್‌ ವತಿಯಿಂದ ಆಯೋಜಿಸಿದ್ದ ಶಾಲಾ ಪರಿಕರಗಳ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಂಘ ಸಂಸ್ಥೆಗಳು ಕೇವಲ ವ್ಯವಹಾರಕ್ಕೆ ಮೀಸಲಾಗದೇ ಸಮಾಜಮುಖಿ ಚಟುವಟಿಕೆ ಮೂಲಕ ಸಮಾಜದ ಋಣ ತೀರಿಸಬೇಕು. ಈ ಮೂಲಕ ಅಭಿವೃದ್ಧಿಗೆ ಸರ್ಕಾರದ ಜೊತೆ ಕೈ ಜೋಡಿಸಬೇಕು ಎಂದರು.

ಸರ್ಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನಗಳಲ್ಲಿದ್ದಾರೆ. ಅವರಂತೆ ವಿದ್ಯಾರ್ಥಿಗಳು ಉತ್ತಮ ಅಧ್ಯಯನ ಮೂಲಕ ಉನ್ನತ ಸ್ಥಾನಗಳನ್ನು ತಲುಪಿ ಓದಿದ ಶಾಲೆಗೆ ಹಾಗೂ ತಮ್ಮ ಪೋಷಕರಿಗೆ ಗೌರವ ತರಬೇಕು. ದಾನಿಗಳು ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸಾಯಿರಾಮ್‌ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಜಿಗಣಿ ವಿನೋದ್ ಮಾತನಾಡಿ, ‘ಕಳೆದ ಎರಡು ವರ್ಷಗಳಿಂದ ಶಾಲೆಯಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ನೀಡುವ ಮೂಲಕ ಜಿಗಣಿ ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡಲಾಗಿದೆ. ಕಳೆದ ವರ್ಷ 20 ವಿದ್ಯಾರ್ಥಿಗಳನ್ನು ದತ್ತು ಪಡೆದುಕೊಳ್ಳುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಶ್ರಮಿಸಲಾಗುತ್ತಿದೆ’ ಎಂದರು.

ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಸರ್ಕಾರ ಹಾಗೂ ದಾನಿಗಳು ನೀಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಖಾಸಗಿ ಶಾಲೆಗಳ ವಿದ್ಯಾರ್ಥಿಗಳಷ್ಟೇ ಗುಣಮಟ್ಟದ ಶಿಕ್ಷಣ ಪಡೆಯುವ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ಪೈಪೋಟಿ ನೀಡಬೇಕು. ವಿದ್ಯಾರ್ಥಿಗಳು ಪಠ್ಯ ವಿಷಯಗಳ ಜೊತೆಗೆ ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ಪಠ್ಯೇತರ ವಿಷಯಗಳಲ್ಲೂ ಉತ್ತಮ ಸಾಧನೆ ಮಾಡಬೇಕು ಎಂದರು.

ಪುರಸಭಾ ಸದಸ್ಯರಾದ ಪ್ರಹ್ಲಾದ್ ರೆಡ್ಡಿ, ಪ್ರಸಾದ್‌ ರೆಡ್ಡಿ, ಮುನಿರತ್ನಮ್ಮ ಶಿವಶಂಕರ್‌, ಶಾಲೆಯ ಮುಖ್ಯೋಪಾಧ್ಯಾಯಿನಿ ಯಶೋಧಮ್ಮ, ಮುಖಂಡರಾದ ಮಂಜುನಾಥ್, ಲೋಕೇಶ್, ಅಂಬರೀಷ್, ಗೋಪಾಲಕೃಷ್ಣ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !