ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೌರತ್ವ ನೀಡುವುದೇ ಹೊರತು ಕಿತ್ತುಕೊಳ್ಳುವುದಲ್ಲ’

ಬಿಜೆಪಿ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಜಾಗೃತಿ ಅಭಿಯಾನ ಕರಪತ್ರ ಬಿಡುಗಡೆ
Last Updated 5 ಜನವರಿ 2020, 13:15 IST
ಅಕ್ಷರ ಗಾತ್ರ

ದೇವನಹಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ ಅನ್ವಯ ಪೌರತ್ವ ನೀಡುವುದೇ ಹೊರತು ಯಾರಿಂದಲೂ ಕಿತ್ತುಕೊಳ್ಳುವುದಲ್ಲ ಕಾಂಗ್ರೆಸ್‌ ಭ್ರಮೆ ಸೃಷ್ಟಿಸುತ್ತಿದೆ ಎಂದು ಬಿಜೆಪಿ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ ದೂರಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಬಿಜೆಪಿ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ 2019 ರ ಅನ್ವಯ ಜಾಗೃತಿ ಅಭಿಯಾನ ಕರ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಿಎಎಗೂ ಎನ್‌ಆರ್‌ಸಿಗೂ ಸಂಬಂಧವಿಲ್ಲ. ಆದರೂ ಮುಸ್ಲಿಮರಿಂದ ಪೌರತ್ವ ಕಿತ್ತುಕೊಳ್ಳಲಾಗುತ್ತಿದೆ; ಮುಸ್ಲಿಮರೆಲ್ಲರೂ ನುಸುಳುಕೋರರೆಂದು ತೀರ್ಮಾನಿಸಲಾಗುತ್ತಿದೆ. ಎನ್‌ಆರ್‌ಸಿ ಜಾರಿ ತರುತ್ತಿರುವುದು ಮುಸ್ಲಿಮರನ್ನು ದೇಶದಿಂದ ಹೊರಹಾಕುವ ತಂತ್ರಗಾರಿಕೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ವಿರೋಧ ಪಕ್ಷಗಳು ಪ್ರಚೋದಿಸುತ್ತಿವೆ’ ಎಂದು ಅವರು ಆಕ್ಷೇಪಿಸಿದರು.

‘1947 ರಲ್ಲಿಯೇ ಗಾಂಧೀಜಿ ಈ ಕಾಯ್ದೆಯನ್ನು ಪ್ರಸ್ತಾಪಿಸಿದ್ದರು.1950 ರಲ್ಲಿ ಭಾರತ ಪಾಕಿಸ್ತಾನ ನಡುವಿನ ಒಪ್ಪಂದದ ಪ್ರಕಾರ ಉಭಯ ದೇಶಗಳು ತಮ್ಮಲ್ಲಿ ವಾಸವಾಗಿರುವ ಅಲ್ಪಸಂಖ್ಯಾತರ ರಕ್ಷಣೆ ಹಾಗೂ ಧಾರ್ಮಿಕ ಆಚರಣೆಗಾಗಿ ಗೌರವ ನೀಡಲು ಪೂರ್ಣ ಬದ್ಧತೆ ತೋರುವುದಾಗಿ ಹೇಳಿ ಸಹಿ ಮಾಡಿದ್ದವು. ಈ ಒಪ್ಪಂದವನ್ನು ಭಾರತ ಮುಂದುವರೆಸಿತು ಪಾಕ್‌ ಕೈಬಿಟ್ಟಿತು ಎಂದು ದೂರಿದರು.

ಬಿಜೆಪಿ ಮುಖಂಡ ಜಿ.ಚಂದ್ರಣ್ಣ ಮಾತನಾಡಿ, ವಿರೋಧ ಪಕ್ಷಗಳಿಗೆ ಯಾವುದೇ ವಿಷಯ ಇಲ್ಲ. ಆದ್ದರಿಂದ ಪ್ರತಿಯೊಂದಕ್ಕೂ ವಿರೋಧಿಸುವುದೇ ಅವರ ಜಾಯಮಾನವಾಗಿದೆ. ಮನಮೋಹನ್‌ ಸಿಂಗ್‌ 2013 ರಲ್ಲಿ ಪ್ರಧಾನಿಯಾಗಿದ್ದಾಗಿ ರಾಜ್ಯ ಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಪ್ರಸ್ತಾಪಿಸಿದ್ದರು. ಈಗ ಕಾಂಗ್ರೆಸ್‌ ಪಕ್ಷ ವಿರೋಧಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಮುಸ್ಲಿಂ ಸಮುದಾಯವನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಪಾಕಿಸ್ತಾನ, ಅಫ್ಗಾನಿಸ್ತಾನ, ಬಾಂಗ್ಲಾದೇಶದಲ್ಲಿ ಪೌರತ್ವ ನೀಡುತ್ತಿಲ್ಲ ಎಂದರು.

ಬಿಜೆಪಿ ಮುಖಂಡ ನಾರಾಯಣಗೌಡ ಮಾತನಾಡಿ, ಕಾಂಗ್ರೆಸ್‌ ಪಕ್ಷ ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿದೆ ಎಂದು ಟೀಕಿಸಿದರು.

ತಾಲ್ಲೂಕು ಬಿಜೆಪಿ ಘಟಕ ಅಧ್ಯಕ್ಷ ಬೊಮ್ಮವಾರ ಸುನಿಲ್‌ ಮಾತನಾಡಿ, ಸ್ಥಳೀಯ ಮುಸ್ಲಿಮರು, ಇತರ ಕುಟುಂಬಗಳಿಗೆ ಕರಪತ್ರ ವಿತರಣೆ ಮಾಡಿ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಶಕ್ತಿ ಕೇಂದ್ರ, ಬೂತ್‌ ಮಟ್ಟದ ಅಭಿಯಾನ ನಡೆಸಿದ ನಂತರ ತಾಲ್ಲೂಕು ಮಟ್ಟದಲ್ಲಿ ಬೃಹತ್‌ ಸಮಾವೇಶ ನಡೆಸಿ ಬಿಜೆಪಿ ರಾಜ್ಯ ನಾಯಕರೊಂದಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಪರಿಷದ್‌ ಸದಸ್ಯ ದೇ.ಸು.ನಾಗರಾಜ್‌ ಮಾತನಾಡಿದರು. ಬಿಜೆಪಿ ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿಗಳಾದ ನೀಲೇರಿ ಮಂಜುನಾಥ್‌, ರವಿಕುಮಾರ್‌, ತಾಲ್ಲೂಕು ಎಸ್ಸಿ ಮೋರ್ಚ್‌ ಅಧ್ಯಕ್ಷ ಎಂ.ಶ್ರೀನಿವಾಸ್‌, ಮಹಿಳಾ ಮೋರ್ಚ್‌ ಅಧ್ಯಕ್ಷೆ ನಾಗವೇಣಿ, ಪ್ರಧಾನ ಕಾರ್ಯದರ್ಶಿ ವಿಮಲಾ, ಮುಖಂಡರಾದ ರಾಜಗೋಪಾಲ್‌, ಪುನಿತಾ, ಅಶ್ವಥ್‌ಗೌಡ, ರಂಗಸ್ವಾಮಿ, ಭಗವಾನ್‌ ಹೆಗಡೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT