ನೇಗಿಲ ಯೋಗಿಯ ಕಾಯಕ ಶುರು

7
ಬಿತ್ತನೆ ಕಾರ್ಯ ಸಿದ್ಧತೆಯಲ್ಲಿ ರೈತ ಸಮೂಹ

ನೇಗಿಲ ಯೋಗಿಯ ಕಾಯಕ ಶುರು

Published:
Updated:
ಹೊಲದಲ್ಲಿ ಉಳುಮೆ ಮಾಡಿಕೊಂಡು ಬಿತ್ತನೆ ಬೀಜ ಬಿತ್ತನೆ ಮಾಡುತ್ತಿರುವ ರೈತರು

ವಿಜಯಪುರ: ರೈತರ ಜೀವನಾಡಿ ಎತ್ತುಗಳೊಂದಿಗೆ ಬುತ್ತಿ ಕಟ್ಟಿಕೊಂಡು ಹೊಲದ ಕಡೆಗೆ ಸಾಗುವ ನೇಗಿಲ ಯೋಗಿಯ ಬಿತ್ತನೆಯ ಸಿದ್ಧತೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾನೆ. ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದಿದ್ದರೂ, ಸತತ ಬರಗಾಲದಿಂದ ತತ್ತರಿಸಿದ್ದ ರೈತರು ಹರ್ಷದಿಂದ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ತಾಲ್ಲೂಕಿನಾದ್ಯಂತ ಎಲ್ಲ ಕಡೆ ಮಳೆಯಾಗಿಲ್ಲ. ಆದರೂ ಬಿತ್ತನೆಗೆ ಜಮೀನು ಹದ ಮಾಡುವ ಹಾಗೂ ಬಿತ್ತನೆಗಾಗಿ ಸಿದ್ಧತೆ ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮೋಡ ಮುಸುಕಿದ ವಾತಾವರಣ, ಆಗಾಗ ಸುರಿಯುತ್ತಿರುವ ಜಿಟಿ ಜಿಟಿ ಮಳೆ ಬೀಳುತ್ತಿದೆ. ಹೀಗಾಗಿ ಬಿತ್ತನೆಗೆ ಭೂಮಿಯನ್ನು ಹದಗೊಳಿಸಲು ಹಾಗೂ ಕಸಕಡ್ಡಿ ತೆಗೆದು ಸ್ವಚ್ಛಗೊಳಿಸುವ ಕಾರ್ಯದಲ್ಲಿ ರೈತರು, ಕೂಲಿಕಾರರು ಮಗ್ನರಾಗಿದ್ದಾರೆ.

ರೈತರು ಹೊಲದಲ್ಲಿನ ಕಸಕಡ್ಡಿ ಆಯ್ದು, ರಂಟೆ–ಕುಂಟೆ ಮೂಲಕ ಭೂಮಿ ಹದಗೊಳಿಸಲು ಮುಂದಾಗಿದ್ದಾರೆ. ತಿಪ್ಪೆ ಗುಂಡಿ ಗೊಬ್ಬರವನ್ನು ಭೂಮಿಯಲ್ಲಿ ಚೆಲ್ಲಿ ಬಿತ್ತನೆಗೆ ಸಜ್ಜುಗೊಳಿಸುತ್ತಿದ್ದಾರೆ. ಮುಂದೆ ಮುಂಗಾರು ಮಳೆ ಬಂದರೆ ಬಿತ್ತನೆಗೆ ಸುಲಭವಾಗುತ್ತದೆ ಎಂದು ರೈತರು ಕೃಷಿ ಕಾರ್ಯದಲ್ಲಿ ಭರದಿಂದ ತೊಡಗಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾಗುತ್ತಿದ್ದರೂ ಬಯಲು ಸೀಮೆಭಾಗದಲ್ಲಿ ಕೆರೆ ಕುಂಟೆಗಳಿಗೆ ನೀರು ಬಂದಿಲ್ಲ. ಆದರೂ ರೈತರು ತಾವು ಶೇಖರಣೆ ಮಾಡಿಟ್ಟುಕೊಂಡಿರುವ ಬಿತ್ತನೆ ಬೀಜಗಳನ್ನು ಭೂಮಿಗೆ ಹಾಕುತ್ತಿದ್ದಾರೆ.

ಮೇ ತಿಂಗಳಿನಲ್ಲಿ ಕಾಣಿಸಿಕೊಂಡಿದ್ದ ಮಳೆ ಜೂನ್ ತಿಂಗಳ ಪೂರ್ತಿ ಕಾಣಿಸಿಕೊಳ್ಳದೇ ರೈತರು ತೀವ್ರ ಕಂಗಾಲಾಗಿದ್ದರು. ಅದರಲ್ಲೂ ಬಿತ್ತನೆ ಸಮಯದಲ್ಲಿ ಮಳೆ ಕೈ ಕೊಟ್ಟಿದ್ದರಿಂದ ಈ ಬಾರಿ ಬರ ಆವರಿಸುವ ಆತಂಕದಲ್ಲಿ ಅನ್ನದಾತರು ಇದ್ದರು. ಈಗ ಎಲ್ಲೆಡೆ ಮಳೆ ಮುಂದುವರೆಯುತ್ತಿದ್ದು, ಅನ್ನದಾತರಲ್ಲಿ ಸಂತಸ ತಂದಿದೆ ಮುಂದೇನು ಮಾಡುತ್ತದೆ ಎಂದು ನೋಡಬೇಕು ಎಂದು ರೈತ ರಾಮಕೃಷ್ಣಪ್ಪ ಹೇಳುತ್ತಾರೆ.

ಹಿಂದಿನ ವರ್ಷಗಳಲ್ಲಿ ಮಳೆ ಕೊರತೆಯನ್ನು ಎದುರಿಸಿದ್ದೇ ಹೆಚ್ಚು. ಆದರೆ ಕಳೆದ ವರ್ಷ ಹಿಂಗಾರು ಉತ್ತಮವಾಗಿ ಬಿತ್ತು. ಇದೀಗ ಪೂರ್ವ ಮುಂಗಾರು ಸಹ ಉತ್ತಮವಾಗಿ ಆಗುತ್ತಿದ್ದು, ಈ ಬಾರಿ ಒಳ್ಳೆಯ ಬೆಳೆಗಳು ಆಗುವ ನಿರೀಕ್ಷೆ ಇದೆ. ಕೃಷಿ ಇಲಾಖೆಯಿಂದ ನೀಡುವ ಬಿತ್ತನೆ ಬೀಜಗಳು ಉತ್ತಮವಾಗಿರುವಂತೆ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳಬೇಕು. ರಸಗೊಬ್ಬರ ಬೆಲೆಗಳ ಕುರಿತು ಇಲಾಖೆ ಗಮನಿಸಬೇಕು ಎಂದು ರೈತ ರವಿಕುಮಾರ್ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !