ಶುಕ್ರವಾರ, ಏಪ್ರಿಲ್ 10, 2020
19 °C
ವೆಂಕಟಗಿರಿಕೋಟೆ, ಬುಳ್ಳಹಳ್ಳಿ, ಮುದುಗುರ್ಕಿ, ಇರಿಗೇನಹಳ್ಳಿ ಗ್ರಾಮಸ್ಥರ ಆತಂಕ

ಹೆದ್ದಾರಿ ಅಪಘಾತ, ಸಾವು – ನೋವುಗಳದ್ದೇ ಸುದ್ದಿ

ಎಂ.ಮುನಿನಾರಾಯಣ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ದಿನಬೆಳಗಾದರೆ ಎಲ್ಲಿ ಅಪಘಾತ ಸುದ್ದಿ ಕಿವಿಗೆ ಅಪ್ಪಳಿಸಲಿದೆಯೋ ಎನ್ನುವ ಆತಂಕದಲ್ಲೇ ದಿನದೂಡುವ ಸ್ಥಿತಿ ವೆಂಕಟಗಿರಿಕೋಟೆ ಸುತ್ತಮುತ್ತಲಿನ ಭಾಗದ ಜನರ ನಿತ್ಯದ ಗೋಳು. 

ರಾಜಧಾನಿ ಬೆಂಗಳೂರಿನಿಂದ ಹೈದರಾಬಾದ್‌ಗೆ ಸಂಚರಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ವೆಂಕಟಗಿರಿಕೋಟೆ, ಬುಳ್ಳಹಳ್ಳಿ, ಮುದುಗುರ್ಕಿ,ಇರಿಗೇನಹಳ್ಳಿ ಗ್ರಾಮಗಳ ಜನರು ಭಯದ ವಾತಾವರಣದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ಜನರ ಪಾಲಿಗೆ ಅಪಘಾತ, ಸಾವು ಸಾಮಾನ್ಯ ಎಂಬಂತಾಗಿದೆ.

ವೆಂಕಟಗಿರಿಕೋಟೆ ಸುತ್ತಲಿನ ಕೂಲಿಕಾರ್ಮಿಕರು, ದ್ರಾಕ್ಷಿ ಕಟಾವು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.  ಬಹುತೇಕ ಕುಟುಂಬಗಳಲ್ಲಿನ ಕೂಲಿಕಾರ್ಮಿಕರ ಬದುಕು ಬೆಳಿಗ್ಗೆ 5ಕ್ಕೆ ಆರಂಭವಾಗುತ್ತದೆ. ದ್ರಾಕ್ಷಿ ಕಟಾವು ಕೆಲಸಕ್ಕೆ ಹೋಗಲು ಬೆಳಿಗ್ಗೆ ವೆಂಕಟಗಿರಿಕೋಟೆ ಕ್ರಾಸ್‌ಗೆ ಬರುವ ಸಾವಿರಾರು ಮಂದಿ 7ಗಂಟೆವರೆಗೂ ಅಲ್ಲಿ ಜಮಾಯಿಸುತ್ತಾರೆ.

ರಾತ್ರಿಯಿಡೀ ದೂರದ ಹೈದರಾಬಾದ್‌ನಿಂದ ಬೆಂಗಳೂರಿನ ಕಡೆಗೆ ಸಂಚರಿಸುವ ಲಾರಿ, ಬಸ್‌ ಸೇರಿದಂತೆ ಕಲ್ಲು ಕ್ವಾರಿಯಿಂದ ಜಲ್ಲಿ, ಎಂ.ಸ್ಯಾಂಡ್ ತುಂಬಿಸಿಕೊಂಡು ಬರುವ ಟಿಪ್ಪರ್‌ಗಳ ಅತಿಯಾದ ವೇಗಕ್ಕೆ ಎಷ್ಟೋ ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. 

ಮುದುಗುರ್ಕಿ ಗೇಟ್, ಬುಳ್ಳಹಳ್ಳಿ ಗೇಟ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುವ ಸಂದರ್ಭದಲ್ಲಿ ಅಪಘಾತಗಳಿಗೆ ಬಲಿಯಾಗಿರುವ ಜನರಿಗೆ ಲೆಕ್ಕವೇ ಇಲ್ಲ. ರಾಷ್ಟ್ರೀಯ ಹೆದ್ದಾರಿಯಾಗಿದ್ದರೂ ಅಪಘಾತ ವಲಯವಾಗಿ ಮಾರ್ಪಟ್ಟಿರುವ ಕಡೆ ಯಾವುದೇ ಸುರಕ್ಷತಾ ಕ್ರಮವನ್ನು ಇಲಾಖೆ ಅಧಿಕಾರಿಗಳು ಕೈಗೊಂಡಿಲ್ಲ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡುವ ಮೂಲಕ ಈ ಭಾಗದಲ್ಲಿ ಆಗುತ್ತಿರುವ ಅಪಘಾತ ತಡೆಗಟ್ಟಿ ಜನರ ಪ್ರಾಣ ಉಳಿಸಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವಾಗ ಸಮೀಪದ ಹಳ್ಳಿ ಜನರಿಗೆ ಅನುಕೂಲವಾಗುವಂತೆ ಸರ್ವಿಸ್ ರಸ್ತೆ ನಿರ್ಮಾಣ ಮಾಡಬೇಕೆಂಬ ನಿಯಮವಿದ್ದರೂ ನಿಯಮಬಾಹಿರವಾಗಿ ರಸ್ತೆ ನಿರ್ಮಾಣ ಮಾಡಲಾಗಿದ್ದು, ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ರಾಜಪ್ಪ ದೂರಿದರು.

ಇರಿಗೇನಹಳ್ಳಿ ಗೇಟ್‌ ಸಮೀಪದಲ್ಲಿ ಸಿಮೆಂಟ್ ತುಂಬಿಕೊಂಡು ಹೋಗುವ ಲಾರಿಗಳನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸಾಲಾಗಿ ನಿಲ್ಲಿಸಲಾಗುತ್ತದೆ. ಇದರಿಂದ ರಾತ್ರಿ ಸಮಯ ಸಂಚರಿಸುವ ದ್ವಿಚಕ್ರ ವಾಹನಗಳ ಸವಾರರು ಲಾರಿಗಳನ್ನು ಗುರ್ತಿಸಲು ವಿಫಲವಾಗಿ ಅಪಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಪೊಲೀಸರು ನಡೆಸಿರುವ ಹಲವು ಸಭೆಗಳಲ್ಲಿ ಈ ವಿಚಾರ ಪ್ರಸ್ತಾಪವೂ ಆಗಿದೆ. ಸಿಮೆಂಟ್ ಲಾರಿಗಳನ್ನು ರಸ್ತೆ ಇಕ್ಕೆಲಗಳಲ್ಲಿ ನಿಲ್ಲಿಸಿಕೊಳ್ಳುವುದರ ಬದಲಿಗೆ ಒಳಗೆ ನಿಲ್ಲಿಸಿಕೊಳ್ಳಲು ಸೂಚನೆ ನೀಡಿದ್ದರೂ ಇದುವರೆಗೂ ಸಾಧ್ಯವಾಗಿಲ್ಲ ಎಂದರು.

ಪ್ರತಿ ಭಾನುವಾರ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಯುವಕರು, ದ್ವಿಚಕ್ರ ವಾಹನಗಳಲ್ಲಿ ನಂದಿಬೆಟ್ಟಕ್ಕೆ ಹೋಗಲು ಈ ರಸ್ತೆ ಬಳಸುತ್ತಾರೆ. ಅತಿಯಾದ ವೇಗದಿಂದ ವಾಹನಗಳನ್ನು ಚಾಲನೆ ಮಾಡುವುದರ ಜತೆಗೆ ವ್ಹೀಲಿಂಗ್ ಕೂಡ ಮಾಡುತ್ತಾರೆ. ರಾಷ್ಟ್ರೀಯ ಹೆದ್ದಾರಿಯಲ್ಲೂ ವ್ಹೀಲಿಂಗ್ ನಡೆಸುತ್ತಾರೆ. ಸುತ್ತಲಿನ ಹಳ್ಳಿಗಳ ಕಡೆಗೆ ರಸ್ತೆ ತಿರುವು ಇರುವುದನ್ನು ಗಮನಿಸದೆ ಅಪಘಾತ ಸಂಭವಿಸಿ ಶಾಲಾ – ವಿದ್ಯಾರ್ಥಿಗಳು ಅನೇಕರು ಸಾವನ್ನಪ್ಪಿದ್ದಾರೆ. ಈ ರಸ್ತೆಯಲ್ಲಿ ಅಪಘಾತಗಳು ಸಾಮಾನ್ಯವಾಗಿವೆ. ಸಾಯುವವರ ಸಂಖ್ಯೆಯೂ ಅಧಿಕ ಎನ್ನುತ್ತಾರೆ ಮುಖಂಡ ಹೊಸಹುಡ್ಯ ನರಸಿಂಹಪ್ಪ.

ಹೈದರಾಬಾದ್‌ನಿಂದ ಬೆಂಗಳೂರಿನ ಕಡೆಗೆ ಸಂಚರಿಸುವ ರಸ್ತೆಯಲ್ಲಿ ಲಾರಿ, ಟಿಪ್ಪರ್‌ ಚಾಲಕರು ಪಾನಮತ್ತರಾಗಿ ಚಾಲನೆ ಮಾಡುತ್ತಾರೆ. ಇಂತಹ ವಾಹನಗಳ ತಪಾಸಣೆ ಮಾಡಿ ಅಪಘಾತ ‌ತಡೆಗಟ್ಟಲು ಅನುಕೂಲವಾಗುವಂತೆ ವೆಂಕಟಗಿರಿಕೋಟೆ ಬಳಿ ಪೊಲೀಸ್ ಹೊರಠಾಣೆ ನಿರ್ಮಾಣ ಮಾಡಿದರೆ ಉತ್ತಮ ಎಂದು ಅನೇಕ ಸಭೆಗಳಲ್ಲಿ ಪ್ರಸ್ತಾಪವಾಗಿದೆ. ಆದರೂ ಯಾರೊಬ್ಬರೂ ಈ ಬಗ್ಗೆ ಗಮನಹರಿಸಿಲ್ಲ ಎಂದು ಮುಖಂಡ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಮುಖಂಡ ರಾಮಚಂದ್ರಪ್ಪ ಮಾತನಾಡಿ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಹೆದ್ದಾರಿಯಲ್ಲಿ ನಿರ್ಮಾಣ ಮಾಡಿರುವ ಮಾದರಿಯಲ್ಲಿ ಇಲ್ಲಿ ಕೂಡ ಮೇಲ್ಸೆತುವೆ ನಿರ್ಮಾಣ ಮಾಡಿದರೆ ಶಾಲಾ– ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ದ್ರಾಕ್ಷಿ ಕಟಾವು ಮಾಡಲು ಹೋಗುವ ಕೂಲಿಕಾರ್ಮಿಕರಿಗೆ ಅನುಕೂಲವಾಗಲಿದೆ. ಈ ಸಂಬಂಧ ಹಿಂದಿನ ಸಂಸದರಿಗೂ, ಈಗಿನ ಶಾಸಕರಿಗೂ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿ ಶ್ರೀನಿವಾಸಮೂರ್ತಿ ಮಾತನಾಡಿ, ವೆಂಕಟಗಿರಿಕೋಟೆ ಸಮೀಪದ ಹೆದ್ದಾರಿಯಲ್ಲಿ ಸಾಕಷ್ಟು ಅಪಘಾತ ಸಂಭವಿಸುವ ತಾಣಗಳು. ಈ ಬಗ್ಗೆ ಸ್ಥಳೀಯರು ಅನೇಕ ಹೋರಾಟ ನಡೆಸಿದ್ದಾರೆ. ಕೇಂದ್ರ ಹೆದ್ದಾರಿ ಪ್ರಾಧಿಕಾರದಿಂದ ಮುದುಗುರ್ಕಿ ಬಳಿಯಿಂದ ವೆಂಕಟಗಿರಿಕೋಟೆವರೆಗೆ ಸರ್ವಿಸ್ ರಸ್ತೆ ಹಾಗೂ ಸ್ಕೈವಾಕ್ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಸ್ಥಳೀಯ ಸಮಸ್ಯೆಗಳ ಕುರಿತು ದೆಹಲಿಯಲ್ಲಿರುವ ಅಧಿಕಾರಿಗಳಿಗೆ ಮನವರಿಕೆಯಾಗದ ಕಾರಣದಿಂದ ವಿಳಂಬವಾಗಿದೆ. ಶೀಘ್ರವಾಗಿ ಕಾಮಗಾರಿ ಆರಂಭವಾಗುವ ವಿಶ್ವಾಸವಿದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು