ಮಂಗಳವಾರ, ಸೆಪ್ಟೆಂಬರ್ 17, 2019
27 °C

ಪತ್ರಿಕೆ ವಿತರಕರ ಕೊಡುಗೆ ಗಮನಾರ್ಹ

Published:
Updated:
Prajavani

ವಿಜಯಪುರ: ದೃಶ್ಯ ಮಾಧ್ಯಮಗಳಿಗಿಂತ ಮುದ್ರಣ ಮಾಧ್ಯಮ ಜನರ ಮನಸ್ಸಿನ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಪತ್ರಿಕಾ ವಿತರಕರು ಅಸಂಘಟಿತರಾಗಿದ್ದು ಅವರನ್ನು ಗುರುತಿಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕಾಗಿರುವುದು ಸರ್ಕಾರದ ಹೊಣೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ.ಸುಧಾಕರ್ ಹೇಳಿದರು.

ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್‌ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪತ್ರಿಕೆ ವಿತರಣೆ ಗೌರವಯುತ ಕೆಲಸ. ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸಿದವರು ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ್ದರು. ಪತ್ರಿಕಾ ವಿತರಣೆಯಿಂದ ಜವಾಬ್ದಾರಿ ಜತೆಗೆ ಎಲ್ಲರ ಮನೆಗೂ ಪತ್ರಿಕೆ ತುಪಿಸುವುದರಿಂದ ಸಂಬಂಧಗಳು ಬೆಳೆಯುತ್ತವೆ. ವಿತರಕರು ಸಂಘಟಿತರಾಗಬೇಕು’ ಎಂದರು.

ಕಸಾಪ ನಗರ ಘಟಕದ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ ಮಾತನಾಡಿ, ‘ಮುದ್ರಣ ಮಾಧ್ಯಮ ಉದ್ಯಮದ ಬೆಳವಣಿಗೆಯಲ್ಲಿ ವಿತರಕರ ಕೊಡುಗೆ ಗಮನಾರ್ಹ. ಪತ್ರಿಕಾ ವಿತರಣೆಯನ್ನು ವೃತ್ತಿಯಾಗಿಸಿಕೊಳ್ಳದೆ ಪ್ರವೃತ್ತಿಯನ್ನಾಗಿ ಮಾಡಿಕೊಂಡು ಬೆಳಗಿನ ಕೆಲ ಸಮಯ ಇದಕ್ಕೆ ಮೀಸಲಿಟ್ಟು ಕೆಲಸ ಮಾಡುತ್ತೀರಿ. ಅಸಂಘಟಿತ ವಲಯದವರಿಗೆ ಕೇಂದ್ರ-ರಾಜ್ಯ ಸರ್ಕಾರದಿಂದ ಏನು ಸೌಲಭ್ಯಗಳಿವೆಯೋ ಅವುಗಳನ್ನು ಪಡೆದುಕೊಳ್ಳಲು ಮುಂದೆ ಬನ್ನಿರಿ. ಸರ್ಕಾರದ ನೆರವು ದೊರಕಿಸಲು ನಾವೆಲ್ಲರೂ ಕೈ ಜೋಡಿಸುತ್ತೇವೆ’ ಎಂದರು.

ಸಾಹಿತಿ ಚಂದ್ರಶೇಖರ ಹಡಪದ್ ಮಾತನಾಡಿ, ‘ಮಳೆ, ಚಳಿ, ಬಿರುಗಾಳಿ ಇದ್ದರೂ ಬೆಳಿಗ್ಗೆ ಎದ್ದು ತಪ್ಪದೇ ಪತ್ರಿಕೆ ವಿತರಿಸುವ ಮೂಲಕ ಜನರಿಗೆ ವಿಚಾರ ಮುಟ್ಟಿಸುವ ಕಾರ್ಯವನ್ನು ಮಾಡುತ್ತಾರೆ. ಆದರೆ, ಜನರಲ್ಲಿ ಓದುವ ಅಭಿರುಚಿ ಕಡಿಮೆಯಾಗುತ್ತಿದೆ. ಕಾನೂನು ಹಾಗೂ ಸಂವಿಧಾನದಡಿ ನಿಮಗೆ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ನೀವು ಒಗ್ಗಟ್ಟಾಗಬೇಕು. ನಿಮ್ಮ ಶ್ರಮಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ’ ಎಂದರು.

ವಿತರಕ ಎಸ್.ಮಂಜುನಾಥ್ ಸೇರಿದಂತೆ ಪತ್ರಿಕೆ ವಿತರಿಸುವ ಯುವಕರನ್ನು ಸನ್ಮಾನಿಸಿದರು. ಕಸಾಪ ಜಿಲ್ಲಾ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಎಂ.ವಿ.ನಾಯ್ಡು, ಕಾರ್ಯದರ್ಶಿ ಮುನಿರಾಜು, ನಗರ ಘಟಕದ ಕಾರ್ಯದರ್ಶಿ ಮುನಿವೆಂಕಟರಮಣಪ್ಪ, ಕಾರ್ಮಿಕ ಘಟಕದ ಅಧ್ಯಕ್ಷ ಮುನಿರಾಜು, ವಿಶ್ವನಾಥ್, ನಾರಾಯಣಸ್ವಾಮಿ, ಇದ್ದರು.

Post Comments (+)