ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಯುತ ಸಮಾಜ, ಮಹಿಳೆಯರ ಪಾತ್ರ ಮುಖ್ಯ

Last Updated 20 ಸೆಪ್ಟೆಂಬರ್ 2019, 5:23 IST
ಅಕ್ಷರ ಗಾತ್ರ

ವಿಜಯಪುರ: ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ತರವಾದದ್ದು, ನಿಮಗೆ ಸಿಗುವಂತಹ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ದೇಶದ ಪ್ರಗತಿಗೆ ಸಹಕರಿಸಬೇಕು ಎಂದು ವೈದ್ಯ ಡಾ. ಶ್ರೀಧರ್ ತಿಳಿಸಿದರು.

ಇಲ್ಲಿನ ಎಸ್.ಜೆ.ಆರ್.ವೈ. ಕಚೇರಿಯ ಆವರಣದಲ್ಲಿ ಪುರಸಭೆ ವಿಜಯಪುರ, ಜಿಲ್ಲಾ ಕೌಶಲ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ದೀನದಯಾಳ್ ಅಂತ್ಯೋದಯ ಯೋಜನೆಯಡಿ ಸ್ವಸ್ತ್ ಎನ್.ಜಿ.ಹೆಚ್.ಜಿ ಗಳನ್ನಾಗಿಸುವ ಸ್ವಸಹಾಯ ಸಂಘಗಳ ಸದಸ್ಯರುಗಳಿಗೆ ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ಸೌಲಭ್ಯ ಪಡೆಯುವ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್ ಯೋಜನೆ ಆರೋಗ್ಯ ಕಾರ್ಡುಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ವಿತರಣೆಯಾಗುತ್ತಿವೆ. ಈ ಕಾರ್ಡ್ ಪಡೆದ ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ ₹ 5 ಲಕ್ಷ ವೆಚ್ಚದ ಚಿಕಿತ್ಸೆ ಉಚಿತವಾಗಿ ದೊರೆಯಲಿದೆ. ಈ ಬಗ್ಗೆ ಜನರಿಗೆ ಸಮರ್ಪಕವಾಗಿ ಜಾಗೃತಿ ಮೂಡಿಸುವ ಕೆಲಸವನ್ನು ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಮಾಡಬೇಕು ಎಂದರು.

ಕೌಶಲ ಅಭಿವೃದ್ಧಿ ಯೋಜನೆ ಅಭಿಯಾನ ಜಿಲ್ಲಾ ಘಟಕದ ವ್ಯವಸ್ಥಾಪಕ ನರಸಿಂಹಪ್ಪ ಮಾತನಾಡಿ, ಮಹಿಳೆಯರು ಆರೋಗ್ಯದ ಕಡೆಗೆ ಮಾತ್ರವಲ್ಲದೆ ಆರ್ಥಿಕ ಅಭಿವೃದ್ಧಿಯ ಕಡೆಗೂ ಗಮನಹರಿಸಬೇಕಾಗಿರುವ ಅನಿವಾರ್ಯತೆ ಇದೆ. ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಹಲವಾರು ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವತ್ತ ಗಮನಹರಿಸಬೇಕಾಗಿದೆ ಎಂದರು.

ಪ್ರತಿಯೊಬ್ಬರಿಗೂ ಗುಣಮಟ್ಟದ ಚಿಕಿತ್ಸೆ ದೊರೆಯಬೇಕೆಂಬ ನಿಟ್ಟಿನಲ್ಲಿ ಜಾರಿಗೊಂಡಿರುವ ಯೋಜನೆ ಆಯುಷ್ಮಾನ್ ಭಾರತ್ ಯೋಜನೆಯಾಗಿದೆ. ಬಿ.ಪಿ.ಎಲ್ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಪ್ರತಿಗಳನ್ನು ನೀಡಿದರೆ, ಹೆಲ್ತ್ ಕಾರ್ಡುಗಳನ್ನು ನೀಡಲಾಗುತ್ತದೆ. ಕಾರ್ಡ್ ಇದ್ದ ಕುಟುಂಬಗಳು ಅನಾರೋಗ್ಯಕ್ಕೀಡಾದರೆ ಅಥವಾ ಶಸ್ತ್ರಚಿಕಿತ್ಸೆ ಮಾಡಿಸಬೇಕಿದ್ದರೆ ವಾರ್ಷಿಕ ಒಂದು ಕುಟುಂಬಕ್ಕೆ ₹ 5 ಲಕ್ಷ ವೆಚ್ಚದವರೆಗೂ ಉಚಿತವಾಗಿ ಮಾಡಿಕೊಡಲಾಗುತ್ತದೆ. ಅರ್ಥಾತ್ ಈ ವೆಚ್ಚವನ್ನು ಸರ್ಕಾರ ಭರಿಸಲಿದೆ. ಬಿಪಿಎಲ್ ವರ್ಗದವರಿಗೆ ಚಿಕಿತ್ಸೆಯನ್ನು ಉಚಿತವಾಗಿಯೂ, ಎ.ಪಿ.ಎಲ್ ವರ್ಗದವರಿಗೆ ಶೇ.30 ರಷ್ಟು ವೆಚ್ಚದ ಚಿಕಿತ್ಸೆ ಉಚಿತವಾಗಿ ದೊರೆಯಲಿದೆ ಎಂದರು.

ಡಾ. ರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರಾದ ರೇಣುಕಮ್ಮ, ಲಲಿತಮ್ಮ, ಪುರಸಭಾ ಸಿಬ್ಬಂದಿ ಜನಾರ್ಧನ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT