ಶುಕ್ರವಾರ, ಮೇ 14, 2021
32 °C
ನದಿ ಪಾತ್ರದಲ್ಲಿ ಕಾಮಗಾರಿ ಸ್ಥಗಿತ; ತ್ಯಾಜ ನೀರು ಸಂಸ್ಕರಣೆ ಯೋಜನೆಗೆ ಪ್ರಾಮುಖ್ಯ; ಈ ನೀರೂ ಕೆರೆಗೆ ಹರಿಯುತ್ತಿಲ್ಲ: ರೈತರ ಆಕ್ರೋಶ

ದೇವನಹಳ್ಳಿ: ಅರ್ಕಾವತಿ ನದಿ ಪುನಶ್ಚೇತನ ಕೈಬಿಟ್ಟ ಸರ್ಕಾರ?

ವಡ್ಡನಹಳ್ಳಿ ಬೋಜ್ಯಾನಾಯ್ಕ್ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಬಯಲು ಸೀಮೆ ಗ್ರಾಮಾಂತರ ಜಿಲ್ಲೆಯಲ್ಲಿನ ಅರ್ಕಾವತಿ ನದಿ ಪುನಶ್ಚೇತನ ಪ್ರಯತ್ನವನ್ನು ಸರ್ಕಾರ ಕೈಬಿಟ್ಟಿದೆ ಎಂಬ ಚರ್ಚೆಗಳು ತಾಲ್ಲೂಕಿನಲ್ಲಿ ಆರಂಭಗೊಂಡಿವೆ.

ದಶಕದ ಹಿಂದೆ ಆರಂಭಗೊಂಡ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಆರಂಭಿಸಲಾಯಿತು. ಆದರೆ, ನದಿ ಪುನಶ್ಚೇತನ ಕಾರ್ಯವನ್ನು ಮಧ್ಯದಲ್ಲಿಯೇ ಕೈಬಿಟ್ಟಿದೆ. ಬೆಂಗಳೂರು ಕಣಿವೆಗಳ ತ್ಯಾಜ್ಯ ನೀರಿನತ್ತ ಗಮನಹಿಸಿದೆ. ಈ ಮೂಲಕ ಗಣಿಗಾರಿಕೆ, ಒತ್ತುವರಿದಾರರಿಗೆ ನೆರವಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ.

ತ್ಯಾಜ್ಯ ನೀರನ್ನು ಸಂಸ್ಕರಿಸಿ ಗ್ರಾಮಾಂತರ ಜಿಲ್ಲೆಗೆ ಹರಿಸುವ ಯೋಜನೆಗೆ ₹ 1500 ಕೋಟಿ ನಿಗದಿಪಡಿಸಿದೆ. ಈ ಮೂಲಕ ನದಿ ಪ್ರದೇಶಗಳ ಪುನಶ್ಚೇತನಕ್ಕೆ ಸರ್ಕಾರ ತಿಲಾಂಜಲಿ ಇಟ್ಟಿದೆ ಎಂಬ ಆತಂಕ ಹಾಗೂ ಆಕ್ರೋಶಗಳು ರೈತ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ಕೆರೆಗಳಿಗೆ ಎಚ್.ಎನ್ ವ್ಯಾಲಿ ಯೋಜನೆಯಿಂದ ₹ 886 ಕೋಟಿ ವೆಚ್ಚದಲ್ಲಿ ಸಂಸ್ಕರಿಸಿದ ನೀರು ಕೆರೆಗಳಿಗೆ ಹರಿಸಲು ನಿರ್ಧರಿಸಲಾಯಿತು. ಇದರಲ್ಲಿ ಬೆಂಗಳೂರು ಉತ್ತರ ತಾಲ್ಲೂಕು ಮತ್ತು ಚಿಕ್ಕ ಬಳ್ಳಾಪುರ ಜಿಲ್ಲೆ ಸಂಸ್ಕರಿಸಿದ ನೀರಿಗೆ ಸಿಂಹ ಪಾಲು ಪಡೆದುಕೊಂಡಿವೆ. ವಿಪರ್ಯಾಸವೆಂದರೆ ದೇವನಹಳ್ಳಿ ಮೂಲಕ ಹಾದು ಹೋಗುವ ನೀರು ಈ ತಾಲ್ಲೂಕಿನ 9 ಕೆರೆಗಳಿಗೆ ಸೀಮಿತಗೊಂಡಿದೆ. ಆದರೂ ಈ 9 ಕೆರೆಗಳನ್ನು ಒಂದು ವರ್ಷದಿಂದ ತುಂಬಿಸಿಲ್ಲ. ಇದು ಸರ್ಕಾರದ ತಾರತಮ್ಯ ನೀತಿ ಎಂಬುದು ರೈತರ ಆರೋಪ.

‘ತ್ಯಾಜ್ಯ ನೀರು ಸಂಸ್ಕರಿಸಿ ಕೆರೆಗಳಿಗೆ ಹರಿಸುವ ಸಮಗ್ರ ಯೋಜನೆಯಡಿ ದೇವನಹಳ್ಳಿ ವ್ಯಾಪ್ತಿಯ 40 ಕೆರೆಗಳು, ದೊಡ್ಡಬಳ್ಳಾಪುರದ 105, ನೆಲಮಂಗಲದ 80 ಕೆರೆಗಳು ಸೇರಿವೆ. ದೇವನಹಳ್ಳಿ ತಾಲ್ಲೂಕಿನಲ್ಲಿ 108 ಕೆರೆಗಳಿವೆ. ಎನ್.ಎಚ್. ವ್ಯಾಲಿ ಮತ್ತು ವೃಷಭಾವತಿ ವ್ಯಾಲಿ ಯೋಜನೆಗಳೆರಡೂ ಸೇರಿದರೂ 49 ಕೆರೆಗಳು ಮಾತ್ರ ಅದರಲ್ಲಿವೆ. ವೃಷಭಾವತಿ ವ್ಯಾಲಿ ಯೋಜನೆಯಲ್ಲಿ ತಾಲ್ಲೂಕಿಗೆ ಅನ್ಯಾಯವಾಗಿದೆ’ ಎಂಬುದು ಸ್ಥಳೀಯರ ಆರೋಪ.

ಜಿಲ್ಲೆಯಲ್ಲಿ 25 ವರ್ಷಗಳಿಂದ ಕುಡಿಯುವ ನೀರಿನ ಬವಣೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಜಲ ಮೂಲಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ಕಠಿಣ ನಿಯಮಗಳನ್ನು ರೂಪಿಸಬೇಕಾದ ಸರ್ಕಾರ ನದಿ ಪಾತ್ರಗಳಲ್ಲಿ ಗಿಡಗಂಟಿ ಮುಳ್ಳಿನ ಪೊದೆ ಬೆಳೆಯುವಂತೆ ಕೈಕಟ್ಟಿ ಕುಳಿತಿದೆ ಎನ್ನುತ್ತಾರೆ ನದಿ ಪಾತ್ರಗಳ ಸವೀಪ ಇರುವ ಗ್ರಾಮಸ್ಥರು.

’ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದ ಬೆನ್ನಲ್ಲೆ ತುರ್ತಾಗಿ ಸಭೆ ನಡೆಸಿದ ಸಂಬಂಧಿಸಿ ಸಚಿವರು, ಹಿರಿಯ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಅರ್ಕಾವತಿ ಮತ್ತು ಕುಮುದ್ವತಿ ನದಿಗಳ ಸಂರಕ್ಷಣೆ ಪ್ರದೇಶಕ್ಕೆ ಇದ್ದ ಒಂದು ಕಿ.ಮೀ. ಮಿತಿಯನ್ನು 500 ಮೀಟರ್‌ಗೆ ಕುಗ್ಗಿಸಿದ್ದಾರೆ. ಸಂರಕ್ಷಣೆಗಿದ್ದ ನಿಯಮ ಕಡಿತಗೊಳಿಸಿದ ನಂತರ ಒತ್ತುವರಿಯಾಗಿರುವ ನದಿ ಪಾತ್ರಗಳ ಪ್ರದೇಶವನ್ನು ಸಕ್ರಮಗೊಳಿಸುವ ಉದ್ದೇಶ ಸರ್ಕಾರ ಹೊಂದಿದೆ ಎಂಬುನ್ನು ತಳ್ಳಿ ಹಾಕುವಂತಿಲ್ಲ’ ಎಂಬುದೂ ಸ್ಥಳೀಯರ ಆತಂಕ.

ಕ್ವಾರಿ, ಕ್ರಷರ್‌ಗಳಿಗೆ ನಿಷೇಧಿಸಲಿ
‘ಅರ್ಕಾವತಿ ಮತ್ತು ಕುಮುದ್ವತಿ ನದಿ ಪಾತ್ರಗಳ ವ್ಯಾಪ್ತಿಯನ್ನು ನಾಲ್ಕು ವಲಯಗಳನ್ನಾಗಿ ವಿಂಗಡಿಸಲಾಗಿದೆ. ವಲಯ 1ರಲ್ಲಿ ಸೂಚಿಸಿರುವಂತೆ ಅಂತರ್ಜಲ ಬಳಕೆಗೆ ನಿಯಂತ್ರಣ, ಕಲ್ಲಿನ ಕ್ವಾರಿಗೆ, ಗಣಿಗಾರಿಕೆಗೆ ಮತ್ತು ಜಲ್ಲಿ ಕ್ರಷರ್‌ಗಳಿಗೆ ನೂತನವಾಗಿ ಪರವಾನಗಿ ನೀಡುವಂತಿಲ್ಲ. ನದಿ ಪುನಶ್ಚೇತನಕ್ಕೆ ಮುಂದಾದರೆ ಬಹುತೇಕ ಗಣಿಗಾರಿಕೆ ನಿಷೇಧ ಮಾಡಬೇಕು. ಒತ್ತುವರಿ ತೆರವುಗೊಳಿಸಬೇಕು. ಇದನ್ನೆಲ್ಲಾ ಮರೆಮಾಚಲು ನದಿಗಳ ಪುನಶ್ಚೇತನವನ್ನು ಬದಿಗಿರಿಸಿ, ವೃಷಭಾವತಿ ವ್ಯಾಲಿ ಯೋಜನೆಗೆ ಮುಂದಾಗಿದೆ. ಭವಿಷ್ಯದಲ್ಲಿ ಇದೊಂದು ಶಾಪವಾಗಲಿದೆ’ ಎನ್ನುತ್ತಾರೆ ಆರ್.ಟಿ.ಐ ಕಾರ್ಯಕರ್ತ ಚಿಕ್ಕೇಗೌಡ.

ಸಂಸ್ಕರಿಸಿದ ನೀರು ಭವಿಷ್ಯದಲ್ಲಿ ಮಾರಕ
‘ನದಿ ಪಾತ್ರಗಳ ಪ್ರದೇಶ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಮಂಜೂರಾತಿ ನೀಡಬಾರದು, ನಿರ್ಬಂಧಿಸಿ ಪರಿಸರ ಮತ್ತು ಅರಣ್ಯ ಇಲಾಖೆ 2003ರಲ್ಲಿ ಅಧಿಸೂಚನೆಯನ್ನು ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಕೆಲ ಭೂಮಾಲೀಕರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು.

ಈ ಜಲಾನಯನ ಪ್ರದೇಶದಲ್ಲಿ ಸಮಗ್ರ ಅಧ್ಯಯನ ಕೈಗೊಳ್ಳುವಂತೆ ಪರಿಸರ ನಿರ್ವಹಣಾ ನೀತಿ ಮತ್ತು ಸಂಶೋಧನ ಸಂಸ್ಥೆಗೆ ಸರ್ಕಾರ ಸೂಚನೆ ನೀಡಿತ್ತು. ಅಧ್ಯಯನ ನಡೆಸಿ ಸಂಸ್ಥೆ 2015ರಲ್ಲೆ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಅರ್ಕಾವತಿ ಮತ್ತು ಕುಮುದ್ವತಿ ನದಿಗಳ ಜಲಾನಯನ ಪ್ರದೇಶಗಳ ಸಂರಕ್ಷಣೆ ಪ್ರತ್ಯೇಕ ಪ್ರಾಧಿಕಾರ ರಚಿಸುವವರೆಗೆ 2003ರ ಅಧಿಸೂಚನೆಯಲ್ಲಿದ್ದಂತೆ ನಿರ್ಬಂಧ ಮುಂದುವರೆಸಬೇಕು. ಇಲ್ಲದಿದ್ದರೆ ನದಿ ಪಾತ್ರಗಳ ಪುನಶ್ಚೇತನಕ್ಕೆ ಅವಕಾಶವಿರುವುದಿಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಿದ್ದರು.

ಇಲಾಖೆಯ ಅಧಿಕಾರಿಗಳು ನೀಡಿದ ವರದಿಯನ್ನು ಸರ್ಕಾರ ಮರೆತು ತ್ಯಾಜ್ಯ ಸಂಸ್ಕರಿಸಿ ಕೆರೆಗಳಿಗೆ ಹರಿಸುವ ಯೋಜನೆಗೆ ಮುಂದಾಗಿದ್ದು, ಅದು ಭವಿಷ್ಯಕ್ಕೆ ಮಾರಕವಾಗಲಿದೆ. ಸ್ವಾಭಾವಿಕವಾಗಿ ಸುರಿಯುವ ಮಳೆಯನ್ನು ಹಿಡಿದಿಟ್ಟುಕೊಳ್ಳುವ ಕೆಲಸವಾಗಬೇಕಿತ್ತು. ಪ್ರತಿಯೊಂದು ಕೆರೆಗಳ ಒತ್ತುವರಿ ತೆರವುಗೊಳಿಸಿ ರಾಜಕಾಲುವೆ ಮತ್ತು ಪೋಷಕ ಕಾಲುವೆಗಳನ್ನು ದುರಸ್ತಿ ಮಾಡಿ ನದಿ ಪಾತ್ರಗಳನ್ನು ದುರಸ್ತಿಗೊಳಿಸಬೇಕು. ಒಂದೊಂದು ಕೆರೆಗೆ ವಿಸ್ತೀರ್ಣ ಆಧರಿಸಿ ಕನಿಷ್ಠ ₹ 50 ಲಕ್ಷದಿಂದ ಒಂದು ಕೋಟಿ ಅನುದಾನ ವೆಚ್ಚ ಮಾಡಿದ್ದರೆ ನೂರಾರು ಮೈಲಿಯ ಎತ್ತಿನ ಹೊಳೆ ಯೋಜನೆ ಜೊತೆಗೆ ಗಲೀಜು ಸಂಸ್ಕರಿಸಿದ ನೀರು ಕೆರೆಗಳಿಗೆ ಹರಿಸುವ ಪ್ರಮೇಯವೇ ಬರುತ್ತಿರಲಿಲ್ಲ’ ಎನ್ನುತ್ತಾರೆ ಮೋಹನ್.

ಕಲ್ಲು ಗಣಿಕಾರಿಕೆ, ಮರಳು ದಂಧೆ ಹೆಚ್ಚಳ
‘2003ರಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆ ಈ ನದಿಗಳಿಗೆ ಸಂರಕ್ಷಣ ಪ್ರದೇಶವೆಂದು ಒಂದು ಕಿ.ಮೀ ನಿಗದಿಪಡಿಸಿತ್ತು. ಇದರ ಜಾರಿಗೆ ಮತ್ತು ನಿಗಾವಹಿಸಲು ಪ್ರತಿ ತಿಂಗಳು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಬೇಕಿತ್ತು. ಆದರೆ ಈ ಆದೇಶಗಳು ದೂಳು ತಿನ್ನುತ್ತಿವೆ. ನಗರೀಕರಣ, ಮರಳುಗಾರಿಕೆ ದಂಧೆ, ಹೆಚ್ಚುತ್ತಿರುವ ಕಲ್ಲು ಗಣಿಗಾರಿಕೆ ಪರಿಣಾಮ ನದಿ ಪಾತ್ರ ಅವಸಾನದ ಅಂಚಿಗೆ ತಲುಪಿದೆ. ಒಂದು ಕಿ.ಮೀ ಸಂರಕ್ಷಣ ವಲಯದ ಜೊತೆಗೆ ನದಿ ಪಾತ್ರಗಳನ್ನು ಪುನಶ್ಚೇತನಗೊಳಿಸಬಹುದು ಎಂಬ ವಿಶ್ವಾಸ 2003ರ ಅಧಿಸೂಚನೆ ಉತ್ತಮವಾಗಿತ್ತು. ಆದರೆ ಆ ಆದೇಶಕ್ಕೆ ಕಿಮ್ಮತ್ತು ಇಲ್ಲದಂತಾಗಿದೆ’ ಎಂದು ಹಸಿರು ಸೇನೆ ವಿಭಾಗೀಯ ಅಧ್ಯಕ್ಷ ಕೆ.ಎಸ್.ಹರೀಶ್ ಆರೋಪಿಸಿದರು.

ನೀಲಗಿರಿ ನಿಷೇಧ ಅತ್ಯಗತ್ಯ
‘ಅರ್ಕಾವತಿ ಮತ್ತು ಕುಮುದ್ವತಿ ಜಲಾನಯನ ಪ್ರದೇಶಗಳ ವ್ಯಾಪ್ತಿಯ ರೈತರು ಕೃಷಿಗೆ ಕೊಳವೆ ಬಾವಿಗಳನ್ನೆ ಅವಲಂಬಿಸಿದ್ದಾರೆ. ಅನೇಕ ಕಡೆಗಳಲ್ಲಿ ಫ್ಲೋರೈಡ್‌ಯುಕ್ತ ನೀರು ಕೊಳವೆ ಬಾವಿಗಳಲ್ಲಿ ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ಅಂತರ್ಜಲ ಕುಸಿತಕ್ಕೆ ಕಾರಣವಾಗಿರುವ ಅರಣ್ಯ ಇಲಾಖೆ, ತಾನು ಮತ್ತು ರೈತರು ಬೆಳೆಸಿರುವ ಅಪಾರ ಪ್ರಮಾಣದ ನೀಲಗಿರಿ ತೋಪುಗಳನ್ನು ತೆರವುಗೊಳಿಸಿ ನೀಲಗಿರಿ ಬೆಳಸದಂತೆ ನಿಷೇಧ ಮಾಡಬೇಕು’ ಎನ್ನುತ್ತಾರೆ ರೈತ ಎಂ.ಚಂದ್ರಶೇಖರ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.