ಶುಕ್ರವಾರ, ಡಿಸೆಂಬರ್ 6, 2019
17 °C

ದೇವನಹಳ್ಳಿ: ಮಳೆಗೆ ಸಿಲುಕಿದ ರಾಗಿ ಫಸಲು, ಕಂಗಾಲಾದ ರೈತರು

ವಡ್ಡನಹಳ್ಳಿ ಭೋಜ್ಯಾನಾಯ್ಕ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಎರಡು ದಿನಗಳಿಂದ ಸುರಿಯುತ್ತಿರುವ ಜಡಿಮಳೆಯಿಂದಾಗಿ ಕೊಯ್ಲಿನ ಹಂತದಲ್ಲಿದ್ದ ಶೇಕಡವಾರು ರಾಗಿಫಸಲು ಹಾಳಾಗುತ್ತಿದ್ದು ಬೆಳೆ ಕಳೆದುಕೊಳ್ಳುವ ಹಂತದಲ್ಲಿರುವ ರೈತರು ಸಂಕಟದ ಸ್ಥಿತಿಯಲ್ಲಿದ್ದಾರೆ.

ಸತತ ನಾಲ್ಕು ವರ್ಷಗಳ ನಂತರ ಇದೇ ಮೊದಲಬಾರಿಗೆ ಜಿಲ್ಲಾದ್ಯಂತ ಮುಂಗಾರು ಮಳೆಯ ಆರಂಭದ ಆತಂಕದ ನಡುವೆ ಬಿತ್ತನೆ ವಿಳಂಬವಾಗಿ ನಡೆದರೂ ನಂತರ ಫಸಲಿಗೆ ಅನುಕೂಲವಾಗಿ ಸಕಾಲದಲ್ಲಿ ಹದ ಮಳೆ ಸುರಿದ ಪರಿಣಾಮ ಕೃಷಿ ಚಟುವಟಿಕೆ ವ್ಯಾಪ್ತಿಯಲ್ಲಿನ ಎಲ್ಲಾ ರೀತಿಯ ಫಸಲು ಶೇ 100ಷ್ಟು ಸಿಗಲಿದೆ ಎನ್ನುವ ಭರವಸೆಯನ್ನು ರೈತರು ನಿರೀಕ್ಷಿಸಿದ್ದರು. ಪ್ರಸ್ತುತ ಸುರಿಯುತ್ತಿರುವ ಮಳೆಯಿಂದ ಈಗಾಗಲೇ ಕೊಯ್ಲುಮಾಡಿ ಜಮೀನುಗಳಲ್ಲಿ ಹರಡಿರುವ ರಾಗಿ ಮತ್ತು ಕೊಯ್ಲು ಮಾಡಬೇಕಾಗಿರುವ ರಾಗಿ ಫಸಲು ಮಳೆಗೆ ನೆನೆಯುತ್ತಿದ್ದು ರೈತರ ನಿರೀಕ್ಷೆಗೆ ತಣ್ಣೀರೆರೆಚಿದೆ ಎಂಬುದು ರೈತರ ಆತಂಕ.

ಜಿಲ್ಲೆಯ ನಾಲ್ಕು ತಾಲ್ಲೂಕು ವ್ಯಾಪ್ತಿಯಲ್ಲಿ ಕೃಷಿ ಇಲಾಖೆಯ ನಿರೀಕ್ಷಿತ ಮುಂಗಾರು ವಿವಿಧ ಬೆಳೆ ಬಿತ್ತನೆ ಒಟ್ಟಾರೆ 52 ಸಾವಿರ ಹೆಕ್ಟರ್ ಗುರಿ ಪೈಕಿ ಬಯಲು ಸೀಮೆಯ ಪ್ರಮುಖ ಆಹಾರ ಬೆಳೆಯಾದ ರಾಗಿ 46 ಸಾವಿರ ಹೆಕ್ಟರ್ ನಲ್ಲಿ ಬಿತ್ತನೆಯಾಗಿದೆ. ಈ ಹಿಂದಿನ ಹತ್ತು ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಮುಂಗಾರು ರಾಗಿ ಬಿತ್ತನೆ ನಿರೀಕ್ಷೆಗಿಂತ ಶೇ 16 ರಷ್ಟು ಆಗಿದೆ, ಶೇ 95 ರಷ್ಟು ಬಿತ್ತನೆಯಾಗಿತ್ತು, ಬಿತ್ತನೆ ಒಂದುವರೆ ದಶಕಗಳ ಹಿಂದಿನ ದಾಖಲೆಯನ್ನು ಸರಿಗಟ್ಟಿದೆ. ಹದಿನೈದು ವರ್ಷಗಳಿಂದ ರಾಗಿ ಫಸಲು ಕೊಯ್ಲು ಸಂದರ್ಭದಲ್ಲಿ ಜಡಿಮಳೆ ಸುರಿದ ಸಂದರ್ಭ ಬಂದಿರಲಿಲ್ಲ ಎಂಬುದು ಕೃಷಿ ಅಧಿಕಾರಿಗಳ ಸ್ಪಷ್ಟನೆ. ಸಮೃದ್ಧ ಫಸಲು ನಿರೀಕ್ಷೆಯಲ್ಲಿದ್ದ ಅನೇಕ ರೈತರು ತಮ್ಮ ಮನೆಯಲ್ಲಿ ದಾಸ್ತಾನು ಮಾಡಲಾಗಿದ್ದ ಹಳೆಯ ರಾಗಿಯನ್ನು ಮಾರಾಟ ಮಾಡಿದ್ದಾರೆ, ಹೊಸ ರಾಗಿ ಫಸಲು ಮನೆ ತುಂಬಿಸಿಕೊಳ್ಳಲು ಧಾವಂತದಲ್ಲಿದ್ದ ರೈತರಿಗೆ ಸುರಿಯುತ್ತಿರುವ ಮಳೆ ಶಾಪವಾಗಿ ಪರಿಣಮಿಸಿದೆ.

ಬಿತ್ತನೆ ಮಾಡಿದ ರಾಗಿ ಮೂರು ದಿನಕ್ಕೆ ಮೊಳಕೆ ಹೊಡೆದು ಪೈರಾಗಿ ನೆಲದಿಂದ ಮೇಲೆ ಕಾಣಿಸುತ್ತದೆ. ಮಳೆಯಲ್ಲಿ ನೆನೆಯುತ್ತಿರುವ ರಾಗಿತೆನೆ ಈಗಾಗಲೇ ಮೊಳಕೆಯಾಗುವ ಹಂತದಲ್ಲಿದೆ. ಈ ರೀತಿಯಾದರೆ ರಾಗಿ ಕಾಳಿನ ಗುಣಮಟ್ಟ ಇರುವುದಿಲ್ಲ. ತೆನೆಯಲ್ಲಿನ ಕಾಳು ಮಳೆಗೆ ನೆನೆದು ಗಾತ್ರವನ್ನು ಹೆಚ್ಚಿಸಿಕೊಂಡು ನೆಲಕ್ಕೆ ಉದುರುವ ಸಂಭವ ಹೆಚ್ಚಾಗಿ ಇರುತ್ತದೆ.

1990ರಲ್ಲಿ ಇದೇ ರೀತಿ ಇಡಿ ತಾಲ್ಲೂಕಿನಲ್ಲಿ ರಾಗಿ ಫಸಲು ಜಡಿಮಳೆಗೆ ಬಲಿಯಾಗಿತ್ತು. ಸತತ ಹತ್ತು ದಿನಗಳ ಕಾಲ ಎಡಬಿಡದೆ ಮಳೆ ಸುರಿದಿತ್ತು. ಪ್ರಸ್ತುತ ಇದೇ ಸ್ಥಿತಿಯಾಗುವ ಲಕ್ಷಣ ವಾತಾವರಣದಿಂದ ಕಂಡುಬರುತ್ತಿದೆ ಎನ್ನುತ್ತಾರೆ ಸಾವಕನಹಳ್ಳಿ ಗ್ರಾಮದ ರೈತರಾದ ಚಿಕ್ಕನಾರಾಯಣಸ್ವಾಮಿ ಮತ್ತು ಎಸ್.ಪಿ.ಮುನಿರಾಜು.

ಮನುಷ್ಯರಿಗೆ ರಾಗಿ ಧಾನ್ಯದ ಆಹಾರ ಎಷ್ಟು ಮುಖ್ಯವೋ ಅದೇ ರೀತಿ ಪಶುಗಳಿಗೆ ರಾಗಿಮೇವು ಅಷ್ಟೆ ಗಟ್ಟಿತನದ ಆಹಾರ, ಎಲ್ಲಾ ಮಾದರಿಯ ಪೋಷಕಾಂಶಗಳು ಇರುತ್ತವೆ, ಹಸಿ ಹುಲ್ಲು ಇಡಿ ವರ್ಷ ನೀಡಲು ಸಾಧ್ಯವಿಲ್ಲ. ಹಸಿಹುಲ್ಲು ಮತ್ತು ಒಣಹುಲ್ಲು ಎರಡೂ ನೀಡಬೇಕು. ಕನಿಷ್ಠ ಹತ್ತು ಲೀಟರ್ ಹಾಲು ನೀಡುವ ಹಸುವಿಗೆ ದಿನಕ್ಕೆ 18 ರಿಂದ 22 ಕೆ.ಜಿ.ಮೇವು ಬೇಕು. ಹಸು ಬದುಕಿದ್ದರೆ ಸಾಕು ಎಂದರೂ 8 ರಿಂದ 10 ಕೆ.ಜಿ.ಬೇಕು. ಈ ಬಾರಿಯ ಜಡಿಮಳೆ ರಾಗಿ ಫಸಲು ಮತ್ತು ಮೇವಿಗೂ ಪೆಟ್ಟು ನೀಡಿದೆ ರೈತರಿಗೆ ಪರ್ಯಾಯ ವ್ಯವಸ್ಥೆ ಏನು ಎಂಬುದೆ ಅರ್ಥವಾಗುತ್ತಿಲ್ಲ ಎನ್ನುತ್ತಾರೆ ಬಮೂಲ್ ನಿರ್ದೇಶಕ ಬಿ.ಶ್ರೀನಿವಾಸ್.

ಮೂರು ಎಕರೆಯಲ್ಲಿ ಸಂಮೃದ್ಧವಾಗಿ ರಾಗಿ ಫಸಲು ಸಮತಟ್ಟು ಎಂಬಂತೆ ಕಾಣುತ್ತಿತ್ತು ಬೆಳೆ ನೋಡಿ ಆನಂದಕ್ಕೆ ಪಾರವೇ ಇರಲಿಲ್ಲ, ಇನ್ನೇನು ಒಂದೆರಡು ದಿನದಲ್ಲಿ ಕೊಯ್ಲು ಮಾಡಬೇಕಿತ್ತು, ಒಬ್ಬೊಬ್ಬ ಕೂಲಿ ಕಾರ್ಮಿಕರಿಗೆ ಊಟ ತಿಂಡಿ ನೀಡಿ 500 ರೂ ಮಾತಾಡಿ ಸಿದ್ದತೆ ಮಾಡಿಕೊಂಡಿದ್ದೆವು, ಈ ಬಾರಿ ಕನಿಷ್ಟ 25 ಕ್ವಿಂಟಲ್ ಗೆ ಮೋಸವಿರಲಿಲ್ಲ, ವರುಣನ ವಕ್ರದೃಷ್ಠಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತ್ತಹ ಸ್ಥಿತಿ ನಮ್ಮದಾಗಿದೆ ಎನ್ನುತ್ತಾರೆ ವಿಶ್ವನಾಥಪುರದ ರೈತ ಶಿವರಾಮಯ್ಯ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು