ಸೋಮವಾರ, ಮಾರ್ಚ್ 8, 2021
27 °C
ಎರಡನೇ ಹಂತದ ಬೆಳೆಯೂ ನೆಲಕ್ಕೆ ಬೀಳುವ ಭಯ, ಬೆಳೆ ಮೀರಿಸಿ ಬೆಳೆದ ಅಣ್ಣೆಸೊಪ್ಪಿನ ಕಳೆ

ನೆಲಕಚ್ಚಿದ ರಾಗಿಫಸಲು: ರೈತರಲ್ಲಿ ಆತಂಕ

ವಡ್ಡನಹಳ್ಳಿ ಭೋಜ್ಯಾನಾಯ್ಕ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮುಂಗಾರು ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ರಾಗಿ ಫಸಲು ನೆಲಕ್ಕೆ ಮುದುಡಿ, ಅಣ್ಣೆಸೊಪ್ಪು ಬೆಳೆಯನ್ನು ಮೀರಿ ಬೆಳೆಯುತ್ತಿದ್ದು ರೈತರಲ್ಲಿ ನಿರಾಸೆ ಮೂಡಿಸಿದೆ.

ಜಿಲ್ಲೆಯ ನಾಲ್ಕು ತಾಲ್ಲೂಕಿನಲ್ಲಿ 43 ಸಾವಿರ ಹೆಕ್ಟೇರ್ ರಾಗಿ ಸೇರಿದಂತೆ 53,403 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 4ರಷ್ಟು ಹೆಚ್ಚುವರಿ ಬಿತ್ತನೆಯಾಗಿದೆ. ಮುಂಗಾರು ಆರಂಭದಲ್ಲಿ ಬಿತ್ತನೆಗೆ ಮಳೆ ಪ್ರಮಾಣ ಕಡಿಮೆಯಾಗಿತ್ತು. ನಂತರ ಸುರಿದ ಮಳೆಗೆ ಕೃಷಿ ಚಟುವಟಿಕೆ ಚುರುಕುಗೊಂಡು ಸಕಾಲದಲ್ಲಿ ಬೆಳೆಗೆ ಮಳೆ ಸುರಿದಿತ್ತು. ಪರಿಣಾಮ ರೈತರು ಸಮೃದ್ದ ಫಸಲು ಬರುವ ಆಶಾಭಾವನೆಯಲ್ಲಿದ್ದರು. ಆದರೆ ಅಕ್ಟೋಬರ್ ತಿಂಗಳ ಅಂತಿಮದಲ್ಲಿ ನಾಲ್ಕೈದು ದಿನ ಸುರಿದ ಮಳೆಗೆ ತೆನೆಯ ಕಾಳಿನಲ್ಲಿ ಹಾಲು ತುಂಬಿತ್ತು. ನಂತರ ಫಸಲು ಬೆಳವಣಿಗೆಯಲ್ಲಿ ರಾಗಿಕಾಳು ಬಲಿತು ಸಮೃದ್ದ ಫಸಲು ಕೊಯ್ಲಿಗೆ ಮೊದಲೇ ನೆಲಕ್ಕೆ ಬಿದ್ದು ರೈತರಿಗೆ ಸಂಕಷ್ಟ ತಂದಿದೆ.

ಮುಂಗಾರು ಬಿತ್ತನೆ ಎರಡು ಹಂತದಲ್ಲಿ ಆಗಿದೆ. ಮೊದಲ ಹಂತದಲ್ಲಿ ಬಿತ್ತನೆಯಾದ ರಾಗಿ ಫಸಲು ನೆಲಕ್ಕುರುಳುತ್ತಿದೆ. ಎರಡನೇ ಹಂತದಲ್ಲಿನ ರಾಗಿ ಫಸಲಿಗೆ ಯಾವುದೇ ಸದ್ಯ ರೀತಿಯ ತೊಂದರೆ ಇಲ್ಲವಾದರೂ, ಮುಂದಿನ ದಿನಗಳಲ್ಲಿ ಮಳೆ ಬಂದರೆ ಮೊದಲ ಹಂತದಲ್ಲಿ ಬಿತ್ತನೆ ಮಾಡಿದ ರಾಗಿ ಫಸಲು ಕೈಗೆಟುಕುವುದು ದುಸ್ತರವಾಗಬಹುದು. ಎರಡನೇ ಹಂತದ ರಾಗಿ ಫಸಲೂ ನೆಲಕ್ಕುರಳಬಹುದು ಎಂಬುದು ರೈತರ ಆತಂಕ.

ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಶೇ 60ರಷ್ಟು ರಾಗಿ, ಮುಸುಕಿನ ಜೋಳ, ತೊಗರಿ ಬಿತ್ತನೆಯಾಗಿದೆ. ಎರಡನೇ ಹಂತದಲ್ಲಿ ಶೇ 40 ರಷ್ಟು ಬಿತ್ತನೆಯಾಗಿದೆ. ಪ್ರಸಕ್ತ ಸಾಲಿನ ಮುಂಗಾರು ಬಿತ್ತನೆಯ ಒಟ್ಟು ಗುರಿ 60.403 ಸಾವಿರ ಹೆಕ್ಟೇರ್ ಪೈಕಿ ಶೇ 80ರಷ್ಟು ಬಿತ್ತನೆ ಆಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜೀವ ಸುಲೋಚನಾ.

ಜಿಲ್ಲೆಯಲ್ಲಿ ರಾಗಿ ಮತ್ತು ಇತರೆ ಬೆಳೆಗಳಲ್ಲಿ ಅಣ್ಣೆಸೊಪ್ಪಿನ ಕಳೆ ಎಗ್ಗಿಲ್ಲದೆ ಬೆಳೆದಿದೆ. ಬೆಳೆಯ ನಡುವೆ ಬೆಳೆಯುತ್ತಿರುವ ಈ ಕಳೆ ಇಡೀ ಫಸಲನ್ನು ಆಪೋಶನ ಮಾಡಿದೆ. ಈ ಸಸ್ಯದಿಂದ ಬೆಳೆ ಇಳುವರಿ ಕುಂಟಿತವಾಗುವುದಲ್ಲದೆ ಮಣ್ಣಿನ ಫಲವತ್ತತೆಯ ಸಂಪೂರ್ಣ ಲಾಭ ಪಡೆದು ಬಿತ್ತಿದ ಬೆಳೆಗೆ ಕಂಟಕವಾಗಲಿದೆ. ಕಡಿಮೆ ತೇವಾಂಶದಲ್ಲಿ ವೇಗವಾಗಿ ಬೆಳೆಯುವ ಈ ಅಣ್ಣೆಸೊಪ್ಪಿನ ಸಸ್ಯವನ್ನು ಬುಡಸಮೇತ ಕಿತ್ತುಹಾಕಿ ಒಣಗಿದ ನಂತರ ಸುಟ್ಟು ಹಾಕಬೇಕು. ಇಲ್ಲದಿದ್ದರೆ ಮುಂದಿನ ಮುಂಗಾರು ಸಾಲಿನಲ್ಲಿ ಕಳೆ ಬೀಜ ದ್ವಿಗುಣಗೊಂಡು ರೈತರಿಗೆ ಮತ್ತಷ್ಟು ಸಂಕಷ್ಟ ತರಲಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು