ಶುಕ್ರವಾರ, ನವೆಂಬರ್ 22, 2019
25 °C
ಪುರಸಭೆಯಲ್ಲಿ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ

‘ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ’

Published:
Updated:
Prajavani

ವಿಜಯಪುರ: ‘ಪೌರಕಾರ್ಮಿಕರಿಗೆ ಇರುವಂತಹ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು, ಮಕ್ಕಳಿಗೆ ಶಿಕ್ಷಣಕೊಟ್ಟು ಅವರನ್ನು ಸಮಾಜದಲ್ಲಿ ಉನ್ನತಹುದ್ದೆಗಳು ಅಲಂಕರಿಸುವಂತೆ ಮಾಡಬೇಕಾಗಿರುವುದು ನಿಮ್ಮ ಕರ್ತವ್ಯ’ ಎಂದು ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಗೋಪಾಲಕೃಷ್ಣ ಹೇಳಿದರು.

ಇಲ್ಲಿನ ಪುರಸಭೆಯ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪೌರಕಾರ್ಮಿಕರಿಗಾಗಿ ಗೃಹಭಾಗ್ಯ ಯೋಜನೆ, ಆರೋಗ್ಯ ತಪಾಸಣೆ, ವಿಮೆ ಸೌಲಭ್ಯ, ಅವರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಆರ್ಥಿಕ ವ್ಯವಸ್ಥೆ, ಒದಗಿಸಲಾಗುತ್ತಿದೆ. ಪೌರಕಾರ್ಮಿಕರು ಸ್ವಚ್ಛತೆಯ ಕಡೆಗೆ ಗಮನಹರಿಸಿದಂತೆ ತಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಲಿ’ ಎಂದರು.

ಪುರಸಭಾ ಮುಖ್ಯಾಧಿಕಾರಿ ಎ.ಬಿ. ಪ್ರದೀಪ್‌ಕುಮಾರ್ ಮಾತನಾಡಿ, ‘ಜನರ ಆರೋಗ್ಯ ಚೆನ್ನಾಗಿರಬೇಕು, ನಗರ ಸ್ವಚ್ಛವಾಗಿರಬೇಕು ಎಂದು ಪರಿಶ್ರಮ ಪಡುವ ಪೌರ ಕಾರ್ಮಿಕರ ಸೇವೆ ಹಾಗೂ ಸಮಾಜದ ಸೌಖ್ಯ ಕಾಪಾಡುವ ಸಲುವಾಗಿ ಅವರು ನಿರ್ವಹಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ’ ಎಂದರು.

‘ಪೌರ ಕಾರ್ಮಿಕರಿಲ್ಲದಿದ್ದರೆ ನಗರದಲ್ಲಿ ಜನರು ಒಂದು ದಿನವನ್ನು ಊಹಿಸಿಕೊಳ್ಳುವುದೂ ಅಸಾಧ್ಯ.ಕಾರ್ಮಿಕರು ನಿಮ್ಮ ಮಕ್ಕಳೂ ಪೌರಕಾರ್ಮಿಕರಾಗಬೇಕು ಎನ್ನುವ ಚಿಂತನೆ ಬಿಡಬೇಕು. ಅವರನ್ನು ಅಧಿಕಾರಿಗಳನ್ನಾಗಿ ಮಾಡಬೇಕು’ ಎಂದರು.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್. ಭಾಸ್ಕರ್ ಮಾತನಾಡಿ, ‘ಪೌರಕಾರ್ಮಿಕರ ವಸತಿ ಗೃಹಗಳು ಶಿಥಿಲವಾಗಿವೆ. ಅವರಿಗೆ ಅನುಕೂಲವಾಗುವಂತೆ ಇಲಾಖೆಯಿಂದ ವಸತಿಗೃಹಗಳನ್ನು ನಿರ್ಮಾಣ ಮಾಡಿಕೊಡಬೇಕು. ನಿವೇಶನ ಖರೀದಿಗೆ ಅವರಲ್ಲಿ ಶಕ್ತಿಯಿಲ್ಲ. ಆದ್ದರಿಂದ ಅವರಿಗೆ ನಿರ್ಮಾಣವಾಗಿರುವ ಮನೆಗಳು ಹಂಚಿಕೆ ಮಾಡಬೇಕು’ ಎಂದರು.

ಕಾಂಗ್ರೆಸ್ ನಾಯಕ ಎಂ. ಸತೀಶ್‌ಕುಮಾರ್ ಮಾತನಾಡಿ, ‘ನಾಗರಿಕತೆ ಬೆಳೆದಂತೆ ಜನರ ಅವಶ್ಯಕತೆ ಜೊತೆಗೆ, ಪೌರಕಾರ್ಮಿಕರ ಜವಾಬ್ದಾರಿ ಹಾಗೂ ಕರ್ತವ್ಯ ಕೂಡ ಹೆಚ್ಚಾಗುತ್ತಿದೆ. ಪೌರಕಾರ್ಮಿಕರಿಗೆ ಭತ್ಯೆ, ವೇತನ, ಆಧುನಿಕ, ವೈಜ್ಞಾನಿಕ ಸೌಲಭ್ಯ, ಸೌಕರ್ಯಗಳು ಸಮರ್ಪಕವಾಗಿ ಸಿಗಬೇಕು. ಪುರಸಭೆ ಅವರ ಆರೋಗ್ಯದ ಬಗ್ಗೆ ಗಮನಹರಿಸಬೇಕು’ ಎಂದರು.

ಮುಖಂಡ ಜೆ.ಎನ್. ಶ್ರೀನಿವಾಸ್ ಮಾತನಾಡಿದರು. ನಿವೃತ್ತ ಮುಖ್ಯಾಧಿಕಾರಿ ಪಿ.ಎಸ್. ಮಾರುತಿಶಂಕರ್, ನಿವೃತ್ತ ಪೌರಾಯುಕ್ತ ಶಿವಕುಮಾರ್ ಅವರನ್ನು ಪೌರಕಾರ್ಮಿಕರು ಸನ್ಮಾನಿಸಿದರು. ಪೌರಕಾರ್ಮಿಕ ದಿನಾಚರಣೆಯ ಅಂಗವಾಗಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾಗಿರುವ ಪೌರಕಾರ್ಮಿಕರನ್ನು ಸನ್ಮಾನಿಸಿದರು.

ಪೌರಸೇವಾ ಸಂಘದ ಕಾನೂನು ಸಲಹೆಗಾರ ವೆಂಕಟೇಶಪ್ಪ, ಜೆ.ಎನ್. ಶ್ರೀನಿವಾಸ್, ಮುಖಂಡರಾದ ಗೌಸ್‌ಖಾನ್, ವಿ.ಎಂ. ನಾಗರಾಜ್, ಎಂ. ಮಹೇಶ್‌ಕುಮಾರ್, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಅಪ್ಪಿರಾಜ್, ಉಪಾಧ್ಯಕ್ಷ ಮುನಿಯಪ್ಪ, ಮಧುಗಿರಿ ಪುರಸಭಾ ಮುಖ್ಯಾಧಿಕಾರಿ ನವೀನ್‌ಚಂದ್ರ, ಪುರಸಭಾ ಕಂದಾಯ ಅಧಿಕಾರಿ ಜಯಕಿರಣ್, ಪರಿಸರ ಎಂಜಿನಿಯರ್ ಮಹೇಶ್‌ಕುಮಾರ್, ಸುಪ್ರಿಯಾರಾಣಿ, ಕಿರಿಯ ಆರೋಗ್ಯ ನಿರೀಕ್ಷಕಿ ಪ್ರಭಾವತಿ, ಸರಸ್ವತಮ್ಮ, ಲಕ್ಷ್ಮೀನಾರಾಯಣ, ಜನಾರ್ಧನ, ಪ್ರಸನ್ನಕುಮಾರ್, ಮೂರ್ತಿ, ರವಿ, ಸುರೇಶ್, ಜ್ಯೋತಿ, ಮಮತ ಇದ್ದರು.

ಪ್ರತಿಕ್ರಿಯಿಸಿ (+)