ಆನೆ ಕಸರತ್ತಿಗೆ ಮನಸೋತ ಮಕ್ಕಳು

7
ದೊಡ್ಡಬಳ್ಳಾಪುರದಲ್ಲಿ ಪ್ರದರ್ಶನ ಆರಂಭಿಸಿದ ಗ್ರೇಟ್‌ ಪ್ರಭಾತ್‌ ಸರ್ಕಸ್ ಕಂಪನಿ

ಆನೆ ಕಸರತ್ತಿಗೆ ಮನಸೋತ ಮಕ್ಕಳು

Published:
Updated:
ಸರ್ಕಸ್‌ನಲ್ಲಿ ಆನೆ ನೋಡುಗರಿಗೆ ಪ್ರದರ್ಶನ ನೀಡುತ್ತಿರುವುದು

ದೊಡ್ಡಬಳ್ಳಾಪುರ: ಪ್ರಮುಖ ಸರ್ಕಸ್ ಕಂಪನಿ ‘ಗ್ರೇಟ್ ಪ್ರಭಾತ್ ಸರ್ಕಸ್’ ನಗರದ ತುಮಕೂರು ರಸ್ತೆಯ ಬಸವ ಭವನದ ಸಮೀಪ ಪ್ರದರ್ಶನ ಆರಂಭಿಸಿದೆ. ಅವನತಿಯ ಹಾದಿಯಲ್ಲಿರುವ ಸರ್ಕಸ್ ಕಲೆಗೆ ಸಾಕ್ಷಿಯಾಗಿ ಇಂದಿಗೂ ಅಸ್ತಿತ್ವ ಉಳಿಸಿಕೊಂಡಿರುವ ಇಲ್ಲಿಯ ಆನೆಗಳು, ಮಕ್ಕಳನ್ನು, ಆಫ್ರಿಕನ್‌ ಪ್ರಜೆಗಳ ಕಸರತ್ತು ಸಾಹಸ ಪ್ರಿಯರನ್ನು ಆಕರ್ಷಿಸುತ್ತಿವೆ.

ಸರ್ಕಸ್‌ನಲ್ಲಿ ಏನಿದೆ: ಮಕ್ಕಳಿಗೆ ಸರ್ಕಸ್ ಅಚ್ಚು ಮೆಚ್ಚಾಗುವುದು ಪ್ರಾಣಿಗಳಿಂದಾಗಿ. ಬದಲಾಗಿರುವ ಕಾಲಘಟ್ಟದಲ್ಲಿ ವನ್ಯಪ್ರಾಣಿ ಸಾಕಾಣಿಕೆ ಬಗ್ಗೆ ಕಾನೂನು ಬಿಗಿಯಾದ್ದರಿಂದ ಸಿಂಹ, ಹುಲಿ, ಕರಡಿ ಮೊದಲಾದ ಪ್ರಾಣಿಗಳು ಈಗ ಇಲ್ಲ.

ಇಲ್ಲಿ ಆನೆ, ಒಂಟೆ, ನಾಯಿಗಳು, ಆಸ್ಪ್ರೇಲಿಯನ್ ಗಿಳಿ, ಪಾರಿವಾಳಗಳಿವೆ. ಇವರೊಂದಿಗೆ ಆಫ್ರಿಕಾ, ಚೀನಾ, ಕೀನ್ಯಾದ ಜಿಮ್ನಾಸ್ಟಿಕ್ ಕಲಾವಿದರ ಸಹಿತ ಕಾಶ್ಮೀರ, ನೇಪಾಳ, ಬಂಗಾಳಿಗರೂ ಕಲಾ ಪ್ರತಿಭೆ ಮೆರೆಯುವ ಮೂಲಕ ಸಾಹಸಪ್ರಿಯರ ಮೆಚ್ಚುಗೆ ಪಡೆದಿದೆ.

ಆನೆಗಳಿಂದ ಶಿವಲಿಂಗ ಪೂಜೆ, ಆಕರ್ಷಕ ಜೋಕಾಲಿಗಳ ಪ್ರದರ್ಶನ, ಒಂಟಿ ಚಕ್ರದ ಸೈಕಲ್‌ಗಳ ಮೇಲೆ ಕಸರತ್ತು, ಮೈ ಜುಂ ಎನಿಸುವ ವಿವಿಧ ಅಂಗ ಕಸರತ್ತುಗಳು ರಿಂಗ್ ಡ್ಯಾನ್ಸ್, ಗ್ಲೋಬ್ ಬೈಕ್‌ ರೈಡಿಂಗ್, ಜಿಮ್ನಾಸ್ಟಿಕ್ಸ್, ಫ್ಲೈಯಿಂಗ್ ಟ್ರೋಪೀಸ್, ಮೋಟರ್ ಬೈಕ್ ಜಂಪಿಂಗ್, ಸ್ಕೈವಾಕ್, ಬೇಬಿ ರೋಪ್, ಸೈಕಲ್ ಬ್ಯಾಲನ್ಸ್, ಚಾರ್ಲಿ ಜೋಕರ್ಸ್ ಕಾಮಿಡಿ ಮೊದಲಾದ ಹಲವಾರು ಪ್ರದರ್ಶನಗಳಿವೆ.

ಸರ್ಕಸ್ ಇತಿಹಾಸ: ಗ್ರೇಟ್ ಪ್ರಭಾತ್ ಸರ್ಕಸ್ ಆರಂಭವಾಗಿ ಸುಮಾರು 60 ವರ್ಷ ಸಂದಿದೆ. ತುಮಕೂರು ಮೂಲದ ಮುತ್ತುರಾಜ್ ಸ್ಥಾಪಿಸಿರುವ ಈ ಕಂಪನಿ ಇದೀಗ ಅಳಿವು ಉಳಿವಿನ ಸಮಸ್ಯೆ ಎದುರಿಸುತ್ತಿದೆ. ರಾಜ್ಯದಲ್ಲಿ ಗೀತಾ, ನ್ಯೂ ಪ್ರಭಾತ್ ಸಹಿತ ನಾಲ್ಕು ಕಂಪನಿಗಳನ್ನು ಮುತ್ತುರಾಜ್ ಅಣ್ಣ ತಮ್ಮಂದಿರು ನಡೆಸುತ್ತಿದ್ದರು.

ಐದಾರು ವರ್ಷದ ಹಿಂದೆ ‘ನ್ಯೂ ಪ್ರಭಾತ್’ ಪ್ರದರ್ಶನ ಸ್ಥಗಿತಗೊಳಿಸಿದೆ. ಇದೀಗ ‘ಗ್ರೇಟ್ ಪ್ರಭಾತ್ ಸರ್ಕಸ್’ ಕಂಪನಿಯನ್ನು ಪಿ.ಸಾಯಿಬಾಬಾ ಎಂಬುವವರು ಮುನ್ನಡೆಸುತ್ತಿದ್ದು ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಇಡೀ ದೇಶದಲ್ಲಿ ಪ್ರದರ್ಶನ ನೀಡುತ್ತಿದೆ.

‘ಸರ್ಕಸ್ ಟಿಕೆಟ್ ದರ ಇಂದಿನ ಮಟ್ಟಿಗೆ ಏನೇನೂ ಅಲ್ಲ. ರೀಲ್ ಸಿನಿಮಾಗೆ ₹ 80ರಿಂದ ₹ 100 ಟಿಕೆಟ್‌ ನೀಡುತ್ತೇವೆ. ಆದರೆ ಜೀವದ ಹಂಗು ತೊರೆದು ಎಲ್ಲರ ಮುಂದೆ ಮಾಡುವ ಕಸರತ್ತುಗಳು, ಪ್ರಾಣಿಗಳನ್ನು ಪಳಗಿಸಿ ನಮಗೆ ರಂಜನೆ ನೀಡುವ ದೊಡ್ಡ ಪ್ರಮಾಣದ ಬಂಡವಾಳದ ಸರ್ಕಸ್ ಕಲೆಗೆ ಉತ್ತೇಜನ ನೀಡುವ ಅಗತ್ಯವಿದೆ’ ಎನ್ನುತ್ತಾರೆ ತೂಬಗೆರೆ ಪೇಟೆ ನಿವಾಸಿ ಶ್ರೀನಿವಾಸಯ್ಯ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !