ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಸರ್ಕಾರಿ ಜಮೀನು ಕಬಳಿಕೆ ಆರೋಪ

ಕೋಟ್ಯಂತರ ರೂಪಾಯಿ ಮೌಲ್ಯದ ತೋಟಗಾರಿಕೆ ಇಲಾಖೆಗೆ ಸೇರಿದ ಸ್ವತ್ತು
Last Updated 22 ಅಕ್ಟೋಬರ್ 2020, 4:11 IST
ಅಕ್ಷರ ಗಾತ್ರ

ದೇವನಹಳ್ಳಿ: ‘ತಾಲ್ಲೂಕಿನ ತೋಟಗಾರಿಕೆ ಇಲಾಖೆಗೆ ಸರ್ಕಾರ ಹಸ್ತಾಂತರಿಸಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು ಕಬಳಿಕೆಗೆ ಸಂಬಂಧಿಸಿದ ಅಧಿಕಾರಿಗಳೇ ಪರೋಕ್ಷ ಬೆಂಬಲ ನೀಡಿದ್ದಾರೆ’ ಎಂದು ತಾಲ್ಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಕೆ. ಶಿವಪ್ಪ ಆರೋಪಿಸಿದರು.

‘ತೋಟಗಾರಿಕೆ ಇಲಾಖೆಗೆ ಸರ್ಕಾರ 1972ರ ಮೇ 29ರಂದು ಕನ್ನಮಂಗಲ ಸ.ನಂ. 90ರಲ್ಲಿ ಮೊದಲ ಹಂತದಡಿ 20 ಎಕರೆ, ನಂತರ 1973ರ ಅ. 19ರಂದು ಸ.ನಂ.73ರಲ್ಲಿ 10 ಎಕರೆ, ಪೂಜನಹಳ್ಳಿ ಸ.ನಂ. 21ರಲ್ಲಿ 5 ಎಕರೆ, ಕನ್ನಮಂಗಲ ಸ.ನಂ. 90ರಲ್ಲಿ 42 ಎಕರೆ ಜಮೀನು ನೀಡಿತ್ತು. 2010ರಲ್ಲಿ ಪೂಜನಹಳ್ಳಿ ಸ.ನಂ. 21ರಲ್ಲಿ ಎರಡನೇ ಹಂತದಲ್ಲಿ 11.27 ಎಕರೆ ಸೇರಿದಂತೆ ಒಟ್ಟು 88.27 ಎಕರೆ ಜಮೀನನ್ನು ತೋಟಗಾರಿಕೆ ಇಲಾಖೆಗೆ ಹಸ್ತಾಂತರಿಸಿತ್ತು’ ಎಂದು ನಗರದ ಬಿ.ಕೆ.ಎಸ್.ಪ್ರತಿಷ್ಠಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

1995-96ರಲ್ಲಿ ವಿಮಾನ ನಿಲ್ದಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಯಿತು. ಆ ನಂತರ ಖಾಸಗಿ ಕಂಪನಿಗಳು ಕನ್ನಮಂಗಲ ಗ್ರಾಮದ ಸುತ್ತಮುತ್ತ ಜಮೀನು ಖರೀದಿಸಲು ಆರಂಭಿಸಿದವು. ಇದನ್ನು ಮನಗಂಡ ತೋಟಗಾರಿಕಾ ಇಲಾಖೆಯು ಜಮೀನು ಹದ್ದುಬಸ್ತು ಮಾಡಲು ತಡೆಗೋಡೆ ನಿರ್ಮಾಣಕ್ಕೆ ಮುಂದಾದಾಗ ಪ್ರಭಾವಿಗಳು ಕೆಲವು ರೈತರನ್ನು ಬಿಟ್ಟು ತಡೆಗೋಡೆ ನಿರ್ಮಾಣಕ್ಕೆ ಅಡ್ಡಿಪಡಿಸುವಂತೆ ನೋಡಿಕೊಂಡರು. ಪಟ್ಟು ಬಿಡದ ತೋಟಗಾರಿಕಾ ಇಲಾಖೆಯು 2008ರಲ್ಲಿ ತಡೆಗೋಡೆ ನಿರ್ಮಿಸಿತು ಎಂದು ಹೇಳಿದರು.

ಸ.ನಂ. 90ರಲ್ಲಿನ ತೋಟಗಾರಿಕೆ ಇಲಾಖೆಗೆ ಸೇರಿದ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಹತ್ತಾರು ರೈತರು ತಮಗೆ ಸಾಗುವಳಿಯಾಗಿದೆ ಎಂದು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಒಟ್ಟು 27.6 ಎಕರೆಯನ್ನು ಓಜೋನ್ ಕಂಪನಿ ಖರೀದಿಸಿದೆ. ಇದಕ್ಕೆ ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಹಕಾರವಿದೆ ಎಂದು ದೂರಿದರು.

ಸರ್ಕಾರದಿಂದ ಅನುಮತಿ ಪಡೆದು ಭೂಮಿ ಖರೀದಿಸಬೇಕೆಂಬ ನಿಯಮವನ್ನು ಗಾಳಿಗೆ ತೂರಲಾಗಿದೆ. ರೈತರ ಪರವಾಗಿ ನ್ಯಾಯಾಲಯ ತೀರ್ಪು ನೀಡಿದೆ ಎಂಬುದಕ್ಕಿಂತ ನ್ಯಾಯಾಲಯ ಉಲ್ಲೇಖಿಸಿರುವಂತೆ ಸ್ಥಳ ಪರಿಶೀಲನೆ ನಡೆಸಬೇಕು. ನೈಜತೆಯಿಂದ ಕೂಡಿದ್ದರೆ ರೈತರಿಗೆ ದಾಖಲಾತಿ ಮಾಡಿಕೊಡುವಂತೆ ತಿಳಿಸಿದೆ. ತಾಲ್ಲೂಕು ದಂಡಾಧಿಕಾರಿ ಈ ಸಂಬಂಧ ತರಾತುರಿಯಲ್ಲಿ ನಾಲ್ವರು ರೈತರ ಹೆಸರಿನಲ್ಲಿ ಪಹಣಿ ಸೇರಿದಂತೆ ಇತರೆ ದಾಖಲೆಯನ್ನು ಸಿದ್ಧಪಡಿಸಿದ್ದಾರೆ ಎಂದು ದೂರಿದರು.

ಪಹಣಿಯಲ್ಲಿ ಹೆಸರು ದಾಖಲಾದ ತಕ್ಷಣ ಆ ನಾಲ್ವರು ರೈತರ 10 ಎಕರೆ ಜಮೀನನ್ನು ರೋನಾಲ್ಡ್‌ ಕೊಲಾಸೋ ಎಂಬುವರು ಜಿಪಿಎ ಮಾಡಿಸಿಕೊಂಡಿದ್ದಾರೆ ಎಂದ ಅವರು, ಒತ್ತುವರಿ ಮತ್ತು ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಮೊತ್ತದ ಸರ್ಕಾರದ ಸ್ವತ್ತು ಕಬಳಿಸುವವರ ವಿರುದ್ಧ ಸೂಕ್ತ ತನಿಖೆಯಾಗಬೇಕು ಎಂದುಹೇಳಿದರು.

ಒಕ್ಕೂಟದ ವಿವಿಧ ಘಟಕದ ಪದಾಧಿಕಾರಿಗಳಾದ ಚಂದ್ರಶೇಖರ್‌, ವೆಂಕಟೇಶ್‍, ಗಜೇಂದ್ರ, ಗಯಾಜ್‍, ಮುನಿರಾಜು, ನಾರಾಯಣಸ್ವಾಮಿ, ನಾಗರಾಜಣ್ಣ, ಸೈಯದ್‍ ಬಾಬಾಜಾನ್‍, ಜಯಶಂಕರ್, ಕಾರಹಳ್ಳಿ ಕೆಂಪಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT