ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರಿವಾಳ ಗುಡ್ಡಕ್ಕೆ ಹಸಿರು ಹೊದಿಕೆ

ದೇವನಹಳ್ಳಿ: ಪರಿಸರಾಸಕ್ತ ಸಂಘಟನೆಗಳ ಪರಿಶ್ರಮದ ಪರಿಣಾಮ
Last Updated 30 ಸೆಪ್ಟೆಂಬರ್ 2020, 4:21 IST
ಅಕ್ಷರ ಗಾತ್ರ

ದೇವನಹಳ್ಳಿ: ನಗರದ ಜನತೆಗೆ ಅವಿನಾಭಾವಬಾಂಧವ್ಯ ಬೆಸೆಯುತ್ತಿರುವ ಐತಿಹಾಸಿಕ ಪಾರಿವಾಳ ಗುಡ್ಡ ಗತಕಾಲದ ಹಸಿರು ತೋರಣದ ಮೆರುಗು ಹೊಂದಿ ನೋಡುಗರಿಗೆ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಅಪಾರ ಜೀವ ವೈವಿಧ‍್ಯದ ಸಸ್ಯ ಸಂಕುಲ ಬೆಳವಣಿಗೆ ಕಾಣುತ್ತಿರುವ ಪಾರಿವಾಳ ಗುಡ್ಡದ ಸರ್ಕಾರಿ ಜಾಗದ44.05 ಎಕರೆ ಪೈಕಿ ಖಾಸಗಿಯವರಿಗೆ ಗುತ್ತಿಗೆ ನೀಡಿ ಉಳಿಕೆ 14.35 ಎಕರೆ ಜಾಗದಲ್ಲಿ ಕಳೆದರಡು ವರ್ಷಗಳಿಂದ ಜೈ ಮಾರುತಿ ಭಕ್ತ ಮಂಡಳಿ ಸೇವಾ ಸಮಿತಿ ಹಾಗೂ ವಿವಿಧ ಪರಿಸರ ಸಂರಕ್ಷಣೆ ಸಮಿತಿಗಳು ಮತ್ತು ಪರಿಸರ ಆಸಕ್ತರು ಗುಡ್ಡದಲ್ಲಿನ ಬೇಲಿಗಿಡಗಳನ್ನು ತೆರವುಗೊಳಿಸಿ ನೆಟ್ಟು ಬೆಳೆಸಿದ ವಿವಿಧ ಜಾತಿಯ ಗಿಡಗಳು ನಳ ನಳಿಸುತ್ತಿವೆ.

ಪ್ರಕೃತಿ ಮಡಿಲಿನ ಸೊಬಗಿನ ಮಧ್ಯೆ ಇರುವ ಶ್ರೀಆಂಜನೇಯ ಸ್ವಾಮಿ ದೇವಾಲಯದ ಸುತ್ತಮುತ್ತ ಪ್ರಶಾಂತ ವಾತಾವರಣ ನಿರ್ಮಾಣಗೊಂಡಿದೆ. ಧ್ಯಾನ ಯೋಗಕ್ಕೆ ಹೇಳಿ ಮಾಡಿಸಿದ ಪ್ರಮುಖ ಸ್ಥಳವಾಗಿ ಮಾರ್ಪಡುತ್ತಿದ್ದು. ಚಾರಣಕ್ಕೂ ಉತ್ತಮವಾಗಿದೆ ಎಂಬುದು ಪರಿಸರ ಪ್ರೇಮಿಗಳ ಸಂತಸಕ್ಕೆ ಕಾರಣ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶ್ವದ ಗಮನ ಸೆಳೆಯುತ್ತಿರುವ ತಾಲ್ಲೂಕು ಕೇಂದ್ರದಲ್ಲಿ ದಿನೆ ದಿನೇ ಜನಸಂಖ್ಯೆ ಹೆಚ್ಚುತ್ತಿದೆ. ನಗರಕ್ಕೂ ಪಾರಿವಾಳ ಗುಡ್ಡಕ್ಕೂ ಶತಮಾನಗಳ ಅವಿನಾಭಾವ ಸಂಬಂಧವಿದೆ. ಹತ್ತಾರು ವರ್ಷಗಳಿಂದ ದೇವಾಲಯ ಹೊರತುಪಡಿಸಿ ಯಾವುದೇ ರೀತಿಯ ಅಭಿವೃದ್ಧಿ ಕಾಣದ ಗುಡ್ಡದಲ್ಲಿ ವಿವಿಧ ಸಂಘಟನೆಗಳ ಅಸಕ್ತಿಯಿಂದ ಪರಿಸರ ಸಂರಕ್ಷಣೆಯ ಜೊತೆಗೆ ಕೆಲವೊಂದು ಮೂಲ ಸೌಲಭ್ಯಕ್ಕೆ ವೈಯಕ್ತಿಕವಾಗಿ ಒತ್ತು ನೀಡುತ್ತಿವೆ.

‘ನಗರದಿಂದ ಕೇವಲ 2 ಕಿ.ಮೀ. ದೂರವಿರುವ ಪಾರಿವಾಳದ ಗುಡ್ಡಕ್ಕೆ ವಾಯುವಿಹಾರಿಗಳು ತಂಡೋಪಾದಿಯಲ್ಲಿ ಬರುತ್ತಾರೆ. ರಾಷ್ಟ್ರೀಯ ಹೆದ್ದಾರಿ 7ರ ಬೈಪಾಸ್ ರಸ್ತೆಗೆ ಹೊಂದಿಕೊಂಡಿರುವ ಗುಡ್ಡಕ್ಕೆ ನಂದಿ ಬೆಟ್ಟಕ್ಕೆ ಬರುವ ಪ್ರವಾಸಿಗರು ಕೆಲಹೊತ್ತು ಇಲ್ಲಿ ವಿಶ್ರಾಂತಿ ಪಡೆದು ಗುಡ್ಡದ ಪ್ರಶಾಂತತೆಯ ವಾತಾವರಣ ಕಣ್ತುಂಬಿಕೊಂಡು ತೆರಳುತ್ತಾರೆ. ಇಂತಹ ಉತ್ತಮ ಜೀವ ವೈವಿಧ‍್ಯದ ತಾಣದಲ್ಲಿ ವನ ಸಂಪತ್ತು ರಕ್ಷಣೆ ಮಾಡಲು ಸಂಘ ಸಂಸ್ಥೆಗಳು ಜವಾಬ್ದಾರಿ ಹೊತ್ತುಕೊಳ್ಳಬೇಕು’ ಎನ್ನುತ್ತಾರೆ ಪರಿಸರ ಪ್ರೇಮಿಗಳು.

‘ಪ್ರಸ್ತುತ ಪಾರಿವಾಳಗುಡ್ಡದ ವ್ಯಾಪ್ತಿಯ ಒಟ್ಟಾರೆ ವಿಸ್ತೀರ್ಣ 44.05 ಎಕರೆ ಇದೆ. ಈ ಪೈಕಿ ಖಾಸಗಿ ಸಂಸ್ಥೆಗೆ 99 ವರ್ಷಕ್ಕೆ 35 ಎಕರೆ ಗುತ್ತಿಗೆ ನೀಡಿ ಎರಡು ದಶಕ ಕಳೆದಿದೆ. ಒಟ್ಟು ವಿಸ್ತೀರ್ಣದ ಸರ್ಕಾರಿ ಜಾಗ ಉಳಿಸಿಕೊಂಡಿದ್ದರೆ ಸಾವಿರಾರು ಗಿಡಮರಗಳನ್ನು ಬೆಳೆಸಿ ವನಸಂಪತ್ತು ವೃದ್ಧಿಸಬಹುದಿತ್ತು. ರಾಜಕೀಯ ಮುಖಂಡರ ದೂರ ದೃಷ್ಟಿ ಚಿಂತನೆ ಇಲ್ಲದಿರುವುದು, ಇಚ್ಛಾಶಕ್ತಿ ಕೊರತೆ ಈ ಮಟ್ಟಕ್ಕೆ ತಂದಿದೆ. ಪ್ರಸ್ತುತ ಇರುವ ಜಾಗಕ್ಕೂ ಸಂಕಷ್ಟ ಬರುವ ಸಾಧ‍್ಯತೆ ಇದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ ಪರಿಸ್ಥಿತಿ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸೇವಾ ಸಮಿತಿ ಪದಾಧಿಕಾರಿಗಳು.

ಕಳೆದ ವರ್ಷ ಗುಡ್ಡದ ಆಯಕಟ್ಟಿನ ಜಾಗದಲ್ಲಿ ವಿವಿಧ ಜಾತಿಯ 400 ಆರ್ಯುವೇದ ಸಸಿಗಳನ್ನು ನೆಡಲಾಗಿತ್ತು. ಬೇಸಿಗೆಯಲ್ಲಿ ನೀರುಣಿಸಿ ಸಂರಕ್ಷಣೆ ಮಾಡಿದ ಪರಿಣಾಮ ಆಳೆತ್ತರಕ್ಕಿಂತ ಹೆಚ್ಚು ಎತ್ತರಕ್ಕೆ ಸಸಿಗಳು ಬೆಳವಣಿಗೆಯಾಗಿವೆ. ಕೆಲ ಕಿಡಿಗೇಡಿಗಳು ನಾಲ್ಕಾರು ಬೆಳೆದಿರುವ ಗಿಡಗಳನ್ನು ಕತ್ತರಿಸಿದ್ದಾರೆ.

ಸಾರ್ವಜನಿಕರ ಸ್ವತ್ತು ಭವಿಷ್ಯದ ಪಿಳಿಗೆಗೆ ಉಳಿಯಬೇಕು. ಒಬ್ಬರಿಂದ ಅಭಿವೃದ್ಧಿ ಸಾಧ್ಯವಿಲ್ಲ. ಬೆಳೆದ ಗಿಡ ಮರಗಳಿಗೆ ನಿರ್ವಹಣೆ ಮಾಡುವವರು ಮುಂದೆ ಬರಬೇಕು. ಸಸಿಗಳನ್ನು ನೆಟ್ಟು ಹೋದರೆ ಪ್ರಯೋಜನವಿಲ್ಲ. ದೈನಂದಿನ ಬೆಳವಣಿಗೆಯನ್ನು ಗಮನಿಸುವ ಕಾವಲುಗಾರರಾದರೆ ಮಾತ್ರ ಪ್ರಸ್ತುತ ಸಸ್ಯರಾಶಿಯನ್ನು ಸಸ್ಯ ಕಾಶಿಯನ್ನಾಗಿ ಮಾಡಲು ಸಾಧ್ಯ. ಪರಿಸರ ಸಂರಕ್ಷಣೆಗೆ ದೃಢತೆ ಬೇಕು ಎನ್ನುತ್ತಾರೆ ಜೈ ಮಾರುತಿ ಭಕ್ತಮಂಡಳಿ ಸೇವಾ ಸಮಿತಿ ಅಧ್ಯಕ್ಷ ಶಿವನಾಪುರ ರಮೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT