ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಯುತ ಹಬ್ಬ ಆಚರಿಸಿ

ಅನಧಿಕೃತವಾಗಿ ಜಾನುವಾರು ವಧೆ ವಿರುದ್ಧ ಕಠಿಣ ಕ್ರಮ: ಡಿ.ಸಿ ಎಚ್ಚರಿಕೆ
Last Updated 10 ಜುಲೈ 2022, 6:03 IST
ಅಕ್ಷರ ಗಾತ್ರ

ಕುಂದಾಣ (ದೇವನಹಳ್ಳಿ ತಾಲ್ಲೂಕು): ರಾಜ್ಯ ಚಂದ್ರದರ್ಶನ ಸಮಿತಿಯ ಘೋಷಣೆಯಂತೆ ಜುಲೈ 10ರಂದು ಬಕ್ರೀದ್ ಹಬ್ಬ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದರು.

ತಾಲ್ಲೂಕಿನ ಬೀರಸಂದ್ರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆ ತಡೆಗಟ್ಟುವ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕತೆವಹಿಸಿ ಅವರು ಮಾತನಾಡಿದರು.

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರ ಅನ್ವಯ ಗೋಹತ್ಯೆ ನಿಷೇಧಿಸಲಾಗಿದೆ. ಈ ಕಾಯ್ದೆ ಅನ್ವಯ ಎಲ್ಲಾ ವಯಸ್ಸಿನ ಆಕಳು, ಕರು, ಹೋರಿ, ಎತ್ತು ಸೇರಿದಂತೆ 13 ವರ್ಷದೊಳಗಿನ ಎಮ್ಮೆ, ಕೋಣಗಳನ್ನು ಹತ್ಯೆ ಮಾಡುವಂತಿಲ್ಲ. ಹೈಕೋರ್ಟ್‌ ಆದೇಶದನ್ವಯ ಒಂಟೆಗಳನ್ನೂ ಹತ್ಯೆ ಮಾಡುವಂತಿಲ್ಲ. ಹಾಗಾಗಿ, ಹಬ್ಬದ ಸಂದರ್ಭದಲ್ಲಿ ಯಾವುದೇ ಕಾಯ್ದೆ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ನಿಗದಿತ ದಾಖಲೆಗಳು ಇಲ್ಲದೆ ಜಾನುವಾರು ಸಾಗಣೆ ಮಾಡುವುದು ಕಾನೂನುಬಾಹಿರ. ಜಾನುವಾರು ಖರೀದಿ, ಮಾರಾಟದ ಸಂದರ್ಭದಲ್ಲಿ ಜಾನುವಾರು ಕಿವಿಯಲ್ಲಿ ಓಲೆ ಇರುವುದು ಕಡ್ಡಾಯ. ಸಂಬಂಧಪಟ್ಟ ಅಧಿಕಾರಿಗಳಿಂದ ದೃಢೀಕರಣ ಪತ್ರ ಪಡೆದುಕೊಂಡು ಜಾನುವಾರು ಸಾಗಾಣಿಕೆ ಮಾಡಬೇಕು ಎಂದು ಸೂಚಿಸಿದರು.

ಅನಧಿಕೃತವಾಗಿ ಸಾಗಾಣಿಕೆ ಮಾಡುವ ವಾಹನಗಳ ನೋಂದಣಿ ರದ್ದುಪಡಿಸಲು ಸಾರಿಗೆ ಇಲಾಖೆ ಅಧಿಕಾರಿಗಳು ಮುಂದಾಬೇಕು. ಅಂತಹ ಜಾನುವಾರುಗಳನ್ನು ವಶಕ್ಕೆ ಪಡೆದು ಜಿಲ್ಲೆಯಲ್ಲಿರುವ ಗೋಶಾಲೆಗಳಿಗೆ ಸಾಗಿಸಲು ಕ್ರಮವಹಿಸಬೇಕು ಎಂದು ನಿರ್ದೇಶಿಸಿದರು.

ಜಾನುವಾರುಗಳ ಅಕ್ರಮ ವಧೆ ಹಾಗೂ ಸಾಗಾಣಿಕೆ ತಡೆಗಟ್ಟಲು ಕಂದಾಯ, ಪೌರಾಡಳಿತ, ಪಂಚಾಯತ್ ರಾಜ್, ಪಶುಪಾಲನಾ ಇಲಾಖೆ, ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆ ಒಳಗೊಂಡ ಹೋಬಳಿವಾರು ಅಧಿಕಾರಿಗಳ ತಂಡ ರಚಿಸಬೇಕು. ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಯಾವುದೇ ರೀತಿಯ ಜಾನುವಾರು ಅಕ್ರಮ ಸಾಗಣೆ ಆಗದಂತೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಡಿವೈಎಸ್‌ಪಿ ನಾಗರಾಜ ಮಾತನಾಡಿ, ಬಕ್ರೀದ್ ಸಂದರ್ಭದಲ್ಲಿ ಅನಧಿಕೃತ ಜಾನುವಾರು ಅಕ್ರಮ ಸಾಗಾಣಿಕೆ ಹಾಗೂ ವಧೆ ಬಗ್ಗೆ ಸಾರ್ವಜನಿಕರು ಹತ್ತಿರದ ಪೋಲಿಸ್ ಠಾಣೆಗಳಿಗೆ ಮಾಹಿತಿ ನೀಡಬೇಕು. ಪೋಲಿಸ್ ಕಂಟ್ರೋಲ್‌ ರೂಂ ದೂರವಾಣಿ ಸಂಖ್ಯೆ 94808 02400ಕ್ಕೆ ಕರೆ ಮಾಡಿ ಮಾಹಿತಿ ತಿಳಿಸಬೇಕು ಎಂದು ಹೇಳಿದರು.

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರ ಕುರಿತು ಪಶುಪಾಲನೆ ಇಲಾಖೆಯು ಹೊರತಂದಿರುವ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಾ ಈ. ರವಿಕುಮಾರ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಜಿ.ಎಂ. ನಾಗರಾಜ, ಜಿಲ್ಲಾ ನಗರಾಭಿವೃದ್ಧಿ ಕೋಶ, ಸಾರಿಗೆ ಇಲಾಖೆಯ ಅಧಿಕಾರಿಗಳು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾ ಪ್ರಾಣಿ ದಯಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT