ಸೋಮವಾರ, ಮೇ 16, 2022
30 °C
ಪ್ರಗತಿಪರ ರೈತ ವಿಜಯ್‌ಕುಮಾರ್‌ ಕಂಡುಕೊಂಡ ವಿನೂತನ ಪ್ರಯೋಗ

ವಿನೂತನ ಪ್ರಯೋಗ: ಹಂದಿ ಹಾವಳಿ ತಡೆಗೆ ‘ತಲೆ ಕೂದಲು’

ನಟರಾಜ ನಾಗಸಂದ್ರ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಹಂದಿಗಳು ಬೆಳೆಗಳಿಗೆ ದಾಳಿ ಇಟ್ಟು ಹಾಳು ಮಾಡುವುದನ್ನು ತಡೆಯಲು ಪ್ರಗತಿಪರ ರೈತ ವಿಜಯ್‌ಕುಮಾರ್‌ ಕಂಡುಕೊಂಡಿರುವ ಸುಲಭ ಉಪಾಯ ಮನುಷ್ಯರ ತಲೆ ಕೂದಲು ತೋಟದ ಸುತ್ತ ಹಾಕುವ ಮೂಲಕ ಹಂದಿಗಳು ತೋಟಕ್ಕೆ ನುಗ್ಗದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಸಾಸಲು ಹೋಬಳಿ ಗುಂಡಮಗೆರೆ, ಹೊಸಹಳ್ಳಿ, ಉಜ್ಜನಿ ಈ ಭಾಗದ ಗ್ರಾಮಗಳ ಸುತ್ತ ಸಣ್ಣಪುಟ್ಟ ಕಿರುಚಲು ಕಾಡು, ಬೆಟ್ಟದ ಸಾಲುಗಳು ಹೆಚ್ಚಾಗಿದೆ. ಬಾಳೆ, ಮುಸುಕಿನಜೋಳ, ರಾಗಿ, ಬೀಜೋತ್ಪಾದನೆಗಾಗಿ ಈರುಳ್ಳಿ, ಸಿಹಿ ಗೆಣಸು ಸೇರಿದಂತೆ ಇತರೆ ಬೆಳೆಬೆಳೆಯಲಾಗುತ್ತದೆ.

ಸಾಸಲು ಹೋಬಳಿಯಲ್ಲಿನ ಮಾಕಳಿ ದುರ್ಗ, ಉಜ್ಜನಿ ಬೆಟ್ಟ, ಜಾಲಿಗೆ ಬೆಟ್ಟದಲ್ಲಿ ಚಿರತೆ ಬಿಟ್ಟರೆ ಉಳಿದಂತೆ ಹಂದಿ, ನವಿಲುಗಳ ಸಂಖ್ಯೆಯೇ ಹೆಚ್ಚು. ಚಿರತೆಗಳು ಬೆಳೆಗಳಿಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ. ಆದರೆ ಹಂದಿ, ನವಿಲುಗಳ ಹಾವಳಿಯಂತೂ ಮಿತಿ ಮೀರಿದ್ದು ರೈತರು ಬೆಳೆದ ಬೆಳೆ ಮನೆ ಸೇರುವ ತನಕವು ನಂಬಿಕೆಯೇ ಇಲ್ಲದಾಗಿದೆ.

ಇದೇ ರೀತಿ ಹೊಸಹಳ್ಳಿ ಸಮೀಪದ ದಿನ್ನೆ ಪ್ರದೇಶದಲ್ಲಿ ವಿಜಯ್‌ಕುಮಾರ್‌ ಅವರು ನೀಲಗಿರಿ ಮರಗಳನ್ನು ತೆರವುಗೊಳಿಸಿ 6 ಎಕರೆ ಪ್ರದೇಶದಲ್ಲಿ ಏಲಕ್ಕಿ ಬಾಳೆ ಸಸಿ ನಾಟಿ ಮಾಡಿ ಬೆಳೆಸುತ್ತಿದ್ದಾರೆ.ಬಾಳೆ ಗಿಡಗಳು ಇರುವ ಸಮೀದದಲ್ಲೇ ನೂರಾರು ಎಕರೆಯಷ್ಟು ವಿಶಾಲವಾದ ಭೂಮಿ ಇದೆ. ಅಲ್ಲಲ್ಲಿ ಕುರುಚಲು ಗಿಡಗಳು, ಕೆರೆ ಅಂಗಳವೂ ಸಮೀಪದಲ್ಲೇ ಇದೆ. ಹೀಗಾಗಿ ರಾತ್ರಿ ವೇಳೆ ಹಂದಿಗಳ ಹಿಂಡು ತೋಟಕ್ಕೆ ನುಗ್ಗಿ ಬೆಳೆ ಹಾಳುಮಾಡುತ್ತಿದ್ದವು.

‘ಹೇರ್‌ ಕಟ್ಟಿಂಗ್‌ ಶಾಪ್‌ಗಳಲ್ಲಿ ಸಿಗುವ ತಲೆ ಕೂದಲು ಸಣ್ಣದಾಗಿ ಕತ್ತರಿಸಲಾಗಿರುತ್ತದೆ. ಈ ಕೂದಲನ್ನು ತಂದು ತೋಟದ ಅಂಚಿನಲ್ಲಿ ಹಂದಿಗಳು ಹೆಚ್ಚಾಗಿ ಒಡಾಡುವ ಸ್ಥಳದಲ್ಲಿ ಉದುರಿಸಲಾಗಿದೆ.

ಹಂದಿಗಳು ಆಹಾರ ಹುಡುಕುವಾಗ ಸಾಮಾನ್ಯವಾಗಿ ನೆಲವನ್ನು ಮೂಸುತ್ತಾ ಬರುತ್ತವೆ. ತೋಟದ ಅಂಚಿನಲ್ಲಿ ಹಾಕಲಾಗಿರುವ ಕೂದಲು ಹಂದಿಗಳು ನೆಲವನ್ನು ಮೂಸುವಾಗ ಮೂಗಿನ ಒಳಕ್ಕೆ ಹೋಗಿ ಚುಚ್ಚಿದಂತಾಗುತ್ತವೆ. ಹೀಗಾಗಿ ಮತ್ತೆಂದೂ ತೋಟದ ಅಂಚಿನ ಕಡೆಗೆ ಸುಳಿಯದಂತೆ ಓಡಿ ಹೋಗುತ್ತವೆ’ ಎಂದು ಕೂದಲು ಹಾಕಿರುವ ಬಗ್ಗೆ ವಿವರ ನೀಡಿದರು ವಿಜಯ್‌ಕುಮಾರ್‌.

ಸಾಂಪ್ರದಾಯಿಕ ವಿಧಾನಗಳ ಮೂಲಕ ಕಾಡು ಪ್ರಾಣಿಗಳ ಪ್ರಾಣಕ್ಕು ಕುತ್ತಾಗದಂತೆ, ಹಾಗೆಯೇ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಬಹುದಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು