ಗ್ರಾ.ಪಂ ಅಧ್ಯಕ್ಷೆ ನಕಲಿ ಸಹಿ ಮಾಡಿ ಹಣ ವಂಚನೆ

7
ಕಂಟನಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ಕುಮಾರ್ ಆರೋಪ

ಗ್ರಾ.ಪಂ ಅಧ್ಯಕ್ಷೆ ನಕಲಿ ಸಹಿ ಮಾಡಿ ಹಣ ವಂಚನೆ

Published:
Updated:
Prajavani

ಕಂಟನಕುಂಟೆ (ದೊಡ್ಡಬಳ್ಳಾಪುರ): ಪ್ರಭಾರ ಅಧ್ಯಕ್ಷರ ಸಹಿ ನಕಲಿಯಾಗಿ ಬಳಸಿ 14ನೇ ಹಣಕಾಸಿನ ಯೋಜನೆಯಲ್ಲಿ3.37 ಲಕ್ಷವನ್ನು ನಗರದ ಆಕ್ಸಿಸ್ ಬ್ಯಾಂಕಿನಿಂದ ಡ್ರಾ ಮಾಡಿರುವ ಗ್ರಾಮ ಪಂಚಾಯಿತಿಯ ಮೂರು ಮಂದಿ ನೌಕರರನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದು ತಾಲ್ಲೂಕಿನ ಕಂಟನಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ಗ್ರಾಮ ಪಂಚಾಯಿತಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘2018ರ ಅಕ್ಟೋಬರ್ 9ರಿಂದ 20 ದಿನಗಳ ಕಾಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮೀದೇವಿ ಅವರು ಅಧ್ಯಕ್ಷರಾಗಿ ಪ್ರಭಾರ ಅಧಿಕಾರ ವಹಿಸಿಕೊಂಡಿದ್ದರು. ಈ ಸಮಯವನ್ನೇ ಬಳಸಿಕೊಂಡಿರುವ ಕರ ವಸೂಲಿಗಾರ ಮುನಿರಾಜು, ಜವಾನ ಆನಂದ್, ನೀರು ಸರಬರಾಜುದಾರ ಲಘುಮಯ್ಯ ಪಂಚಾಯಿತಿಯಿಂದ 10 ಖಾಲಿ ಚೆಕ್ ಕಳವು ಮಾಡಿದ್ದರು’ ಎಂದರು.

‘ಪ್ರಭಾರ ಅಧ್ಯಕ್ಷೆ ಲಕ್ಷ್ಮೀದೇವಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್ ಅವರ ಸಹಿ ನಕಲು ಮಾಡಿ 9 ಚೆಕ್ ಗಳಿಂದ3.37 ಲಕ್ಷ ಡ್ರಾ ಮಾಡಿದ್ದಾರೆ. ಅವರೊಂದಿಗೆ ಲಘುಮಯ್ಯನ ಪುತ್ರ ಗಿರೀಶ್ ಹಾಗೂ ಶಿವಕುಮಾರ್ ಆಧಾರ್ ಕಾರ್ಡ್ ಬಳಸಿಕೊಂಡು ಬ್ಯಾಂಕಿನಿಂದ ಹಣ ಡ್ರಾ ಮಾಡಿದ್ದಾರೆ. ಈ ದೃಶ್ಯ ಬ್ಯಾಂಕಿನಲ್ಲಿ ಇರುವ ಸಿಸಿ ಟಿವಿ ಕ್ಯಾಮೆರಾದಲ್ಲೂ ದಾಖಲಾಗಿದೆ. ಸಹಿ ಹೊಂದಾಣಿಕೆಯಾಗದೆ ಒಂದು ಚೆಕ್ ಮಾತ್ರ ತಿರಸ್ಕೃತಗೊಂಡಿದೆ’ ಎಂದರು.

‘ಗ್ರಾಮ ಪಂಚಾಯಿತಿ ಖಾತೆಯಿಂದ ಹಣ ಡ್ರಾ ಮಾಡಿದ ತಕ್ಷಣ ಪಿಡಿಒ ಮೊಬೈಲ್ ಗೆ ಸಂದೇಶ ಬರುತ್ತದೆ. ಆದರೆ, ಪಿಡಿಒ ಮೊಬೈಲ್ ಗೆ ಹಣ ಡ್ರಾ ಮಾಡಿರುವ ಬಗ್ಗೆ ಸಂದೇಶ ಬಂದಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಈ ಅಕ್ರಮದಲ್ಲಿ ಪಿಡಿಒ ಸುರೇಶ್ ಕೂಡ ಭಾಗಿಯಾಗಿದ್ದಾರೆ ಎನ್ನುವ ಅನುಮಾನ ಇದೆ. ಇದಲ್ಲದೆ ಈ ಹಿಂದಿನ ಅಧ್ಯಕ್ಷರ ಆಡಳಿತಾವಧಿಯಲ್ಲೂ ಹಣ ದುರುಪಯೋಗವಾಗಿದೆ. ಈ ಬಗ್ಗೆಯೂ ತನಿಖೆ ನಡೆಸುವಂತೆ ಇಒ ಹಾಗೂ ಸಿಇಒಗೆ ದೂರು ನೀಡಲಾಗಿದೆ’ ಎಂದು ಹೇಳಿದರು.

ಈ ಕುರಿತಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸೇವೆಯಿಂದ ವಜಾ ಆಗಿರುವ ಮುನಿರಾಜು, ಆನಂದ್, ಲಘುಮಯ್ಯ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಲಕ್ಕಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !