ಗುರುವಾರ , ಸೆಪ್ಟೆಂಬರ್ 19, 2019
°C
ಜಲಶಕ್ತಿ ಅಭಿಯಾನದಿಂದ ಅರಿವು ಕಾರ್ಯಕ್ರಮ

ಪಾರಂಪರಿಕ ಜಲಮೂಲ ಸಂರಕ್ಷಣೆ ಅಗತ್ಯ

Published:
Updated:
Prajavani

ಹಾಡೋನಹಳ್ಳಿ (ದೊಡ್ಡಬಳ್ಳಾಪುರ): ಮಳೆ ನೀರನ್ನು ಸಂರಕ್ಷಣೆ ಮಾಡಿಕೊಳ್ಳದಿದ್ದರೆ ಅಂತರ್ಜಲದ ಮಟ್ಟ ಇಳಿಯುತ್ತದೆ. ಮಣ್ಣು ಸವಕಳಿಯಾಗಿ ಮಣ್ಣಿನ ಫಲವತ್ತತೆಯೂ ಸಹ ಕ್ಷೀಣಿಸುತ್ತದೆ ಎಂದು ಬೆಂಗಳೂರಿನ ಗಾಂಧಿ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಎಂ.ಎಸ್.ನಟರಾಜ್ ಹೇಳಿದರು.

ತಾಲ್ಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಜಿಲ್ಲಾಡಳಿತದ ಸಹಯೋಗದೊಂದಿಗೆ ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ತಾಲ್ಲೂಕಿನ ರೈತರಿಗೆ ಹಮ್ಮಿಕೊಂಡಿದ್ದ ಜಲಶಕ್ತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೆರೆ, ಕುಂಟೆ, ಬಾವಿಗಳು ಬತ್ತಿ ಹೋಗಿ ನಂತರ ಅಂತರ್ಜಲ ಪಾತಾಳ ಸೇರುತ್ತಿದ್ದಂತೆ ಬಾವಿಗಳನ್ನು ಬಳಸಿದರು. ಮುಂದೆ ಸಾಗಿ ಕೈ ಪಂಪ್‍ಗಳ ಬಳಕೆ ಹೆಚ್ಚಾಯಿತು. ಆದರೆ ಇದೀಗ ಕೊಳವೆ ಬಾವಿಗಳನ್ನು ಹಾಕಿ ನೀರನ್ನು ಭೂಮಿಯಿಂದ ತೆಗೆದು ಕುಡಿಯಲು ಬಳಸುವ ಸ್ಥಿತಿ ಎದುರಾಗಿದೆ. ಇದರಿಂದ ಫ್ಲೋರೈಡ್‌ನಂಥ ವಿಷಕಾರಿ ವಸ್ತುಗಳು ಹೆಚ್ಚಾಗಿದ್ದು, ಶುದ್ಧ ನೀರಿಗೂ ಕುತ್ತು ಬಂದೊದಗಿದೆ. ಇದು ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಇದಕ್ಕೆ ಪ್ರತಿಯೊಬ್ಬರೂ ಬೆಲೆ ತೆರಬೇಕಾಗುತ್ತದೆ’ ಎಂದರು.

ಸಸಿ ನೆಟ್ಟು ಮಳೆ ಪ್ರಮಾಣ ಹೆಚ್ಚಿಸಿ: ‘ಸಕಲ ಜೀವ ಸಂಕುಲಕ್ಕೂ ನೀರನ್ನು ಉಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೆರೆ, ಕುಂಟೆ, ಬಾವಿಗಳನ್ನು ಉಳಿಸುವುದು ಎಲ್ಲರ ಕೆಲಸವಾಗಬೇಕು. ನೀರು ಪೋಲಾಗುವುದನ್ನು ತಡೆಗಟ್ಟುವ ಕಡೆ ಗಮನ ಹರಿಸಬೇಕು. ಮಳೆ ನೀರಿನ ಕೊಯ್ಲನ್ನು ಬಳಸಿಕೊಂಡು ನೀರು ವ್ಯರ್ಥವಾಗುವುದನ್ನು ತಡೆಗಟ್ಟಬೇಕು. ಇದರ ಜೊತೆಗೆ ಸಸಿಗಳನ್ನು ನೆಡುವ ಮೂಲಕ ಮಳೆ ಪ್ರಮಾಣ ಹೆಚ್ಚಿಸುವಂತೆ ಮಾಡಬೇಕು’ ಎಂದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎ.ಪಿ.ಮಲ್ಲಿಕಾರ್ಜುನಗೌಡ ಮಾತನಾಡಿ, ಜಲಶಕ್ತಿ ಆಂದೋಲನದ ಮುಖ್ಯ ಉದ್ದೇಶ ನಮ್ಮ ದೇಶದಲ್ಲಿ 254 ಜಿಲ್ಲೆಗಳನ್ನು ಗುರುತಿಸಿ, ಈ ಜಿಲ್ಲೆಗಳಲ್ಲಿ ನೀರಿನ ಸಮಗ್ರ ನಿರ್ವಹಣೆ, ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಸೂಕ್ಷ್ಮ ನೀರಾವರಿ ಪದ್ಧತಿಗಳ ಅಳವಡಿಕೆ, ಮಳೆ ನೀರು ಕೊಯ್ಲು, ಬರ ನಿರೋಧಕ ತಳಿಗಳು, ಕಡಿಮೆ ನೀರನ್ನು ಬೇಡುವ ಬೆಳೆಗಳು, ನೀರಿನ ಸಂರಕ್ಷಣೆಗೆ ಅಂತರ ಬೇಸಾಯ ಪದ್ಧತಿಗಳು, ಹೊದಿಕೆ ಬೆಳೆಗಳು ಇತ್ಯಾದಿ ಅಂಶಗಳ ಬಗ್ಗೆ ರೈತರಿಗೆ ಅರಿವು ಮೂಡಿಸುವುದಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಅಪ್ಪಯ್ಯ, ಜಲಶಕ್ತಿ ಅಭಿಯಾನದ ಜಂಟಿ ಕಾರ್ಯದರ್ಶಿ ಜಿ.ಆರ್. ರಾಘವೇಂದ್ರ, ನೋಡಲ್ ಅಧಿಕಾರಿ, ನಂದಿನಿ ದೇವಿ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ರಾಜ ಸುಲೋಚನ ಮಾತನಾಡಿದರು.

ತಾಂತ್ರಿಕ ಸಮಾವೇಶದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಹಿರಿಯ ವಿಜ್ಞಾನಿಗಳಾದ ಡಾ.ಎಂ.ಎನ್.ತಿಮ್ಮೇಗೌಡ, ನೀರು ಹಾಗೂ ಕೃಷಿ ಬದುಕು ಎಂಬ ವಿಷಯದ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು. ಮುಖ್ಯ ವಿಜ್ಞಾನಿ ಡಾ.ಮೂಡಲಗಿರಿಯಪ್ಪ, ಮಳೆಯಾಶ್ರಿತ ಭೂಮಿಯಲ್ಲಿ ಮಣ್ಣು ಮತ್ತು ನೀರಿನ ಸಮಗ್ರ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ನಿವೃತ್ತ ಪ್ರಾಧ್ಯಾಪಕರಾದ (ತೋಟಗಾರಿಕೆ), ಡಾ.ಕೃಷ್ಣಮನೋಹರ್, ನಿಖರ ಕೃಷಿ ಹಾಗೂ ಸೂಕ್ಷ್ಮ ನೀರಾವರಿಯ ಬಗ್ಗೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ಕರಿಯಪ್ಪ, ಉಪಕೃಷಿ ನಿರ್ದೇಶಕ ಎಂ.ಸಿ.ವಿನುತ, ರೇಷ್ಮೆ ಇಲಾಖೆಯ ಕುಮಾರಸ್ವಾಮಿ,ಹಿರಿಯ ಸಹಾಯಕ ನಿರ್ದೇಶಕ ಎಸ್.ಆರ್.ನಾಗರಾಜ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸುಬ್ಬಣ್ಣ, ಸಹಾಯಕ ಕೃಷಿ ನಿರ್ದೇಶಕ ನಾರಾಯಣಸ್ವಾಮಿ ಇದ್ದರು.

Post Comments (+)