ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸಜ್ಜಿತ ಕಟ್ಟಡ; ಹೆನ್ನಾಗರ ಪಂಚಾಯಿತಿ ಮಾದರಿ

Last Updated 30 ಜೂನ್ 2019, 14:53 IST
ಅಕ್ಷರ ಗಾತ್ರ

ಆನೇಕಲ್:‘ಎಲ್ಲಸೌಲಭ್ಯಗಳುಳ್ಳ ಸುಸಜ್ಜಿತ ಗ್ರಾಮ ಪಂಚಾಯಿತಿ ಕಟ್ಟಡವನ್ನು ನಿರ್ಮಿಸುವ ಮೂಲಕ ಹೆನ್ನಾಗರ ಗ್ರಾಮ ಪಂಚಾಯಿತಿ ಮಾದರಿಯಾಗಿದೆ. ರಾಜ್ಯದಲ್ಲಿಯೇ 2ನೇ ಅತಿದೊಡ್ಡ ಗ್ರಾಮ ಪಂಚಾಯಿತಿ ಕಟ್ಟಡ ಎಂಬ ಹೆಗ್ಗಳಿಕೆಗೆ ಹೆನ್ನಾಗರ ಗ್ರಾಮ ಪಂಚಾಯಿತಿ ಸಾಕ್ಷಿಯಾಗಿದೆ’ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ತಾಲ್ಲೂಕಿನ ಹೆನ್ನಾಗರದಲ್ಲಿ ಅಂದಾಜು ₹ 2.3 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಸೌಲಭ್ಯಗಳುಳ್ಳ ಗ್ರಾಮ ಪಂಚಾಯಿತಿ ಕಟ್ಟಡ, ಮಾರ್ ಜವಾನ್ ಸ್ಮಾರಕ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳ ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಿ ಪುರಸಭೆಯಾಗಿ ಮಾಡಬೇಕೆಂಬ ಉದ್ದೇಶವಿದೆ. ಪ್ರಸ್ತುತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಸಾರ್ವಜನಿಕರಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಉತ್ತಮ ಪ್ರಯತ್ನವಾಗಿದೆ. ವಾರ್ಷಿಕ ಆದಾಯ ₹ 6 ಕೋಟಿಗೂ ಹೆಚ್ಚಾಗಿರುವುದು ಗ್ರಾಮ ಪಂಚಾಯಿತಿಯ ದಕ್ಷ ಆಡಳಿತದ ದ್ಯೋತಕ. ಐದು ವರ್ಷಗಳಲ್ಲಿ ಸುಮಾರು ₹ 50 ಕೋಟಿ ವೆಚ್ಚದ ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿಯಲ್ಲಿ ಅನುಷ್ಠಾನಗೊಳಿಸಿರುವುದು ಉತ್ತಮ ಪ್ರಯತ್ನ. ವಿವಿಧ ಇಲಾಖೆಗಳೊಂದಿಗೆ ಸಂಪರ್ಕ ಸಾಧಿಸಿ ಅನುದಾನ ಮಂಜೂರಾತಿ ಮಾಡಿಸಿಕೊಂಡು ಪಂಚಾಯಿತಿ ಮಾದರಿಯಾಗಿದೆ’ ಎಂದರು.

ಹೆನ್ನಾಗರಕ್ಕೆ ಕಾವೇರಿ ನೀರು: ‘ಆನೇಕಲ್ ತಾಲ್ಲೂಕಿಗೆ ಕಾವೇರಿ ಕುಡಿಯುವ ನೀರು ಪೂರೈಕೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಮ್ಮ ಪ್ರಯತ್ನಕ್ಕೆ ಬೆಂಬಲ ನೀಡಿದರು. ಹಾಗಾಗಿ ಆನೇಕಲ್‌ಗೆ ಕಾವೇರಿ ನೀರು ದೊರೆಯಿತು. ಕಾವೇರಿ ನೀರು ಪೈಪ್‌ಲೈನ್‌ ಮಾರ್ಗದಲ್ಲಿ ಬರುವ ಬನ್ನೇರುಘಟ್ಟ, ಮಂಟಪ, ಹಾರಗದ್ದೆ, ಹೆನ್ನಾಗರ ಗ್ರಾಮ ಪಂಚಾಯಿತಿಗಳಿಗೆ ಕಾವೇರಿ ನೀರು ಪೂರೈಕೆಗಾಗಿ ಸಮಗ್ರ ಯೋಜನಾ ವರದಿ ಸಿದ್ಧವಾಗಿದೆ. ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು. ಹಾರೋಹಳ್ಳಿ, ಮಹಂತಲಿಂಗಾಪುರ, ಇಂಡ್ಲವಾಡಿ, ಆನೇಕಲ್, ಅತ್ತಿಬೆಲೆ, ವಿಮಾನ ನಿಲ್ದಾಣ ಮಾರ್ಗವಾಗಿ ನಾಲ್ಕು ಪಥಗಳ ರಸ್ತೆ ಕಾಮಗಾರಿ ಇನ್ನೊಂದು ತಿಂಗಳಲ್ಲಿ ಪ್ರಾರಂಭವಾಗಲಿದೆ. ಈ ಎಲ್ಲಾ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ. ನಮ್ಮ ಅವಧಿಯಲ್ಲಿ ಜನರ ಸೇವೆ ಮಾಡಿದ ತೃಪ್ತಿಯಿದೆ’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಕೆ.ಕೇಶವರೆಡ್ಡಿ ಮಾತನಾಡಿ, ‘ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ಕು ಕೆರೆಗಳು ಕಲುಷಿತವಾಗಿವೆ. ಈ ಕೆರೆಗಳಿಗೆ ಕಾರ್ಖಾನೆಗಳ ನೀರು ಸೇರುವುದರಿಂದ ಹಾಳಾಗಿದೆ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಲಾಗಿದೆ. ಎಲ್ಲಾ ಕಾರ್ಖಾನೆಗಳು ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಕಡ್ಡಾಯವಾಗಿ ತೆರೆಯುವಂತೆ ಕ್ರಮ ಕೈಗೊಳ್ಳಲು ಸಂಸದರು ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಬೇಕು’ ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ಕೆ.ರಮೇಶ್‌, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ಅರ್ಚನಾ, ಸದಸ್ಯ ಎಚ್.ಜೆ.ಪ್ರಸನ್ನಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ರೇಖಾ ಕೇಶವರೆಡ್ಡಿ, ಪುಷ್ಪರಾಜು, ಆನಂದ್, ಮಹದೇವಯ್ಯ, ಕಾರ್ಯನಿರ್ವಹಣಾಧಿಕಾರಿ ಟಿ.ಕೆ.ರಮೇಶ್, ಕೆಪಿಸಿಸಿ ಸದಸ್ಯ ಎಂ.ಬಾಬು, ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭಾಕರರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಪ್ಪ, ಶ್ರೀಧರ್, ಮುಖಂಡರಾದ ಎಚ್.ಎಸ್.ಬಸವರಾಜು, ಎನ್.ಬಿ.ಐ.ನಾಗರಾಜು, ಕೆ.ಎಸ್.ನಟರಾಜ್‌,ಹಾ.ವೇ.ವೆಂಕಟೇಶ್, ಜಿಗಣಿ ಮುನಿಯಪ್ಪ, ದೊಡ್ಡಹಾಗಡೆ ಹರೀಶ್, ಬಿ.ಪಿ.ರಮೇಶ್, ಪುನೀತ್, ನಾಗವೇಣಿ, ರಾಜಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆರ್.ಎಸ್.ಪ್ರಕಾಶ್ ಹಾಜರಿದ್ದರು.

‘ಹುರುಪು ಕಳೆದುಕೊಳ್ಳುವಂತಾಗಿದೆ’
ಕೆಲಸ ಮಾಡಿದವರನ್ನು ಚುನಾವಣೆ ಸಂದರ್ಭದಲ್ಲಿ ಮರೆಯುವ ಪ್ರವೃತ್ತಿಯಿಂದಾಗಿ ಕೆಲಸ ಮಾಡಲು ಹುರುಪು ಕಳೆದುಕೊಳ್ಳುವಂತಾಗಿದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಹಿನ್ನೆಡೆಯಿಂದಾಗಿ ನನ್ನ ಅಭಿವೃದ್ಧಿಯ ವೇಗಕ್ಕೆ ಬ್ರೇಕ್‌ ಹಾಕಲಾಗಿದೆ. ಅಭಿವೃದ್ಧಿ ಕೆಲಸಗಳ ಬಗ್ಗೆ ಆಸಕ್ತಿ ಕಳೆದುಕೊಳ್ಳುವಂತಾಗಿದೆ. ನಯಾ ಪೈಸೆ ಕೆಲಸ ಮಾಡದವರು ನಾವು ಮಾಡಿದ ಕೆಲಸಗಳಿಗೆ ತಾವು ವಾರಸುದಾರಾಗಲು ಬರುತ್ತದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.

ಜನರ ಭಾವನೆಗಳ ಜೊತೆ ಆಟವಾಡಿ ಯಶಸ್ಸು ಕಂಡಿದ್ದಾರೆ. ಆದರೆ ಭಾವನೆಗಳು ಎಲ್ಲಾ ಸಂದರ್ಭದಲ್ಲೂ ಕೆಲಸಕ್ಕೆ ಬರುವುದಿಲ್ಲ. ಮಾಡಿದ ಕೆಲಸಗಳನ್ನು ಜನರು ಗುರುತಿಸಬೇಕು. ಕೇವಲ ವಾಟ್ಸಪ್, ಫೇಸ್‌ಬುಕ್‌ಗಳಲ್ಲಿ ಹೇಳಿದ್ದನ್ನೇ ನಂಬರಾದರು. ದೇಶದ ಸೈನಿಕರು 131ಕೋಟಿ ಜನರ ಆಸ್ತಿ ಆದರೆ ಕೆಲವರು ಸೈನಿಕರನ್ನು ತಮ್ಮ ಆಸ್ತಿ ಎಂಬಂತೆ ಬಿಂಬಿಸಿಕೊಂಡು ಚುನಾವಣೆಯಲ್ಲಿ ಮತಯಾಚಿಸಿದರು ಎಂದರು.

ಹಕ್ಕುಪತ್ರಕ್ಕೆ ಶೀಘ್ರ ಕ್ರಮ
ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಸ್ತೇನಹಳ್ಳಿ ದಿಣ್ಣೆಯಲ್ಲಿ ಕೆಐಡಿಬಿಯ ಸ್ವಾಧೀನದಲ್ಲಿರುವ ಸರ್ಕಾರಿ ಜಾಗದಲ್ಲಿ ಸುಮಾರು 150ಕ್ಕೂ ಹೆಚ್ಚು ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಕೆಐಡಿಬಿ ಸಭೆಯಲ್ಲಿ ತೀರ್ಮಾನ ಕೈಗೊಂಡು ಇವರಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು. ಹೆನ್ನಾಗರ ಸರ್ವೆ ನಂ.5ನ್ನು ಗ್ರಾಮೀಣ ಅರಣ್ಯ ಎಂದು ಗುರುತಿಸಲಾಗಿದೆ. ಹಾಗಾಗಿ ಈ ಪ್ರದೇಶದಲ್ಲಿ ವಾಸ ಮಾಡುವ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ತೊಂದರೆಯಾಗಿದೆ. ದಾಖಲೆಗಳಲ್ಲಿ ಗ್ರಾಮೀಣ ಅರಣ್ಯ ಎಂಬುದನ್ನು ತೆಗೆಸಿ ನಂತರ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT