ಬುಧವಾರ, ಜನವರಿ 22, 2020
28 °C
ವಿಜಯಪುರವನ್ನು ತಾಲ್ಲೂಕಾಗಿಸಲು ಬೇಡಿಕೆ, ಅಭಿವೃದ್ಧಿಗೆ ಹಿಂದೇಟು: ಮುಖಂಡರ ಆರೋಪ

ದೇವನಹಳ್ಳಿಗೆ ನವಬೆಂಗಳೂರು ಎಂದು ಹೆಸರಿಡಿ: ಛಲವಾದಿ ನಾರಾಯಣಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಹೊಂದಿರುವ ದೇವನಹಳ್ಳಿಯನ್ನು ನವದೆಹಲಿಯ ಮಾದರಿಯಲ್ಲಿ ನವಬೆಂಗಳೂರು ಎಂದು ನಾಮಕರಣ ಮಾಡಿ ಈ ಭಾಗದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಇದಕ್ಕೆ ಕ್ಷೇತ್ರದ ಮುಖಂಡರು ಸಹಕಾರ ನೀಡಬೇಕು. ಮುಖ್ಯಮಂತ್ರಿಗಳು ಇದರತ್ತ ಗಮನ ಹರಿಸಬೇಕು’ ಎಂದು ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪಕ್ಷದ ಮುಖಂಡರೊಟ್ಟಿಗೆ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ದೇವನಹಳ್ಳಿ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ವಿಜಯಪುರದ ಅಭಿವೃದ್ಧಿಗೆ ಗಮನಹರಿಸುತ್ತಿಲ್ಲ. ಹಾಗಾಗಿ ಇಲ್ಲಿನ ಜನರು ವಿಜಯಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕು ಎನ್ನುವ ಬೇಡಿಕೆ ಇಡುತ್ತಿದ್ದಾರೆ’ ಎಂದು ಅವರು ಹೇಳಿದರು.

‘ಇದುವರೆಗೆ ರಾಜ್ಯದಲ್ಲಿ ಅಧಿಕಾರ ನಡೆಸಿದ ಸರ್ಕಾರಗಳು, ಮೀಸಲು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿಲ್ಲ. ಅನುದಾನ ತರಲು ಜನಪ್ರತಿನಿಧಿಗಳು ಪ್ರಯತ್ನ ಮಾಡಿಲ್ಲ. ಹಾಗಾಗಿ ಪಟ್ಟಣ ಅಭಿವೃದ್ಧಿಯಿಂದ ಹಿಂದುಳಿದು ಸಮಸ್ಯೆಗಳ ತವರೂರಾಗಿದೆ. ಇಲ್ಲಿನ ಪುರಸಭೆಗೆ ಆಯ್ಕೆಯಾಗಿದ್ದ ಜನಪ್ರತಿನಿಧಿಗಳು 30 ತಿಂಗಳ ಕಾಲ ಸಿಕ್ಕ ಅವಕಾಶ ಉಪಯೋಗ ಮಾಡಿಕೊಳ್ಳುವಲ್ಲಿ ವಿಫಲರಾಗಿ, ಪುರಸಭೆ ದಿವಾಳಿ ಮಾಡಿದ್ದಾರೆ’ ಎಂದು ದೂರಿದರು.

‘ಕೂಡಲೇ ಜಿಲ್ಲಾಧಿಕಾರಿಯವರು ಮಧ್ಯಸ್ಥಿಕೆ ವಹಿಸಿ ಪುರಸಭೆಗೆ ನಡೆಯಬೇಕಿರುವ ಚುನಾವಣೆಗೆ ಅಡ್ಡಿಯಾಗಿರುವ ಗೊಂದಲಗಳನ್ನು ಪರಿಹರಿಸಬೇಕು. ಎಲ್ಲ ಪುರಸಭೆಗಳಿಗೆ ನಡೆಯುತ್ತಿರುವ ಚುನಾವಣೆಯ ಸಮಯದಲ್ಲೇ ಇಲ್ಲಿಯೂ ಚುನಾವಣೆ ನಡೆಯುವಂತೆ ಗಮನಹರಿಸಬೇಕು’ ಎಂದು ಒತ್ತಾಯಿಸಿದರು.

ಪಕ್ಷ ನಂಬಿದವರಿಗೆ ಅನ್ಯಾಯವಾಗುವುದಿಲ್ಲ: ‘ಹೊಸಕೋಟೆ ಕ್ಷೇತ್ರದ ಎಂ.ಟಿ.ಬಿ. ನಾಗರಾಜ್ ಮತ್ತು ಎಚ್.ವಿಶ್ವನಾಥ್ ಅವರು ಈಗ ನಮ್ಮ ಪಕ್ಷದ ನಾಯಕರು. ಅವರಿಗೆ ಸೂಕ್ತ ಸಮಯದಲ್ಲಿ ಉತ್ತಮ ಸ್ಥಾನಮಾನಗಳನ್ನು ಪಕ್ಷ ನೀಡುತ್ತದೆ. ಇದರಲ್ಲಿ ಯಾರಿಗೂ ಗೊಂದಲ ಬೇಡ’ ಎಂದರು.

ಬಿಜೆಪಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ರವಿಕುಮಾರ್, ಮುಖಂಡ ಕನಕರಾಜು, ನಗರ ಘಟಕದ ಅಧ್ಯಕ್ಷ ಚ.ವಿಜಯಬಾಬು, ಗಿರೀಶ್, ನಟರಾಜ್, ಸೊಣ್ಣೇಗೌಡ, ರಮೇಶ್, ಪ್ರಭಾಕರ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು