ಜಿಎಸ್‌ಟಿಗೆ ವರುಷ, ವ್ಯಾಪಾರಸ್ಥರ ಹರುಷ

7

ಜಿಎಸ್‌ಟಿಗೆ ವರುಷ, ವ್ಯಾಪಾರಸ್ಥರ ಹರುಷ

Published:
Updated:
ವಿಜಯಪುರದಲ್ಲಿ ದಿನಸಿ ಅಂಗಡಿಯಲ್ಲಿ ವ್ಯಾಪಾರಿ ಭೈರೇಗೌಡ 

ವಿಜಯಪುರ: ತೆರಿಗೆ ಸುಧಾರಣಾ ಕ್ರಮವಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು ಜಾರಿಗೆ ಬಂದು ಜೂನ್ 30ಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ. ಈ ಒಂದು ವರ್ಷದಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸಿದ್ದು, ವರ್ತಕರು, ವ್ಯಾಪಾರಸ್ಥರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜಿಎಸ್‌ಟಿ ಜಾರಿಗೆ ಬರುವುದರೊಂದಿಗೆ ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ, ಸೇವಾ ತೆರಿಗೆ, ಐಷಾರಾಮಿ ತೆರಿಗೆ ಸೇರಿದಂತೆ ಎಲ್ಲ ಪರೋಕ್ಷ ತೆರಿಗೆಗಳು ರದ್ದಾಗಿರುವುದರಿಂದ ವ್ಯಾಪಾರಸ್ಥರು, ಸರ್ಕಾರಕ್ಕೆ ಕಟ್ಟಬೇಕಾಗಿರುವ ತೆರಿಗೆಯನ್ನು ಕಟ್ಟಲು ಕಷ್ಟವಾಗುತ್ತಿಲ್ಲ ಎಂದು ಹೇಳುತ್ತಾರೆ.

ಪ್ರಜಾವಾಣಿ ಯೊಂದಿಗೆ ಮಾತನಾಡಿದ ಬೇಕರಿ ಉದ್ಯಮಿ ವಿ.ಪಿ. ಚಂದ್ರು, ‘ಜಿಎಸ್‌ಟಿ ಜಾರಿಗೆ ಬಂದಾಗ ಹೊಂದಿಕೊಳ್ಳುವುದು ಕಷ್ಟಕರವಾಗಿತ್ತು. ಈಗ ಹೊಂದಿಕೊಂಡಿದ್ದೇವೆ. ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಪ್ರತಿ ಬಾರಿಯೂ ತೆರಿಗೆ ಕಟ್ಟುವಂತಿಲ್ಲ. ಜಿಎಸ್‌ಟಿ ಇಡೀ ದೇಶವನ್ನು ಸಮಾನ ಮಾರುಕಟ್ಟೆಯಡಿ ತಂದಿದೆ‌. ಇದು ಜಾರಿಗೆ ಬರುವುದಕ್ಕಿಂತ ಮುಂಚೆ ನಾವು ವರ್ಷದಲ್ಲಿ ₹12 ಲಕ್ಷಕ್ಕೆ ಸುಮಾರು ₹30 ಸಾವಿರ ತೆರಿಗೆ ಕಟ್ಟುತ್ತಿದ್ದೇವು. ಈಗ ₹25 ಲಕ್ಷಕ್ಕೆ ₹24 ಸಾವಿರ ತೆರಿಗೆ ಕಟ್ಟುತ್ತಿದ್ದೇವೆ. ಇದರಿಂದ ನಮಗೆ ಸಾಕಷ್ಟು ಹಣ ಉಳಿತಾಯವಾಗುವುದರ ಜೊತೆಗೆ ತೆರಿಗೆ ಕಟ್ಟಬೇಕಾದರೂ ಯೋಚನೆ ಮಾಡುವ ಅಗತ್ಯವಿಲ್ಲ’ ಎಂದರು.

ವ್ಯಾಪಾರಿ ನೂರುಲ್ಲಾ ಮಾತನಾಡಿ, ಪ್ರಸ್ತುತ ನಮ್ಮ ದೇಶದಲ್ಲಿ ವಿವಿಧ ರೀತಿಯ ತೆರಿಗೆ ವಿಧಾನಗಳಿವೆ. ಕೇಂದ್ರ ಮತ್ತು ಅಬಕಾರಿ ಸುಂಕ, ಸೇವಾ ತೆರಿಗೆ ಮತ್ತು ಕಸ್ಟಮ್ಸ್ ತೆರಿಗೆಗಳನ್ನು ಕೇಂದ್ರ ಸರ್ಕಾರ ಹಾಕುತ್ತದೆ. ಮೌಲ್ಯವರ್ಧಿತ ತೆರಿಗೆವ್ಯಾಟ್, ಮನರಂಜನಾ ತೆರಿಗೆ, ಐಷಾರಾಮಿ ತೆರಿಗೆ ಅಥವಾ ಲಾಟರಿ ತೆರಿಗೆಗಳನ್ನು ಆಯಾ ರಾಜ್ಯ ಸರ್ಕಾರಗಳು ವಿಭಿನ್ನವಾಗಿ ನಿಭಾಯಿಸುತ್ತವೆ. ಈ ಎಲ್ಲಾ ತೆರಿಗೆಗಳನ್ನು ಒಂದೇ ತೆರಿಗೆ ವಿಧಾನದಡಿ ತರಲು ಜಿಎಸ್‌ಟಿ ಅನ್ನು ಜಾರಿಗೆ ತಂದಿದ್ದಾರೆ.

ಇದರಿಂದ ದೇಶಾದ್ಯಂತ ಯಾವುದೇ ಅಡೆತಡೆಯಿಲ್ಲದೆ ವಹಿವಾಟು ನಡೆಸಬಹುದು. ವಹಿವಾಟು ವೆಚ್ಚ ಕೂಡ ಕಡಿಮೆಯಾಗುತ್ತದೆ. ಭಾರತದ ಆರ್ಥಿಕ ಮಟ್ಟ ಸುಧಾರಣೆಯಾಗುತ್ತಿರುವ ಇಂದಿನ ದಿನಗಳಲ್ಲಿ ಈ ತೆರಿಗೆ ಪದ್ಧತಿ ಪ್ರಸ್ತುತವಾಗಿದೆ. ಇದು ಭ್ರಷ್ಟತೆಯನ್ನು ಕಡಿಮೆ ಮಾಡಿ ಹೆಚ್ಚು ಪಾರದರ್ಶಕವಾಗಿ ಆಡಳಿತ ನಡೆಸಲು ಅನುಕೂಲವಾಗುತ್ತದೆ ಎಂದರು.

ಜೀವನ ಸರಳವಾಗುತ್ತದೆ

ಸರಕು ಮತ್ತು ಸೇವಾ ತೆರಿಗೆಯನ್ನು ಅತ್ಯಂತ ಸರಳವಾಗಿ ಹೇಳುವುದಾದರೆ, ಒಂದು ಉತ್ಪಾದನಾ ಘಟಕವನ್ನು ತೆರೆದಿದ್ದರೆ. ಇದಕ್ಕೆ ಕೇಂದ್ರ ಸರ್ಕಾರಕ್ಕೆ ತೆರಿಗೆ ಕಟ್ಟಬೇಕು. ಜೊತೆಗೆ ಪ್ರತ್ಯೇಕ ರಿಟರ್ನ್ ಫೈಲ್ ಮಾಡಬೇಕು. ಆದರೆ ಬೇರೆ ಚಿಲ್ಲರೆ ಗ್ರಾಹಕರಿಗೆ ಉತ್ಪನ್ನಗಳನ್ನು ಪೂರೈಸುವಾಗ ತೆರಿಗೆ ಕಟ್ಟಬೇಕಾಗಿಲ್ಲ ಹಾಗೂ ರಿಟರ್ನ್ ಫೈಲ್ ಮಾಡಬೇಕಾಗಿಲ್ಲ. ಜಿಎಸ್‌ಟಿ ಇಡೀ ದೇಶಕ್ಕೆ ಏಕರೂಪ ತೆರಿಗೆ ವಿಧಾನವಾಗಿರುವುದರಿಂದ ಬೇರೆ ರಾಜ್ಯಗಳಲ್ಲಿ ಕಂಪೆನಿ ಆರಂಭಿಸಬೇಕಾದರೂ ಅಲ್ಲಿ ತೆರಿಗೆ ಕಟ್ಟಬೇಕಾಗಿಲ್ಲ. ಆದ್ದರಿಂದ ಇದು ಸರಳವೆನಿಸುತ್ತದೆ. ಈ ಹೊಸ ತೆರಿಗೆ ನಮ್ಮ ಜೀವನವನ್ನು ಸರಳತೆಗೆ ತರುತ್ತದೆ ಎನ್ನುತ್ತಾರೆ ಉದ್ಯಮಿ ಸೋಮಶೇಖರ್. 

ನೋಟುಗಳು ಅಮಾನೀಕರಣ ಹಾಗೂ ಜಿಎಸ್‌ಟಿ ಜಾರಿ ನಂತರ ವ್ಯಾಪಾರ ವಹಿವಾಟುಗಳೇ ಕಡಿಮೆಯಾಗಿಬಿಟ್ಟವು. ಮೊದಲು ಸಾಲ ಕೇಳಿದರೆ ಧೈರ್ಯವಾಗಿ ಕೊಡುತ್ತಿದ್ದರು, ಈಗ ಸಾಲ ಕೊಡುವವರೇ ಇಲ್ಲವಾಗಿದ್ದಾರೆ
- ಭೈರೇಗೌಡ, ವ್ಯಾಪಾರಿ

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !