ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದಿ ತ್ಯಾಜ್ಯ: ಸಂಚಾರಕ್ಕೆ ಸಂಕಷ್ಟ

Last Updated 21 ಅಕ್ಟೋಬರ್ 2021, 5:00 IST
ಅಕ್ಷರ ಗಾತ್ರ

ದೇವನಹಳ್ಳಿತಾಲ್ಲೂಕಿನ ಕುಂದಾಣ ಗ್ರಾಮದಿಂದ ಗ್ರಾಮ ಪಂಚಾಯಿತಿ ಕಡೆಗೆ ಸಂಚರಿಸುವ ಮುಖ್ಯರಸ್ತೆಯ ಪಕ್ಕದಲ್ಲಿರುವ ಚರಂಡಿಗೆ ಹಂದಿ ಗೂಡುಗಳಿಂದ ಹೊರಬರುವ ಕೊಳಚೆ ನೀರನ್ನು ಬಿಡಲಾಗಿದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವಾಗ ವಿಪರೀತ ದುರ್ವಾಸನೆ ಬೀರುತ್ತಿದೆ.

ಸ್ವಚ್ಛತೆಗೆ ಆದ್ಯತೆ ನೀಡಿ ನೈರ್ಮಲ್ಯ ಕಾಪಾಡಲು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಕ್ರಮವಹಿಸಿಲ್ಲ. ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸಾರ್ವಜನಿಕ ಆಸ್ಪತ್ರೆ, ಬೆಸ್ಕಾಂ, ರೈತ ಸಂಪರ್ಕ ಕೇಂದ್ರ ಸೇರಿದಂತೆ ಹಲವಾರು ಸಾರ್ವಜನಿಕರಿಗೆ ಸೇವೆ ಒದಗಿಸುವಂತಹ ಇಲಾಖೆಗಳಿಗೆ ಹೋಗಲು ಪ್ರತಿನಿತ್ಯ ಜನರು ಈ ರಸ್ತೆಯಲ್ಲಿ ಓಡಾಡುತ್ತಾರೆ.

ಈ ರಸ್ತೆಯಲ್ಲಿ ಹೋಗುವಾಗಲೆಲ್ಲಾ ಮೂಗು ಮುಚ್ಚಿಕೊಂಡು ಹೋಗಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿ ಅಥವಾ ಯಾವುದೇ ಇಲಾಖೆಯ ಅಧಿಕಾರಿಗಳು ಗಮನಹರಿಸುತ್ತಿಲ್ಲ. ರಸ್ತೆ ಪಕ್ಕದಲ್ಲಿ ಜಲಗೇರಮ್ಮ ದೇವಾಲಯವೂ ಇದೆ. ಸಂಬಂಧಪಟ್ಟವರು ಗಮನಹರಿಸಿ, ರಸ್ತೆಗೆ ಹರಿಯುತ್ತಿರುವ ಹಂದಿಗಳ ತ್ಯಾಜ್ಯವನ್ನು ನಿಲ್ಲಿಸಬೇಕು. ಈ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕು.

ವೆಂಕಟೇಶಪ್ಪ, ರೈತ ಮುಖಂಡ, ಕುಂದಾಣ.

ರಸ್ತೆಬದಿ ಕಸದ ಹಾವಳಿ

ಸೂಲಿಬೆಲೆ ಪಟ್ಟಣದ ಶಿಡ್ಲಘಟ್ಟ ಮುಖ್ಯರಸ್ತೆ ಬದಿಯಲ್ಲಿ ಕಸ ಹಾಕುತ್ತಿರುವುದರಿಂದ ದುರ್ವಾಸನೆ ಬೀರುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆಬದಿ ಕಸ ಹಾಕುವುದನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕು.

ಪಟ್ಟಣದ ಮುಖ್ಯರಸ್ತೆ ಬದಿಯ (5ನೇ ವಾರ್ಡ್, ಸ್ಮಶಾನದ ಸಮೀಪ) ಕಸ ಮತ್ತಿತರ ತ್ಯಾಜ್ಯ ಎಸೆಯುವುದರಿಂದ ಕೊಳೆತು ದುರ್ವಾಸನೆ ಬೀರುತ್ತಿದೆ. ಕಸದ ರಾಶಿಯಲ್ಲಿ ನಾಯಿಗಳು ಬಿಡುಬಿಟ್ಟಿದ್ದು, ಇವುಗಳ ಹಾವಳಿ ಜಾಸ್ತಿಯಾಗುತ್ತಿದೆ. ಆಕಸ್ಮಿಕವಾಗಿ ರಸ್ತೆಗೆ ನುಗ್ಗುವ ನಾಯಿಗಳಿಂದ ದ್ವಿಚಕ್ರಸವಾರರು ಬೀಳುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕಸ ವಿಲೇವಾರಿ ಮಾಡಲು ಹಾಗೂ ರಸ್ತೆಬದಿ ತ್ಯಾಜ್ಯ ಹಾಕದಂತೆ ಕ್ರಮಕೈಗೊಳ್ಳಬೇಕು.

ರಮೀತ್, ಸೂಲಿಬೆಲೆ.

ಕೆರೆಗೆ ಕೊಳಚೆ ನೀರು ಸೇರ್ಪಡೆ

ದೊಡ್ಡಬಳ್ಳಾಪುರನಗರದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಒಳಚರಂಡಿ ವ್ಯವಸ್ಥೆಯಿಂದ ಕೊಳಚೆ ನೀರು ಕೆರೆ ಸೇರುವಂತಾಗಿದೆ.

ಇಡೀ ನಗರದ ಒಳಚರಂಡಿ ನೀರು ಹರಿದು ಹೋಗುವ ಪೈಪ್‌ಲೈನ್‌ ನಾಗರಕೆರೆ ಅಂಗಳದ ಅಂಚಿನಲ್ಲಿ ಹಾಕಲಾಗಿದೆ. ಕೆರೆಯ ಅಂಚಿನಲ್ಲೇ ನಿರ್ಮಿಸಲಾಗಿರುವ ಮ್ಯಾನ್‌ಹೋಲ್‌ಗಳು ಹೊಡೆದು ಹೋಗಿ ಕೊಳಚೆ ನೀರು ಹೊರಬರುತ್ತಿವೆ.

ಈ ನೀರು ಈಗ ನಾಗರಕೆರೆಯಲ್ಲಿ ಸಂಗ್ರಹವಾಗಿರುವ ಮಳೆ ನೀರಿನೊಂದಿಗೆ ಬೆರೆಯುತ್ತಿವೆ. ಇದರಿಂದಾಗಿ ಕೆರೆಯಲ್ಲಿನ ಶುದ್ಧ ನೀರು ಕಲುಷಿತವಾಗುತ್ತಿದ್ದು ದುರ್ವಾಸನೆ ಬೀರುವಂತಾಗಿದೆ.

ಕೆರೆಯ ಅಂಚಿನ ಸುತ್ತಲು ವಾಯುವಿಹಾರಕ್ಕಾಗಿ ನಿರ್ಮಿಸಲಾಗಿರುವ ಕಿರು ರಸ್ತೆಯಲ್ಲಿ ನಾಗರಿಕರು ಓಡಾಡುವುದೇ ಕಷ್ಟವಾಗಿದೆ. ಒಳಚರಂಡಿ ನೀರು ಕೆರೆ ಸೇರುತ್ತಿರುವ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ಹಲವಾರು ಬಾರಿ ತಂದಿದ್ದರೂ ಮ್ಯಾನ್‌ಹೋಲ್‌ಗಳನ್ನು ದುರಸ್ತಿ ಮಾಡಿಸಿಲ್ಲ.

ಮನೋಜ್‌, ಕೆರೆ ಅಂಚಿನ ನಿವಾಸಿ.

ಡಾಂಬರು ಕಾಣದ ರಸ್ತೆ

ದೊಡ್ಡಬಳ್ಳಾಪುರನಗರದ ರಂಗಪ್ಪ ವೃತ್ತದಿಂದ ತೇರಿನ ಬೀದಿ ರಸ್ತೆಯಲ್ಲಿ ಸಾಲು ಸಾಲು ಗುಂಡಿಗಳು ಬಿದ್ದಿವೆ.

ನಗರಸಭೆ ವ್ಯಾಪ್ತಿಯಲ್ಲೇ ಅತ್ಯಂತ ಹೆಚ್ಚು ಗುಂಡಿಗಳು ಬಿದ್ದಿರುವ ರಸ್ತೆ ಎನ್ನುವ ಖ್ಯಾತಿಗೆ ಒಳಗಾಗಿರುವ ಈ ರಸ್ತೆಯಲ್ಲಿ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗೆ ಹೋಗುವ ಕಾರ್ಮಿಕರು, ನೆಲಮಂಗಲ ಕಡೆಗೆ ಹೋಗುವ ಬಸ್‌, ರೈಲ್ವೆ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು ಸೇರಿದಂತೆ ಹಲವಾರು ಜನರು ಪ್ರತಿನಿತ್ಯ ಓಡಾಡುತ್ತಾರೆ. ರಸ್ತೆಯ ದುಃಸ್ಥಿತಿಯನ್ನು ಕಂಡೂ ಕಾಣದಂತೆ ಜನಪ್ರತಿನಿಧಿಗಳು ತಿರುಗುತ್ತಿದ್ದಾರೆ. ರಸ್ತೆಗೆ ಡಾಂಬರು ಹಾಕಿಸುವುದಿರಲಿ, ಕನಿಷ್ಠ ಗುಂಡಿಗಳನ್ನಾದರೂ ಮುಚ್ಚಿಸಬೇಕು.

ಸುರೇಶ್‌, ಚೌಡೇಶ್ವರಿಗುಡಿ ರಸ್ತೆ, ದೊಡ್ಡಬಳ್ಳಾಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT