ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರಿಗೆ ಹೊರಟು ನಿಂತ ಅತಿಥಿ ಕಾರ್ಮಿಕರು

ಸರಿಯಾದ ವ್ಯವಸ್ಥೆ ಕಲ್ಪಿಸದ ಮಾಲೀಕರು, ಗುತ್ತಿಗೆದಾರರಲ್ಲಿ ಈಗ ಆತಂಕ
Last Updated 5 ಮೇ 2020, 17:20 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಹೊರ ರಾಜ್ಯಗಳಿಂದ ಇಲ್ಲಿನ ಕೈಗಾರಿಕೆಗಳು ಸೇರಿದಂತೆ ವಿವಿಧ ವಲಯದಲ್ಲಿ ಕೆಲಸ ಮಾಡಲು ಬಂದಿದ್ದ ಅತಿಥಿ ಕಾರ್ಮಿಕರಿಗೆ ಲಾಕ್‌ಡೌನ್‌ ಸಂದರ್ಭದಲ್ಲಿ ಸೂಕ್ತ ಸೌಲಭ್ಯ ನೀಡಲಿಲ್ಲ. ಸೌಜನ್ಯದಿಂದ ನಡೆಸಿಕೊಳ್ಳಲಿಲ್ಲ. ಈಗ ಕಾರ್ಮಿಕರು ತಮ್ಮ ಊರುಗಳಿಗೆ ಹೊರಡಲು ಸಿದ್ಧರಾಗಿ ನಿಂತಿದ್ದಾರೆ. ಲಾಕ್‌ಡೌನ್‌ ಸಡಿಲಗೊಂಡು ಒಂದಿಷ್ಟು ಕೆಲಸಗಳು ಆರಂಭವಾಗುತ್ತಿದ್ದಂತೆ ಕೈಗಾರಿಕೆಗಳ ಮಾಲೀಕರು, ಕಟ್ಟಡ ನಿರ್ಮಾಣದ ಗುತ್ತಿಗೆದಾರರು ಹೋಗಬೇಡಿ ಎಂದು ಬೇಡಿಕೊಳ್ಳುಲು ಮುಂದಾಗಿರುವುದು ಎಷ್ಟರಮಟ್ಟಿಗೆ ಸರಿ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್‌.ಚಂದ್ರ ತೇಜಸ್ವಿ ಪ್ರಶ್ನಿಸಿದ್ದಾರೆ.

ಯಾವುದೇ ಒಬ್ಬ ವ್ಯಕ್ತಿ ನಮ್ಮೊಂದಿಗೆ ಇದ್ದಾಗ ಆತನ ಮಹತ್ವ ನಮಗೆ ಅರ್ಥವಾಗುವುದಿಲ್ಲ. ಆದರೆ, ಆ ವ್ಯಕ್ತಿ ನಮ್ಮಿಂದ ದೂರವಾದಗಷ್ಟೇ ಆ ವ್ಯಕ್ತಿಯ ಪ್ರಾಮುಖ್ಯತೆ ನಮಗೆ ಎಷ್ಟರಮಟ್ಟಿಗೆ ಇದೆ ಎನ್ನುವುದು ತಿಳಿಯುತ್ತದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಹೊರ ರಾಜ್ಯಗಳಿಂದ ಇಲ್ಲಿಗೆ ಬಂದಿದ್ದ ಅತಿಥಿ ಕಾರ್ಮಿಕರಿಗೆ ನ್ಯಾಯುತವಾಗಿ ಸಲ್ಲಬೇಕಿದ್ದ ಯಾವುದೇ ಸೌಲಭ್ಯ ನೀಡಲಿಲ್ಲ. ಇಡೀ ದಿನ ಶ್ರಮವಹಿಸಿ ಕೆಲಸ ಮಾಡುವ ಕಾರ್ಮಿಕರು ರಾತ್ರಿ ಸರಿಯಾಗಿ ಮಲಗಲು ಮನೆಯೂ ಇಲ್ಲದೆ ಹಂದಿ ಗೂಡುಗಳಂತಹ ಮನೆಗಳಲ್ಲಿ ಕಾಲಕಳೆಯುತ್ತಿದ್ದರು. ಕಾರ್ಮಿಕರಿಂದ ದುಡಿಸಿಕೊಳ್ಳುವ ಯಾವೊಬ್ಬ ಮಾಲೀಕರು ಸಹ ಕೂಲಿ ನೀಡಿದರೆ ನಮ್ಮ ಕರ್ತವ್ಯ ಮುಗಿಯಿತು ಎನ್ನುವಂತೆ ವರ್ತಿಸಿದರು.

ಕೆಲವರು ಒಂದೆರಡು ವಾರಗಳ ಕಾಲ ತಮ್ಮ ಕಾರ್ಮಿಕರಿಗೆ ಊಟದ ಸೌಲಭ್ಯ ಕಲ್ಪಿಸಿದರು. ನಂತರದ ದಿನಗಳಲ್ಲಿ ಕಾರ್ಮಿಕರಿಗೆ ದಾನಿಗಳು ನೀಡುತ್ತಿದ್ದ ದಿನಸಿ, ಊಟವೇ ಆಧಾರವಾಗಿತ್ತು. ಈಗ ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಇಲ್ಲಿಗೆ ಬಂದಿದ್ದ ಅತಿಥಿ ಕಾರ್ಮಿಕರು ಕೆಲವರ ನಡವಳಿಕೆಗೆ ಬೇಸತ್ತು ಹಾಗೂ ಇನ್ನು ಕೆಲವರು ತಮ್ಮ ಕುಟುಬಂದವರನ್ನು ನೋಡಲು ಊರುಗಳಿಗೆ ಹೊರಟು ನಿಂತಿದ್ದಾರೆ ಎಂದರು.

ವಲಸೆ ಪದ ಬಳಕೆ ಸರಿಯಲ್ಲ:ಕೆಲವರು ಬದುಕು ಕಟ್ಟಿಕೊಳ್ಳಲು ಉದ್ಯೋಗ ಹುಡುಕಿಕೊಂಡು ಬಂದಿರಬಹುದು. ಆದರೆ, ಅದೆಷ್ಟೋ ಜನ ಕಾರ್ಮಿಕರನ್ನು ಕಟ್ಟಡ ನಿರ್ಮಾಣದ ಗುತ್ತಿಗೆದಾರರು, ಕೈಗಾರಿಕೆಗಳವರು ಉತ್ತರ ಭಾರತದಿಂದ ಇಲ್ಲಿಗೆ ಕರೆತಂದಿದ್ದರು. ಹೀಗಾಗಿ ವಲಸೆ ಕಾರ್ಮಿಕರು, ನಿರ್ಗತಿಕರು ಎಂದು ಕರೆಯುವುದು ತಪ್ಪು. ’ಅತಿಥಿ ಕಾರ್ಮಿಕರು’ ಎನ್ನುವ ಪದಬಳಕೆ ಸೂಕ್ತ ಎನ್ನುತ್ತಾರೆ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್‌.ಚಂದ್ರತೇಜಸ್ವಿ.

ಮಾಲೀಕರಿಗೆ ಈಗ ಮೂಡಿದ ಆತಂಕ: ಕೋಳಿ ಸಾಕಾಣಿಕೆ, ಇಟ್ಟಿಗೆ ಗೂಡು,ರೈಲಿನಲ್ಲಿ ಬರುತ್ತಿದ್ದ ಸಿಮೆಂಟ್‌ ಚೀಲ ಕೆಳಗಿಳಿಸುವುದು, ಕೈಗಾರಿಕೆಗಳಲ್ಲಿ ದೈಹಿಕ ಬಲದ ಕೆಲಸಗಳನ್ನು ಮಾಡುತ್ತಿದ್ದವರು ಬಹುತೇಕ ಉತ್ತರ ಭಾರತದ ರಾಜ್ಯಗಳಿಂದ ಬಂದಿದ್ದ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಈ ಎಲ್ಲಾ ಕಾರ್ಮಿಕರು ಊರುಗಳಿಗೆ ಹೊರಟು ನಿಂತಿದ್ದಾರೆ. ಈ ಕಾರ್ಮಿಕರು ಮತ್ತೆ ಬರದಿದ್ದರೆ ಈ ಕೆಲಸಗಳನ್ನು ಮಾಡಲು ಎಲ್ಲಿಂದ ಕಾರ್ಮಿಕರನ್ನು ಕರೆತರುವುದು ಎನ್ನುವ ಆತಂಕ ಎಲ್ಲಾ ಮಾಲೀಕರಲ್ಲೂ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT