ಭಾನುವಾರ, ಆಗಸ್ಟ್ 25, 2019
28 °C

ಗ್ರಾಮ ಪಂಚಾಯತಿ ನೌಕರರ ಪ್ರತಿಭಟನೆ

Published:
Updated:
Prajavani

ಹೊಸಕೋಟೆ: ‘2003ರಲ್ಲಿ ರಾಜ್ಯ ಸರ್ಕಾರ ಮಂಜೂರು ಮಾಡಿರುವ ಗ್ರಾಮ ಪಂಚಾಯತಿ ನೌಕರರ ಕನಿಷ್ಠ ವೇತನವನ್ನು ಇಲಾಖೆ ಮಂಜೂರು ಮಾಡದೆ ನೌಕರರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದೆ’ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ರಾಜ್ಯ ಘಟಕ ಉಪಾಧ್ಯಕ್ಷ ಗೋಪಾಲಕೃಷ್ಣ ಆರೋಪಿಸಿದರು.

ನಗರದ ತಾಲ್ಲೂಕು ಪಂಚಾಯತಿ ಕಚೇರಿಯ ಮುಂದೆ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಗ್ರಾಮ ಪಂಚಾಯತಿ ನೌಕರರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ನೌಕರರು ಸಂಗ್ರಹಿಸಿದ ನೀರಿನ ತೆರಿಗೆ, ಕಂದಾಯದ ಹಣವನ್ನು ಕಾಮಗಾರಿ ಪೂರ್ಣವಾಗುವ ಮೊದಲೇ ಕೆಲವರಿಗೆ ಕೊಡಲಾಗುತ್ತದೆ. ಆದರೆ, ನೌಕರರಿಗೆ ಕಳೆದ 8-10 ತಿಂಗಳಿನಿಂದ ಸಂಬಳ ಕೊಡದೆ ಸತಾಯಿಸಲಾಗುತ್ತಿದೆ’ ಎಂದು ಟೀಕಿಸಿದರು.

ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ನಡೆಸುವುದಾಗಿ ಸಭೆ ಸೇರಿದ್ದ ನೌಕರರ ಮನವಿ ಸ್ವೀಕರಿಸಿ ಮಾತನಾಡಿದ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ವಸಂತಕುಮಾರ್ ಅವರು, ‘ನಿಮ್ಮ ಎಲ್ಲ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಲಾಗುತ್ತದೆ. ಮೊದಲಿಗೆ ಬಾಕಿ ಸಂಬಳ ಪಾವತಿಸಲಾಗುತ್ತದೆ’ ಎಂದು ಭರವಸೆ ನೀಡಿದರು. 

‘ಉಳಿದ ಬೇಡಿಕೆಗಳ ಬಗ್ಗೆ ಶೀಘ್ರವಾಗಿ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುತ್ತದೆ’ ಎಂದು ಹೇಳಿದರು.

ತಾಲ್ಲೂಕು ಪಂಚಾಯತಿ ಅಧ್ಯಕ್ಷ ಜಯದೇವ, ನೌಕರರ ಸಂಘದ ಅಧ್ಯಕ್ಷ ನರಸಿಂಹಯ್ಯ, ಪ್ರಧಾನ ಕಾರ್ಯದರ್ಶಿ ಮೋಹನ್ ಬಾಬು, ವಕೀಲ ಹರೀಂದ್ರ ಇದ್ದರು. ಇದಕ್ಕೂ ಮೊದಲು ಪ್ರತಿಭಟನಾಕಾರರು ಪ್ರವಾಸಿ ಮಂದಿರದಿಂದ ಮೆರವಣಿಗೆ ನಡೆಸಿದರು.

Post Comments (+)