ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆಗೆ ಪಂಚ ಹಾರದ ಸ್ವಾಗತ

ದೇವನಹಳ್ಳಿಯಲ್ಲಿ ನಿಸರ್ಗ ನಾರಾಯಣಸ್ವಾಮಿಗೆ ಜೆಡಿಎಸ್‌ ಟಿಕೆಟ್‌: ಕುಮಾರಸ್ವಾಮಿ ಘೋಷಣೆ
Last Updated 29 ನವೆಂಬರ್ 2022, 5:56 IST
ಅಕ್ಷರ ಗಾತ್ರ

ದೇವನಹಳ್ಳಿ: ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಡಿ ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆಯೂ ಸೋಮವಾರ ತಾಲ್ಲೂಕಿನ ಕಾರಹಳ್ಳಿ ಕ್ರಾಸ್‌ ಮೂಲಕ ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಪ್ರವೇಶಿಸಿತು.

ನೂರಾರು ಸಂಖ್ಯೆಯಲ್ಲಿ ಕಾರ್ಯ ಕರ್ತರು ಜಮಾವಣೆಗೊಂಡು ಪುಷ್ಪವೃಷ್ಟಿ ಮೂಲಕ ಸ್ವಾಗತ ಕೋರಿದರು. ಮುಖಂಡರು, ಸ್ಥಳೀಯ ಅಭಿಮಾನಿಗಳು ಚಕ್ಕೋತ ಹಾರ ಹಾಕಿ ಅದ್ದೂರಿಯಾಗಿ ಬರ ಮಾಡಿಕೊಂಡರು. ಯಾತ್ರೆಯು ಕೋಡಗುಕರ್ತಿ ಮಾರ್ಗವಾಗಿ ನಾಡಪ್ರಭುಗಳ ವಂಶಸ್ಥರಾದ ರಣಭೈರೇಗೌಡರ ವೀರಭೂಮಿ ಆವತಿಗೆ ತಲುಪಿತು.

ಕುಮಾರಸ್ವಾಮಿ ಮಾತನಾಡಿ, ಸಾಲ ಮನ್ನಾದಿಂದ ರೈತರು ಆರ್ಥಿಕ ಸದೃಢರಾಗುವುದಿಲ್ಲ. ಮುಂಗಾರು, ಹಿಂಗಾರಿನಲ್ಲಿ ಉಚಿತವಾಗಿ ಬಿತ್ತನೆ ಬೀಜ, ರಸಗೊಬ್ಬರ ಕೊಟ್ಟು ಅವರಲ್ಲಿ ಚೈತನ್ಯ ತುಂಬುವುದು ನಮ್ಮ ಗುರಿ. ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಶೈತ್ಯಾಗಾರ ನಿರ್ಮಿಸುತ್ತೇವೆ. ಯುವಕರಿಗೆ ತರಬೇತಿ ನೀಡಿ ಸ್ವಯಂ ಉದ್ಯೋಗದೊಂದಿಗೆ ಇತರರಿಗೂ ಕೆಲಸ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಖಾಸಗಿ ಶಾಲೆಯ ಶುಲ್ಕ ಭರಿಸಲು ಪೋಷಕರು ಸಾಲಗಾರರಾಗುತ್ತಿದ್ದಾರೆ. ಆದ್ದರಿಂದ ಪ್ರತಿ ಗ್ರಾ.ಪಂ.ನಲ್ಲಿಯೂ ಆಧುನಿಕ ಶಿಕ್ಷಣ ನೀಡುವ ಸುಸಜ್ಜಿತ ಶಾಲೆ ನಿರ್ಮಿಸಲಾಗುವುದು. 30 ಹಾಸಿಗೆ ಸಾಮರ್ಥ್ಯದ ಹೈಟೆಕ್‌ ಆಸ್ಪತ್ರೆ ಸ್ಥಾಪಿಸಿ ಎಲ್ಲಾ ರೋಗಗಳಿಗೂ ಉಚಿತ ಚಿಕಿತ್ಸೆ ನೀಡುತ್ತೇವೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸ್ತ್ರೀಶಕ್ತಿ ಸಾಲ ಮನ್ನಾ ಮಾಡಲಾಗುವುದು. ವಸತಿರಹಿತರಿಗೆ ಸೂರು ಕಲ್ಪಿಸುತ್ತೇವೆ ಎಂದು ಆಶ್ವಾಸನೆ ನೀಡಿದರು.

ಮುಂದಿನ ವಿಧಾನಸಭಾ ಚುನಾವಣೆಗೆ ದೇವನಹಳ್ಳಿ ಕ್ಷೇತ್ರಕ್ಕೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರೇ ಜೆಡಿಎಸ್‌ ಅಭ್ಯರ್ಥಿಯಾಗಲಿದ್ದಾರೆ. ಸರ್ವರನ್ನು ಜೊತೆಗೆ ತೆಗೆದುಕೊಂಡು ಹೋಗುವ ಮನಸ್ಥಿತಿ ಹೊಂದಿರುವ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಿ ಜೆಡಿಎಸ್‌ಗೆ ಬಲ ತುಂಬಬೇಕು ಎಂದು ಕೋರಿದರು.

ಶಾಲಾ ಮಕ್ಕಳೊಂದಿಗೆ ಊಟ: ವೆಂಕಟಗಿರಿಕೋಟೆ, ಬಿಜ್ಜವಾರ, ಗೊಡ್ಲುಮುದ್ದೇನಹಳ್ಳಿ, ಕೋರಮಂಗಲ ಮಾರ್ಗವಾಗಿ ರಥ ಸಾಗಿತು. ಪ್ರತಿ ಗ್ರಾಮದಲ್ಲಿಯೂ ಜಮಾವಣೆಗೊಂಡಿದ್ದ ಜನರು ಹೂವಿನ ಹಾರ ಹಾಕಿ ಕುಮಾರಸ್ವಾಮಿಗೆ ಗೌರವ ಸೂಚಿಸಿದರು. ಹಾರೋಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳೊಂದಿಗೆ ಮಧ್ಯಾಹ್ನದ ಊಟ ಸವಿದ ನಾಯಕರು ಕೆಲಕಾಲ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.

ಯಲಿಯೂರಿಗೆ ಮೊದಲ ಭೇಟಿ: ಯಲಿಯೂರಿನ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಎಚ್‌ಡಿಕೆ, ‘ಸರ್ಕಾರವೂ ತೆರಿಗೆ ಹಣ ಲೂಟಿ ಮಾಡುತ್ತಿದೆ. ಯಲಿಯೂರು ರೇಷ್ಮೆ, ಹೈನುಗಾರಿಕೆಗೆ ಹೆಸರುವಾಸಿಯಾಗಿದೆ. ಅಧಿಕಾರಕ್ಕೆ ಬಂದರೆ ಯಲಿಯೂರಿಗೆ ಮೊದಲ ಭೇಟಿ ನೀಡುತ್ತೇನೆ. ದೇವೇಗೌಡರಿಗೆ ನೀಡಿದ್ದ ಅಭೂತಪೂರ್ವ ಬೆಂಬಲವನ್ನು ಮತ್ತೊಮ್ಮೆ ಜೆಡಿಎಸ್‌ಗೆ ನೀಡಿ’ ಎಂದು ಮನವಿ ಮಾಡಿದರು.

ಚನ್ನರಾಯಪಟ್ಟಣ, ನಲ್ಲೂರು, ಅಣ್ಣೇಶ್ವರ, ಬೂದಿಗೆರೆ, ಕನ್ನಮಂಗಲ, ಜಾಲಿಗೆ, ಕುಂದಾಣ ಮಾರ್ಗವಾಗಿ ಸಾಗಿದ ರಥಯಾತ್ರೆಯು ವಿಶ್ವನಾಪುರ ಸಮೀಪದ ಆಲೂರು ದುದ್ದನಹಳ್ಳಿಯಲ್ಲಿ ಮುಕ್ತಾಯಗೊಂಡಿತು. ಅಲ್ಲಿಯೇ ಮುಖಂಡರು ಗ್ರಾಮ ವಾಸ್ತವ್ಯ ಹೂಡಿದ್ದು, ಮಂಗಳವಾರ ಬೆಳಿಗ್ಗೆ ಪ್ರಗತಿಪರ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.

ಶಾಸಕ ನಿಸರ್ಗ ನಾರಾಯಣಸ್ವಾಮಿ, ಯುವ ನಾಯಕ ನಿಖಿಲ್‌ ಕುಮಾರಸ್ವಾಮಿ, ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಬಿ. ಮುನೇಗೌಡ, ತಾಲ್ಲೂಕು ಅಧ್ಯಕ್ಷ ಆರ್‌. ಮುನೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಮುನಿಕೃಷ್ಣಪ್ಪ, ಟಿಎಪಿಸಿಎಂಎಸ್‌ ಅಧ್ಯಕ್ಷ ಎ. ದೇವರಾಜ್‌, ಜೊನ್ನಾಹಳ್ಳಿ ಮುನಿರಾಜು, ಪಿಕಾರ್ಡ್ ಬ್ಯಾಂಕ್‌ ಅಧ್ಯಕ್ಷ ಪಟಾಲಪ್ಪ, ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ, ಮುಖಂಡರಾದ ಯರ್ತಿಗಾನಹಳ್ಳಿ ಶಿವಣ್ಣ, ಮಹೇಶ್‌, ಕಾಳಪ್ಪನವರ ವೆಂಕಟೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT