ಸೋಮವಾರ, ಸೆಪ್ಟೆಂಬರ್ 23, 2019
26 °C

ಅತಿವೃಷ್ಟಿ ಪರಿಣಾಮ ದ್ರಾಕ್ಷಿ ಬೆಲೆ ಕುಸಿತ

Published:
Updated:
Prajavani

ವಿಜಯಪುರ: ಉತ್ತರ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ಮಹಾರಾಷ್ಟ್ರ, ಕೇರಳ ರಾಜ್ಯದಲ್ಲಿ ಹೆಚ್ಚು ಮಳೆಯಾಗಿ ಹಾನಿಯಾಗಿರುವ ಪರಿಣಾಮ ಬೆಂಗಳೂರು ಬ್ಲೂ ದ್ರಾಕ್ಷಿಯ ಬೆಲೆ ಕುಸಿಯುತ್ತಿದ್ದು ರೈತರು ಕಂಗಾಲಾಗಿದ್ದಾರೆ.

‘ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿರುವ ಬೆಂಗಳೂರು ಬ್ಲೂ ದ್ರಾಕ್ಷಿಯೂ ಸೇರಿದಂತೆ ಹಲವಾರು ತಳಿಯ ದ್ರಾಕ್ಷಿ ಬೆಳೆಗಳು ಕಟಾವಾಗದೆ ತೋಟಗಳಲ್ಲೇ ಉಳಿಯುವಂತಾಗಿದೆ. ಹಣ್ಣಾಗಿರುವ ದ್ರಾಕ್ಷಿ ತಡವಾಗಿ ಕಟಾವಾದರೆ ಜೇನುಹುಳ ಮತ್ತು ಕೀಟಬಾಧೆ ಹೆಚ್ಚಾಗುತ್ತದೆ’ ಎಂದು ರೈತ ಕರಗಪ್ಪ ಅವರು ಅಳಲು ತೋಡಿಕೊಂಡರು.

‘ತೋಟದಲ್ಲಿ 700 ಗಿಡಗಳನ್ನು ನಾಟಿ ಮಾಡಿದ್ದೇವೆ. ಬೆಳೆ ತೆಗೆಯಲು ಸುಮಾರು ₹1.50 ಲಕ್ಷಕ್ಕೂ ಹೆಚ್ಚು ಬಂಡವಾಳ ಹೂಡಿದ್ದೇನೆ. ಕೆಂಪು ಮಣ್ಣು, ಕೊಟ್ಟಿಗೆ ಗೊಬ್ಬರ, ರಸಗೊಬ್ಬರಗಳು, ಹಿಂಡಿ ಎಲ್ಲವನ್ನೂ ಕೊಟ್ಟಿದ್ದೇವೆ. ಇದರ ಜೊತೆಗೆ ರೋಗ ನಿಯಂತ್ರಣಕ್ಕಾಗಿ ಸಿಂಪಡಣೆ ಮಾಡಿರುವ ಔಷಧಿಗಳು ₹ 80 ಸಾವಿರಕ್ಕೂ ಹೆಚ್ಚಾಗಿದೆ’ ಎಂದರು

ಜುಲೈ ತಿಂಗಳಿನಲ್ಲಿ ದ್ರಾಕ್ಷಿಯ ಬೆಲೆ ₹ 60 ರಿಂದ ₹ 70 ವರೆಗೂ ಇತ್ತು. ಈಗ ₹ 25 ರಿಂದ ₹ 30ಕ್ಕೆ ಇಳಿಕೆಯಾಗಿದೆ. ಮಳೆ ಜಾಸ್ತಿ ಸುರಿದಿರುವ ಕಾರಣ ಲಾರಿಗಳ ಸಂಚಾರಕ್ಕೆ ತೊಂದರೆಯಾಗಿರುವುದರಿಂದ ಈ ಕಡೆಗೆ ಬರುತ್ತಿಲ್ಲ ಎಂದು ಹೇಳಿದರು.

‘ರೈತರಾಗಿ ಒಕ್ಕಲುತನ ಬಿಡಬಾರದು ಎಂದು ಮರ್ಯಾದೆಗೋಸ್ಕರ ಕೃಷಿ ಮಾಡುತ್ತಿದ್ದೇವೆ. ಸುತ್ತಲಿನ ಹಳ್ಳಿಗಳಲ್ಲಿನ ರೈತರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು ಮೊದಲಿನಿಂದಲೂ ಒಳ್ಳೆಯ ಬೆಳೆಗಳನ್ನು ಬೆಳೆದುಕೊಂಡು ಬಂದಿದ್ದೇವೆ. ಬೇರೆ ರೈತರು ನಮಗೆ ಸಲಹೆ ಕೊಡ್ತಾರೆ, ನಾವು ಅವರ ತೋಟಗಳಿಗೆ ಹೋಗಿ ನಮಗೆ ಗೊತ್ತಿರುವ ವಿಚಾರವನ್ನು ಸಲಹೆ ಕೊಡ್ತೇವೆ ಈ ರೀತಿ ಬೆಳೆದುಕೊಂಡು ಬಂದು ಈಗ ಕಣ್ಣ ಮುಂದೆ ನಮಗೆ ಅನ್ಯಾಯವಾಗುತ್ತಿದ್ದರೂ ಏನೂ ಮಾಡಲಾರದ ಸ್ಥಿತಿಯಲ್ಲಿದ್ದೇವೆ’ ಎಂದು ರೈತ ಕೃಷ್ಣಪ್ಪ ತಿಳಿಸಿದರು.

‘ವ್ಯಾಪಾರಸ್ಥರು ಕೇಳಿದಷ್ಟು ಬೆಲೆಗೆ ಕೊಡಬೇಕು. ಇಲ್ಲವಾದರೆ ತೋಟದಲ್ಲಿ ಬೆಳೆ ಕೊಳೆಯುತ್ತದೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಪುನಃ ಸಾಲ ಮರುಪಾವತಿ ಮಾಡದಿದ್ದರೆ ಹೇಗೆ, ಸರ್ಕಾರಕ್ಕೆ ಎಷ್ಟೇ ಮನವಿ ಮಾಡಿದರೂ  ಏನೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಬಿಳಿ ಚೀಟಿಯ ವ್ಯವಹಾರ: ವ್ಯಾಪಾರಸ್ಥರು, ರೈತರ ತೋಟಗಳಿಗೆ ಬಂದು ಬೆಲೆ ನಿಗದಿಪಡಿಸಿ ಮುಂಗಡ ಕೊಟ್ಟು ಹೋಗುತ್ತಾರೆ. ದ್ರಾಕ್ಷಿ ಕಟಾವು ಮಾಡಲಿಕ್ಕೆ ಬಂದಾಗ ಎಷ್ಟು ಬಾಕ್ಸ್ ಕಟಾವು ಮಾಡಿದ್ದಾರೆ. ಎಷ್ಟು ಟನ್ ಆಗಿದೆ. ಯಾವ ಲಾರಿ ಅಥವಾ ಟೆಂಪೊದಲ್ಲಿ ತುಂಬಿಕೊಂಡು ಹೋಗಿದ್ದಾರೆ ಎನ್ನುವ ಮಾಹಿತಿಯನ್ನು ಒಂದು ಬಿಳಿ ಚೀಟಿಯಲ್ಲಿ ಬರೆದುಕೊಟ್ಟು ಹೋಗ್ತಾರೆ. ಆ ಚೀಟಿ ಕಳೆದುಕೊಂಡರೆ, ಬೆಳೆಯ ಹಣ ವಾಪಸ್‌ ಬರುವುದಿಲ್ಲ. ಅಷ್ಟೂ ಹಣ ನಷ್ಟ ಅನುಭವಿಸಬೇಕಾಗುತ್ತದೆ ಎಂದು ರೈತರೊಬ್ಬರು ನೋವಿನಿಂದ ನುಡಿದರು.

Post Comments (+)