ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಶಾಹಿ ಕಾರ್ಯವೈಖರಿಗೆ ಆಕ್ರೋಶ

ರಾಜಕೀಯ ಬಿಟ್ಟು ಕೆಲಸ ಮಾಡಿ: ಶಾಸಕರ ತಾಕೀತು
Last Updated 28 ಅಕ್ಟೋಬರ್ 2022, 7:08 IST
ಅಕ್ಷರ ಗಾತ್ರ

ದೇವನಹಳ್ಳಿ: ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ದೂರುಗಳು ಸಾಕಷ್ಟು ಬರುತ್ತಿವೆ. ಅವರಿಗೆ ಸೂಕ್ತವಾಗಿ ಪರಿಹಾರ ಹಾಗೂ ದೂರು ಬಗೆಹರಿಸದಿದ್ದಲ್ಲಿ ದೂರುದಾರರನ್ನು ಕಚೇರಿಗಳಿಗೆ ನುಗ್ಗಿಸಿ, ಅಧಿಕಾರಿಗಳಿಂದ ಯಾವ ರೀತಿ ಕೆಲಸ ಮಾಡಿಸಬೇಕೆಂಬುದು ತಿಳಿದಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ವಿಶ್ವನಾಥಪುರ ಗ್ರಾಮ ಪಂಚಾಯಿತಿಯ ಮೊದಲ ಹಂತದ ಗ್ರಾಮ ಸಭೆ ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಗ್ರಾ.ಪಂ ಸದಸ್ಯರು ಅವರ ವ್ಯಾಪ್ತಿಯಲ್ಲಿ ಸಮಸ್ಯೆ ಪರಿಹಾರ ಮಾಡಿದ್ದ ಪಕ್ಷದಲ್ಲಿ, ಇಷ್ಟೊಂದು ಸಮಸ್ಯೆಗಳು ಉದ್ಭವವಾಗುತ್ತಿರಲಿಲ್ಲ. ರಾಜಕೀಯ ಮಾಡುವುದು ಬಿಟ್ಟು ಜನಪರ ಕೆಲಸ ಮಾಡಿ’ ಎಂದು ತಾಕೀತು ಮಾಡಿದರು.

‘ಗ್ರಾಮ ಸಭೆಯ ಕುರಿತು ಮಾಹಿತಿ ಇದ್ದರೂ ಅಧಿಕಾರಿಗಳು ಹಾಜರಾಗುತ್ತಿಲ್ಲ, ಸ್ವಾತಂತ್ರ್ಯ ಬಂದ 75 ವರ್ಷಗಳು ಕಳೆದರೂ ಅಧಿಕಾರಿಗಳ ಧೋರಣೆ ಬದಲಾಗದೆ ಇರುವುದು ಖೇದದ ಸಂಗತಿ. ಜನರನ್ನು ಕಚೇರಿಗಳಿಗೆ ಅಲೆದಾಡಿಸದೇ, ನಿಗದಿತ ಅವಧಿಯಲ್ಲಿ ಅವರಿಗೆ ಸೇವೆ ನೀಡಿ’ ಎಂದು ತಿಳಿಸಿದರು.

‘ಅಧಿಕಾರಿಗಳಲ್ಲಿ ಜನರ ಸಮಸ್ಯೆ ಆಲಿಸುವಂತಹ ಮನೋಭಾವ ಇರಬೇಕು. ವಿಶ್ವನಾಥಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಭೂಮಿಗೆ ಚಿನ್ನದ ಬೆಲೆ ಬಂದಿದ್ದು, ಇದರಿಂದ ಕಂದಾಯ ಇಲಾಖೆಯಲ್ಲಿ ನಿತ್ಯ ದೂರುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದನ್ನು ಪರಿಹಾರಿಸುವತ್ತಾ ಇಲಾಖೆ ಮುಖ್ಯಸ್ಥರು ವಿಶೇಷ ಗಮನ ಹರಿಸಬೇಕು’ ಎಂದರು.

ಉಪಾಧ್ಯಕ್ಷ ವಿನಯ್‌ಕುಮಾರ್‌ ಮಾತನಾಡಿ, ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ಕೊಡಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಕ್ಕೆ ಒದಗಿಸಲಾಗಿದೆ. ಪ್ರತಿ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಗ್ರಾ.ಪಂ. ಅಧ್ಯಕ್ಷೆ ಕಲ್ಪನಾನಾರಾಯಣಸ್ವಾಮಿ, ತಾ.ಪಂ. ಸಹಾಯಕ ನಿರ್ದೇಶಕ ಎಲ್‌.ಸುನಿಲ್, ಗ್ರಾಪಂ ಪಿಡಿಒ ಎಚ್‌.ಸಿ. ಬೀರೇಶ್, ಕಾರ್ಯದರ್ಶಿ ಎಂ. ಪದ್ಮಮ್ಮ, ಸದಸ್ಯರಾದ ಮಂಗಳಮ್ಮ, ವೆಂಕಟಮ್ಮ, ಭವ್ಯ, ಸಿ. ಮುನೇಗೌಡ, ವಿ. ನವೀನ್, ಆಂಜಿನಮ್ಮ, ಸಿ. ನಾಗಮ್ಮ, ದಿವ್ಯಭಾರತಿ, ನಾಗರಾಜ, ಎಸ್‌.ಎ. ರವಿ, ಆಂಜಿನಮ್ಮ, ಕಲ್ಪನಾ, ನರಸಿಂಹರಾಜು, ಲಕ್ಷ್ಮೀನರಸಮ್ಮ, ಶ್ರಿನಿವಾಸ್, ವೆಂಕಟಾ ಚಲಯ್ಯ, ಬಿ.ಸಿ. ಸುಂದರೇಶ್, ಮಂಜುಳಾ, ಮಂಜುನಾಥ್ ಇದ್ದರು.

ಶಾಲೆ ಅಭಿವೃದ್ಧಿಗೆ ವಿದ್ಯಾರ್ಥಿನಿ ಮನವಿ

ಶಾಲೆಗೆ ಸೂಕ್ತವಾಗಿ ತಡೆ ಗೋಡೆ ಇಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಅವಶ್ಯವಿದೆ. ಹೆಚ್ಚಿನದಾಗಿ ಹೈಸ್ಕೂಲ್‌ ವಿದ್ಯಾರ್ಥಿನಿಯರು ಇರುವುದರಿಂದ ಸ್ಯಾನಿಟರಿ ಪ್ಯಾಡ್‌, ಬರ್ನಿಂಗ್‌ ಯಂತ್ರದ ಬೇಕಿದೆ. ಶಾಲೆಗೆ ಬರಲು ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲ, ಶಾಸಕರು ಬಸ್‌ ಸೌಕರ್ಯ ಕಲ್ಪಿಸಬೇಕು ಎಂದು ಗ್ರಾಮ ಸಭೆಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರು ಮನವಿ ಸಲ್ಲಿಸಿದರು.

ಸೌಲಭ್ಯ ಕಲ್ಪಿಸಲು ನಿರ್ಲಕ್ಷ್ಯ ಆರೋಪ

ಗ್ರಾಪಂ ವ್ಯಾಪ್ತಿಯಲ್ಲಿ ಅಂಬೇಡ್ಕರ್‌ ಭವನ ಮತ್ತು ಇತರೆ ಸಾರ್ವಜನಿಕ ಉದ್ದೇಶಗಳಿಗೆ ಜಾಗ ಗುರುತಿಸಿ ಕೊಡಬೇಕು. ಸರ್ವೆ ಕಾರ್ಯ ಮಾಡಬೇಕು, ಅಧಿಕಾರಿಗಳು ಗ್ರಾಮ ಸಭೆಗೆ ಬರಬೇಕು. ಯಾಕೆ ಸಭೆಗಳಿಗೆ ಬರುತ್ತಿಲ್ಲ ಎಂದು ಚಿಕ್ಕೇಗೌಡ ಆಕ್ರೋಶಗೊಂಡರೆ, ಸೋಲೂರು ಗ್ರಾಮಸ್ಥ ನವೀನ್‌ ಗ್ರಾಮದ ಸಮೀಪದಲ್ಲಿ ಕೋಳಿ ಫಾರಂ ಇರುವುದರಿಂದ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಈ ಕೂಡಲೇ ಇದರ ಸಂಬಂಧಪಟ್ಟಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT