ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯಲ್ಲಿ ಮೊಬೈಲ್‌ ನಿಷೇಧಕ್ಕೆ ಚಿಂತನೆ: ಎಂ.ಟಿ.ಬಿ ನಾಗರಾಜ್‌

ಕೆಪಿಎಸ್ ಶಾಲೆಯಲ್ಲಿ ಸಚಿವ ಎಂ.ಟಿ.ಬಿ ನಾಗರಾಜ್‌ ಹೇಳಿಕೆ
Last Updated 31 ಡಿಸೆಂಬರ್ 2022, 4:37 IST
ಅಕ್ಷರ ಗಾತ್ರ

ಹೊಸಕೋಟೆ: ಸರ್ಕಾರಿ ಶಾಲಾ ಆವರಣದಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಚಿವ ಎಂ.ಟಿ.ಬಿ ನಾಗರಾಜ್‌ ತಿಳಿಸಿದರು.

ತಾಲ್ಲೂಕಿನ ನಂದಗುಡಿ ಹೋಬಳಿಯ ಕೆಪಿಎಸ್ ಶಾಲೆಗೆ ತಮ್ಮ ವೈಯಕ್ತಿಕ ಹಣದಿಂದ 25 ಡೆಸ್ಕ್‌ ಅನ್ನು ಶುಕ್ರವಾರ ಹಸ್ತಾಂತರಿಸಿದ ಬಳಿಕ ಅವರು ಮಾತನಾಡಿದರು.

‘ಮೊಬೈಲ್ ಅತಿಯಾದ ಬಳಕೆಯಿಂದ ಮಕ್ಕಳಲ್ಲಿ ದೈಹಿಕ ಹಾಗೂ ಮಾಸಿಕವಾಗಿ ಪರಿಣಾಮ ಬೀರುತ್ತಿದ್ದು, ಫಲಿತಾಂಶ ಕುಂಠಿತಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ಶಿಕ್ಷಣ ಸಚಿವರು ತಜ್ಞರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

‘ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲಾ, ಕಾಲೇಜುಗಳಿಗೆ ಪ್ರತಿ ವರ್ಷ ನನ್ನ ಸ್ವಂತ ಹಣದಲ್ಲಿ ನೋಟ್ ಪುಸ್ತಕ, ಡೆಸ್ಕ್, ಕುಡಿಯುವ ನೀರಿನ ಘಟಕ, ಕಂಪ್ಯೂಟರ್, ಶಾಲಾ ಅಭಿವೃದ್ಧಿ ಸೇರಿದಂತೆ ಹಲವು ಮೂಲ ಸೌಕರ್ಯ ಒದಗಿಸುತ್ತಿದ್ದೇನೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ ನಾಗರಾಜ್, ನಗರಸಭೆ ಅಧ್ಯಕ್ಷ ಅಫ್ಸರ್, ನಾಡಪ್ರಭು ಕೆಂಪೇಗೌಡರ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ. ಸುರೇಶ್, ಬಿಜೆಪಿ ತಾಲೂಕು ಎಸ್‌.ಸಿ. ಮೋರ್ಚಾ ಅಧ್ಯಕ್ಷ ಕೆ ನಾಗೇಶ್, ವಿ. ನಾರಾಯಣಸ್ವಾಮಿ, ರಾಜಣ್ಣ, ಸಿ. ದೇವರಾಜ್, ನಟರಾಜ್, ರಾಜಶೇಖರ್, ಮುನೇಗೌಡ, ಶಿವರಾಜ್ ಕುಮಾರ್, ಮಂಜುನಾಥ್ ಹಾಗೂ ಶಿಕ್ಷಕ ವೃಂದದವರು ಭಾಗಿಯಾಗಿದ್ದರು.

ಬಚ್ಚೇಗೌಡರ ವಿರುದ್ಧ ಎಂಟಿವಿ ವಾಗ್ದಾಳಿ

ಬಿಜೆಪಿ ಶಿಸ್ತಿನ ಪಕ್ಷ. ಬಚ್ಚೇಗೌಡ ಅವರು ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅವರು ತಮ್ಮ ಪುತ್ರನಿಗೆ ಕನ್ನಡ ರಾಜ್ಯೋತ್ಸವದಲ್ಲಿ ಮತಯಾಚಿಸಿರುವುದು ನಾಚಿಗೇಡಿನ ಸಂಗತಿ ಎಂದು ಸಂಸದ ಬಚ್ಚೇಗೌಡರ ವಿರುದ್ಧ ಸಚಿವ ಎಂಟಿವಿ ನಾಗರಾಜ್ ವಾಗ್ದಾಳಿ ನಡೆಸಿದರು.

‘ಕಳೆದ ಉಪ ಚುನಾವಣೆಯಲ್ಲಿ ಸಂಸದ ಬಚ್ಚೇಗೌಡರು ಆರೋಗ್ಯದ ನೆಪ ಒಡ್ಡಿ ಬಿಜೆಪಿ ಪಕ್ಷದ ಪರ ಪ್ರಚಾರ ನಡೆಸದೆ ಪರೋಕ್ಷವಾಗಿ ತಮ್ಮ ಪುತ್ರ ಶರತ್ ಅವರನ್ನು ಗೆಲ್ಲಿಸಲು ತಾಲ್ಲೂಕಿನ ಎಲ್ಲಾ ಮುಖಂಡರಿಗೆ ತಿಳಿಸಿದ್ದರು. ಪಕ್ಷ ತಾಯಿ ಇದ್ದಂತೆ ಯಾರೇ ಆಗಲಿ ಪಕ್ಷ ದ್ರೋಹ ಮಾಡಬಾರದು. ಮಗನ ಮೇಲೆ ಅಷ್ಟೊಂದು ಅಕ್ಕರೆ ಇದ್ದರೆ ಸಂಸದನ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮಗನ ಪರ ಪ್ರಚಾರ ನಡೆಸಲಿ’ ಎಂದು ಸವಾಲು ಹಾಕಿದರು.

‘ಬಿಜೆಪಿಯಲ್ಲಿ ಅಧಿಕಾರ ಅನುಭವಿಸಿ ಪಕ್ಷದ ಹೈಕಮಾಂಡ್‌ಗೆ ಕೊಟ್ಟ ಮಾತನ್ನು ಧಿಕ್ಕರಿಸಿ ತಾಲ್ಲೂಕಿನಲ್ಲಿ ಬಿಜೆಪಿಗೆ ಹಿನ್ನಡೆಗೆ ಕಾರಣಕರ್ತರಾಗಿದ್ದು, ಮತ್ತೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯ ಪರ ಮತಯಾಚಿಸಿರುವುದು ಪಕ್ಷಕ್ಕೆ ದ್ರೋಹ ಮಾಡಿದಂತೆ. ಈ ಬಗ್ಗೆ ಹೈಕಮಾಂಡ್ ಗಮನಕ್ಕೆ ತಂದು ಶಿಸ್ತಿನ ಕ್ರಮಕ್ಕೆ ಒತ್ತಾಯಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT