ಶುಕ್ರವಾರ, ನವೆಂಬರ್ 22, 2019
22 °C

ಯೋಜನೆ ಸಕಾಲದ ಅನುಷ್ಠಾನ ಅಗತ್ಯ

Published:
Updated:
Prajavani

ದೇವನಹಳ್ಳಿ: ತಳಸಮುದಾಯಕ್ಕೆ ಸರ್ಕಾರದ ಯೋಜನೆಗಳು ಸಕಾಲದಲ್ಲಿ ಅನುಷ್ಠಾನಗೊಳಿಸಿ ಅರ್ಹರಿಗೆ ತಲುಪಿಸುವುದೇ ಗ್ರಾಮಸಭೆಯ ಉದ್ದೇಶವೆಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ತಿಂಡ್ಲು ಗ್ರಾಮದಲ್ಲಿ ಜಾಲಿಗೆ ಗ್ರಾಮಪಂಚಾಯಿತಿ ವತಿಯಿಂದ ನಡೆದ 2019–20ನೇ ಸಾಲಿನ ಮೊದಲ ಹಂತದ ಗ್ರಾಮ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಪಂಚಾಯತ್ ರಾಜ್ ಇಲಾಖೆ ಕಾರ್ಯಸೂಚಿ ಅನ್ವಯ ಸ್ಥಳೀಯ ಸರ್ಕಾರವೆಂದೇ ಪರಿಗಣಿಸಲ್ಪಟ್ಟಿರುವ ಗ್ರಾಮ ಪಂಚಾಯಿತಿಗಳು ಸಕ್ರಿಯವಾಗಿ ನಿರ್ವಹಣೆ ಮಾಡಿದರೆ ಪ್ರಗತಿ ಸಾಧಿಸಲು ಸಾಧ್ಯ. ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹತ್ತಾರು ಗ್ರಾಮಗಳಿಗೆ ಸರ್ಕಾರದ ಇಲಾಖೆಗಳಿಂದ ಬರುವ ಪ್ರೋತ್ಸಾಹದಾಯಕ ಯೋಜನೆಯಡಿ ಫಲಾನುಫವಿಗಳನ್ನು ಗುರುತಿಸುವುದು, ನಿವೇಶನ, ವಸತಿ, ಉದ್ಯೋಗ ಖಾತ್ರಿ, ರೈತರಿಗೆ ಕೃಷಿ ಕಾರ್ಮಿಕರಿಗೆ ಪ್ರೋತ್ಸಾಹ ನೀಡಿ ಆರ್ಥಿಕ ಸುಧಾರಣೆಗೆ ಉತ್ತೇಜನ ನೀಡಿ ಸ್ವಾವಲಂಬಿ ಜೀವನಕ್ಕೆ ಅವಕಾಶ ಮಾಡಿಕೊಡುವ ಗ್ರಾಮಸಭೆಗಳು ಸುಸೂತ್ರವಾಗಿ ನಡೆದು ಪರಿಣಾಮಕಾರಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಬಡತನ ರೇಖೆಗಿಂತ ಕೆಳಗಿರುವವರನ್ನು ಮೊದಲ ಆಧ್ಯತೆ ನೀಡಬೇಕು. ರಾಜ್ಯ ಸರ್ಕಾರ ಪ್ರಸ್ತುತ ದೇವನಹಳ್ಳಿ ತಾಲ್ಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಗ್ರಾಮ ಪಂಚಾಯಿತಿ ಮತ್ತು ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಮುಂಬರುವ ಬೇಸಿಗೆಗೆ ಈಗಿನಿಂದಲೇ ಜಾಗೃತೆ ವಹಿಸಬೇಕು. ಪಶುವೈದ್ಯಕೀಯ ಇಲಾಖೆ ಪಶುಮೇವಿನ ಬೀಜಕ್ಕೆ ಸರ್ಕಾರದ ಮಟ್ಟದಲ್ಲಿ ಬೇಡಿಕೆ ಸಲ್ಲಿಸಬೇಕು ಎಂದು ಹೇಳಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೊಳವೆ ಬಾವಿಗಳಿಗೆ ಜಲ ಮರುಪೂರಣ ಮತ್ತು ಮನೆಗಳಿಗೆ ಮಳೆ ಕೊಯ್ಲು ಅಳವಡಿಸಲು ಅರಿವು ಮೂಡಿಸಬೇಕು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಕ್ಷೇತ್ರದ ಪ್ರತಿ ಗ್ರಾಮಗಳಿಗೆ ₹ 25 ಲಕ್ಷದಿಂದ ₹ 1 ಕೋಟಿಯವರೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿ ಕೆಲಸ ಪೂರ್ಣಗೊಂಡಿದೆ ಎಂದು ಹೇಳಿದರು.

ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ ಮಾತನಾಡಿ, ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅದರಲ್ಲಿ ಎರಡು ಮಾತಿಲ್ಲ. ಪ್ರಸ್ತುತ ಐವಿಸಿ ರಸ್ತೆ ಆಧುನೀಕರಣವಾಗಬೇಕು, ಜೊತೆಗೆ ಜಿಲ್ಲಾಡಳಿತ ಕೇಂದ್ರದಿಂದ ಕುಂದಾಣ ವೃತ್ತದಿಂದ ಸಾಗಿ ಬೆಂಗಳೂರು ನಗರಕ್ಕೆ ಸಂಪರ್ಕ ಮಾಡುವ ಸಿಟಿಆರ್ ರಸ್ತೆ ಅಗಲೀಕರಣವಾಗಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಟಿ.ಮುರುಡಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಗೋಪಾಲಸ್ವಾಮಿ, ಮುಖಂಡರಾದ ಮಾರುತಿ, ಕೆ.ರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯಬಾಬು, ಉಪಾದ್ಯಕ್ಷೆ ರತ್ನಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್, ಕಾರ್ಯದರ್ಶಿ ಪದ್ಮಮ್ಮಇದ್ದರು.

ಪ್ರತಿಕ್ರಿಯಿಸಿ (+)