ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಪ್ರತಿಯೊಬ್ಬರ ಆಸ್ತಿ: ಸೌರವ್ ಗಂಗೂಲಿ

Last Updated 14 ಫೆಬ್ರುವರಿ 2022, 20:30 IST
ಅಕ್ಷರ ಗಾತ್ರ

ಆನೇಕಲ್: ‘ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಆರೋಗ್ಯ ಅತಿಮುಖ್ಯವಾದುದ್ದು. ಸಿನಿಮಾ ನಟರಾಗಲಿ ಅಥವಾ ಕ್ರೀಡಾಪಟುವಾಗಿರಲಿ ಪ್ರತಿಯೊಬ್ಬರಿಗೂ ಆರೋಗ್ಯವೇ ಮಹಾಭಾಗ್ಯ. ಈ ನಿಟ್ಟಿನಲ್ಲಿ ಆಸ್ಪತ್ರೆಗಳು ಅತ್ಯುತ್ತಮ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಕಲ್ಪಿಸುಲು ಶ್ರಮಿಸುತ್ತಿದೆ’ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ತಿಳಿಸಿದರು.

ತಾಲ್ಲೂಕಿನ ಚಂದಾಪುರ ನಾರಾಯಣ ಹೃದಯಾಲಯದಲ್ಲಿ 100 ಐಸಿಯು ಬೆಡ್‌ಗಳ ಸೌಲಭ್ಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹೈಟೆಕ್‌ ವೈದ್ಯಕೀಯ ಸೌಲಭ್ಯಗಳು ಎಲ್ಲರಿಗೂ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ನಾರಾಯಣ ಹೆಲ್ತ್‌ ಸಿಟಿಯಲ್ಲಿ ಹೈಟೆಕ್‌ ಸೌಲಭ್ಯಗಳು ರೋಗಿಗಳಿಗೆ ದೊರೆಯುವಂತಾಗಿರುವುದು ಉಪಯುಕ್ತವಾಗಿದೆ. ನಾರಾಯಣ ಹೆಲ್ತ್‌ ಸಿಟಿಯ ಮುಖ್ಯಸ್ಥ ಡಾ.ದೇವಿ ಶೆಟ್ಟಿ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಆಧುನಿಕ ಸೌಲಭ್ಯಗಳು ಎಲ್ಲರಿಗೂ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನಗಳನ್ನು ಮಾಡಿರುವುದು ಶ್ಲಾಘನೀಯ’ ಎಂದರು.

‘ಬೆಂಗಳೂರು ಸುಂದರ ನಗರವಾಗಿದ್ದು ಎರಡು ವರ್ಷಗಳ ನಂತರ ಬೆಂಗಳೂರಿಗೆ ಕಾರ್ಯಕ್ರಮಗಳ ನಿಮಿತ್ತ ಬಂದಿದ್ದೇನೆ. ಬೆಂಗಳೂರು ಎರಡು ವರ್ಷಗಳಲ್ಲಿ 20 ವರ್ಷಗಳಷ್ಟು ಅಭಿವೃದ್ಧಿ ಹೊಂದಿದೆ’ ಎಂದರು.

‘ಐಪಿಎಲ್‌ 2022ರ ಪಂದ್ಯಾವಳಿಯನ್ನು ಭಾರತದಲ್ಲಿ ನಡೆಸುವ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ತಜ್ಞರ ವರದಿಗಳನ್ನು ಅನುಸರಿಸಿ ಮುಂಬರುವ ದಿನಗಳಲ್ಲಿ ತೀರ್ಮಾನಗಳನ್ನು ಕೈಗೊಳ್ಳಲಾಗುವುದು. ಖಾಲಿ ಕ್ರೀಡಾಂಗಣಗಳ ಮಧ್ಯೆ ಯಾವ ಆಟಗಾರರು ಕ್ರಿಕೆಟ್‌ ಆಡಲು ಇಷ್ಟ ಪಡುವುದಿಲ್ಲ. ಆದರೆ ಕೊರೊನಾ
ದಿಂದಾಗಿ ಜನರಿಲ್ಲದೇ ಐಪಿಎಲ್‌ ನಡೆಸುವ ಪರಿಸ್ಥಿತಿ ಉಂಟಾಗಿದೆ’ ಎಂದರು.

ನಾರಾಯಣ ಹೆಲ್ತ್ ಸಿಟಿಯ ಅಧ್ಯಕ್ಷ ಡಾ.ದೇವಿಪ್ರಸಾದ್‌ ಶೆಟ್ಟಿ ಮಾತನಾಡಿ, ‘ಮಾನವ ಅಭಿವೃದ್ಧಿ ವರದಿ 2020ರ ಪ್ರಕಾರ ಭಾರತದಲ್ಲಿ 10ಸಾವಿರ ಜನರಿಗೆ 5 ಹಾಸಿಗೆಗಳ ಸೌಲಭ್ಯವಿದೆ ಎಂದು ತಿಳಿಸಿದೆ. ಗಂಭೀರ ಸಮಸ್ಯೆಗಳು ಉಂಟಾದಾಗ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಲಭ್ಯಗಳನ್ನು ನೀಡುವುದು ಸವಾಲಾಗಿದೆ. ಹಾಗಾಗಿ ಸೌಲಭ್ಯಗಳ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ನಾರಾಯಣ ಹೆಲ್ತ್‌ ಸಿಟಿಯು ಭಾರತ್‌ ಗೋಲ್ಡ್‌ಮನ್‌ ಸ್ಯಾಕ್ಸ್ನ ಲಾಭರಹಿತ ಪಾಲುದಾರ ಯುನೈಟೆಡ್‌ ವೇ ಬೆಂಗಳೂರು ಸಹಯೋಗದಲ್ಲಿ ನಾರಾಯಣ ಹೆಲ್ತ್‌ ಸಿಟಿಯಲ್ಲಿ 100 ಹಾಸಿಗೆಗಳ ಕೋವಿಡ್ ಐಸಿಯು ಸೌಲಭ್ಯವನ್ನು ಪ್ರಾರಂಭಿಸಲಾಗಿದೆ’ ಎಂದರು.

ಗೋಲ್ಡ್‌ಮನ್‌ ಸ್ಯಾಕ್ಸ್‌ನ ಅಧ್ಯಕ್ಷ ಸಂಜಯ್‌ ಚಟರ್ಜಿ ಮಾತನಾಡಿ, ‘ಭಾರತದಲ್ಲಿ ಕೊರೊನಾದಂತಹ ಪೆಂಡಮಿಕ್‌ ಸಂದರ್ಭದಲ್ಲಿ ನಿರ್ಣಾಯಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಗೋಲ್ಡ್‌ಮನ್‌ ಸ್ಯಾಕ್ಸ್‌ ಪ್ರಮುಖ ಆಸ್ಪತ್ರೆಗಳೊಂದಿಗೆ ಪಾಲುದಾರಿಕೆ ಹೊಂದುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ಹೆಚ್ಚಿನ ಸೌಲಭ್ಯ ದೊರೆಯುವಂತಾಗುತ್ತದೆ’ ಎಂದರು.

ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಂಜುಂದಾರ್‌ ಷಾ, ಯುನೈಟೆಡ್‌ ವೇ ಬೆಂಗಳೂರು ಸಿಇಓ ರಾಜೇಶ್‌ ಕೃಷ್ಣನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT