ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ಹೈನುಗಾರಿಕೆ: ಆತಂಕದಲ್ಲಿ ರೈತರು

Last Updated 28 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ವಿಜಯಪುರ: ಬಯಲುಸೀಮೆ ಜನರು ಬರಗಾಲದಿಂದಾಗಿ ಪ್ರತಿದಿನ ಆತಂಕದಲ್ಲಿ ಜೀವನ ಸಾಗಿಸಬೇಕಾಗಿದೆ. ಈ ಭಾಗದ ಜನರ ಜೀವನಕ್ಕೆ ಆಧಾರವಾಗಿದ್ದ ರೇಷ್ಮೆ ಮತ್ತು ಹೈನುಗಾರಿಕೆಯಲ್ಲಿ ರೇಷ್ಮೆ ಉದ್ಯಮ ನಷ್ಟದಲ್ಲಿರುವ ಬೆನ್ನಲ್ಲೇ ಹೈನುಗಾರಿಕೆಯೂ ಕೈಕೊಡಲಾರಂಭಿಸಿದೆ.

‘ಮುಂಗಾರಿನ ಆರಂಭದಲ್ಲಿದ್ದೇವೆ. ರಾಜ್ಯದಲ್ಲಿ ಈಗಾಗಲೇ ಬಹುತೇಕ ಕಡೆಯಲ್ಲಿ ಮಳೆ ಆರಂಭವಾಗಿದ್ದರೂ ನಮ್ಮ ಕಡೆಯಲ್ಲಿ ಇದುವರೆಗೂ ಮಳೆ ಹನಿ ನೋಡಲಿಕ್ಕೆ ಸಾಧ್ಯವಾಗಿಲ್ಲ’ ಎಂದು ರೈತ ಸುಬ್ಬರಾಯಪ್ಪ ಆತಂಕ ವ್ಯಕ್ತಪಡಿಸಿದರು.

‘ರೇಷ್ಮೆ ಮತ್ತು ಹೈನುಗಾರಿಕೆ ಎರಡು ಉದ್ಯಮಗಳ ನಡುವೆ ಉತ್ತಮ ನಂಟಿದೆ. ರೇಷ್ಮೆಹುಳು ಸಾಕಾಣಿಕೆಯಿಂದ ಸಿಗುವಂತಹ ಮೇವಿನಿಂದ ರಾಸುಗಳನ್ನು ಸಾಕಿ ಹಾಲು ಉತ್ಪಾದನೆ ಮಾಡುತ್ತಿದ್ದೆವು. ಕೊಳವೆಬಾವಿಯಲ್ಲಿನ ಅಲ್ಪಸ್ವಲ್ಪ ನೀರಿನಲ್ಲಿ ಮೇವು ಬೆಳೆದು ಪಶುಪಾಲನೆ ಮಾಡುತ್ತಿದ್ದೆವು. ಇದರಿಂದ ಜೀವನ ನಿರ್ವಹಣೆ ಆಗುತ್ತಿತ್ತು. ಈಗ ನೀರಿನ ಕೊರತೆಯಿಂದಾಗಿ ರೇಷ್ಮೆ ಬೆಳೆಯೂ ಇಲ್ಲ, ರಾಸುಗಳಿಗೆ ಮೇವು ಇಲ್ಲದೆ ಹಾಲಿನ ಉತ್ಪಾದನೆ ಕಡಿಮೆಯಾಗಿ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ’ ಎಂದರು.

‘ನೀರಿಗೆ ಪರ್ಯಾಯ ವ್ಯವಸ್ಥೆಯಿಲ್ಲ. ಬರಡು ಭೂಮಿಯನ್ನು ನೋಡಿದರೆ ರಾತ್ರಿ ನೆಮ್ಮದಿಯಿಂದ ನಿದ್ರೆ ಮಾಡಲಿಕ್ಕೂ ಆಗುತ್ತಿಲ್ಲ. ನಮ್ಮನ್ನು ಸಂರಕ್ಷಣೆ ಮಾಡುತ್ತಿದ್ದ ಎರಡೂ ಉದ್ಯಮಗಳು ನಷ್ಟದಲ್ಲಿವೆ. ಭವಿಷ್ಯದ ಬಗ್ಗೆ ಆತಂಕ ಎದುರಾಗಿದೆ’ ಎಂದು ರೈತ ನಾರಾಯಣಪ್ಪ ಅಳಲು ತೋಡಿಕೊಂಡರು

ರೈತ ಮುಖಂಡ ಕಲ್ಯಾಣ್‌ಕುಮಾರ್ ಬಾಬು ಮಾತನಾಡಿ ‘30 ವರ್ಷಗಳ ಹಿಂದೆ ಏತ ನೀರಾವರಿ ಮೂಲಕ ಬೆಳೆಗಳನ್ನು ಬೆಳೆಯುತ್ತಿದ್ದ ರೈತರು ಇಂದು ಹನಿ ನೀರಿಗೂ ಪರದಾಡುವ ಸ್ಥಿತಿ ತಲುಪಿದ್ದಾರೆ. ಜಲತಜ್ಞರು 4 ದಶಕಗಳಲ್ಲಿ ಈ ಭಾಗ ಮರುಭೂಮಿಯಾಗಲಿದೆ ಎಂದು ಎಚ್ಚರಿಸಿದ್ದರು. ಇದರ ಭಾಗವಾಗಿ ನದಿಜೋಡಣೆಯ ಹೋರಾಟ ಹುಟ್ಟಿಕೊಂಡಿತ್ತು’ ಎಂದು ಅವರು ಹೇಳಿದರು.

‘ನೀರಾವರಿ ತಜ್ಞ ಡಾ.ಪರಮಶಿವಯ್ಯ ಅವರ ನೇತೃತ್ವದಲ್ಲಿ ವರದಿ ತಯಾರಿಸಿ ಪಶ್ಚಿಮಘಟ್ಟಗಳಲ್ಲಿ ವ್ಯರ್ಥವಾಗಿ ಹರಿಯುವ ಮಳೆ ನೀರನ್ನು ಗುರುತ್ವಾಕಾರ್ಷಣೆಯ ಮೂಲಕ ಬರಡಾಗುತ್ತಿರುವ ಜಿಲ್ಲೆಗಳಿಗೆ ಹರಿಸಬಹುದೆಂಬ ವರದಿಯನ್ನು ಸರ್ಕಾರಕ್ಕೆ ನೀಡಿದ್ದರು. ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದ್ದರೆ, ಜನಪ್ರತಿನಿಧಿಗಳು ಈ ವಿಚಾರದ ಬಗ್ಗೆ ಕಾಳಜಿ ವಹಿಸಿದ್ದರೆ ಇಷ್ಟೊಂದು ಗಂಭೀರ ಸಮಸ್ಯೆಯನ್ನು ನಾವು ಎದುರಿಸಬೇಕಿರಲಿಲ್ಲ. ಈ ಭಾಗದಲ್ಲಿನ ಕೆರೆಗಳನ್ನು ತುಂಬಿಸಿ ಅಂತರ್ಜಲದ ಮಟ್ಟವನ್ನು ಹೆಚ್ಚಿಸದಿದ್ದರೆ ರೈತರ ಭವಿಷ್ಯ ಕರಾಳವಾಗುತ್ತದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಅಂತರ್ಜಲ ಮಟ್ಟ ಹೆಚ್ಚಿಸಲುಸರ್ಕಾರಕೊಳವೆ ಬಾವಿಗಳ ಬಳಿ ಇಂಗು ಗುಂಡಿ ನಿರ್ಮಿಸುವಂತೆ ಹಣ ಬಿಡುಗಡೆ ಮಾಡುತ್ತದೆ. ಕೃಷಿ ಹೊಂಡಗಳಿಗೂ ಧನಸಹಾಯ ನೀಡುತ್ತದೆ. ಆದರೆ ಮಳೆಯೆ ಇಲ್ಲದೆ ಇಂಗು ಗಂಡಿಗಳಿಂದ ಪ್ರಯೋಜನವೇನು. ಮಳೆಯಿಲ್ಲದೆ ಕಂಗಾಲಾಗಿದ್ದೇವೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಕೂಡಲೇ ನೀರಿನ ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT