ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳ ಉಳಿವಿಗೆ ಹೆದ್ದಾರಿ ತಡೆ

ಅರ್ಕಾವತಿ ನದಿ ಪಾತ್ರ ಸೇರಿದ ವಿಷಯುಕ್ತ ತ್ಯಾಜ್ಯ: ಜನರ ಆಕ್ರೋಶ
Last Updated 21 ಅಕ್ಟೋಬರ್ 2022, 6:05 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ತ್ಯಾಜ್ಯ ನೀರು ಹರಿಸುತ್ತಿರುವ ಕೈಗಾರಿಕೆಗಳು ಸೇರಿದಂತೆ ದೊಡ್ಡಬಳ್ಳಾಪುರ ನಗರಸಭೆ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ, ದೊಡ್ಡತುಮಕೂರು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ಕೆರೆ ಹೋರಾಟ ಸಮಿತಿ ನೇತೃತ್ವದಡಿ ಗುರುವಾರ ಬೆಂಗಳೂರು-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿ ತಡೆ ನಡೆಯಿತು.

ಚಿಕ್ಕತುಮಕೂರು ಕೆರೆಗೆ ನಗರಸಭೆ ಒಳಚರಂಡಿ ತ್ಯಾಜ್ಯ, ಬಾಶೆಟ್ಟಿಹಳ್ಳಿ ಕೈಗಾರಿಕೆಗಳ ತ್ಯಾಜ್ಯ ನೀರು ಹರಿಸಲಾಗುತ್ತಿದೆ. ಕೆರೆಗಳ ಮಾಲಿನ್ಯಕ್ಕೆ ಕಾರಣವಾಗಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಮನವಿ ಮಾಡಿದೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಕಾರ್ಖಾನೆಗಳಿಂದ ಹೊರಬರುವ ರಾಸಾಯನಿಕಗಳು ಒಳಚರಂಡಿ ನೀರಿಗೆ ಸೇರಿವೆ. ನಗರಸಭೆ ನಿರ್ಲಕ್ಷ್ಯದಿಂದ ನೇರವಾಗಿ ನಾಗರಕೆರೆ ಮೂಲಕ ಅರ್ಕಾವತಿ ನದಿ ಪಾತ್ರದ ಕೆರೆಗಳನ್ನು ಸೇರುತ್ತಿವೆ. ನಗರಸಭೆ ವ್ಯಾಪ್ತಿ ಮೂರು ಹಂತದಲ್ಲಿ ತ್ಯಾಜ್ಯ ನೀರು ಸಂಸ್ಕರಿಸಲು ಘಟಕ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ವೇದಿಕೆಯ ಮುಖಂಡರಾದ ತಿ. ರಂಗರಾಜ್, ಸತೀಶ್, ವಸಂತಕುಮಾರ್ ಮಾತನಾಡಿ, ಘನ ಹಾಗೂ ರಾಸಾಯನಿಕ ತ್ಯಾಜ್ಯ ಸೇರಿ ಕೆರೆಯ ನೀರು ಬಳಕೆಗೆ ಯೋಗ್ಯವಾಗಿಲ್ಲ. ಗ್ರಾಮ ಪಂಚಾಯಿತಿಯಿಂದ ಜಿಲ್ಲಾಡಳಿತದವರೆಗೆ ಎಲ್ಲರೂ ನಿರ್ಲಕ್ಷ್ಯವಹಿಸಿದ್ದಾರೆ. ಅರ್ಕಾವತಿ ನದಿ ಪಾತ್ರಕ್ಕೆ ವಿಷಯುಕ್ತ ಹಾಗೂ ಮಲ, ಮೂತ್ರ ತ್ಯಾಜ್ಯ ಹರಿಸುತ್ತಿರುವವರ ವಿರುದ್ಧ ಹೋರಾಟ ನಡೆಸುತ್ತಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದರು.

ವಕೀಲ ರವಿ ಮಾವಿನಕುಂಟೆ ಮಾತನಾಡಿ, ವ್ಯವಸ್ಥೆಯ ವೈಫಲ್ಯಕ್ಕೆ ಯಾರನ್ನು ದೂಷಿಸಬೇಕೋ ತಿಳಿಯದಾಗಿದೆ. ವಿಷಯುಕ್ತ ನೀರು ಕುಡಿಯುತ್ತಿರುವ ಜನರ ಸಮಸ್ಯೆಯನ್ನು ಪಕ್ಷಾತೀತವಾಗಿ ಬಗೆಹರಿಸಬೇಕಿದೆ ಎಂದರು.

ಲೇಖಕ ಮಂಜುನಾಥ್ ಎಂ. ಅದ್ದೆ ಮಾತನಾಡಿ, ಮಳೆ ನೀರಿನೊಂದಿಗೆ ತ್ಯಾಜ್ಯವು ಹೆಸರಘಟ್ಟ ಕೆರೆಗೆ ಹರಿದಿದೆ. ಬೆಂಗಳೂರಿಗೆ ಹರಿಯುವ ಶೇ 12ರಷ್ಟು ನೀರು ಇಲ್ಲಿನ ಕೆರೆಗಳದ್ದೇ ಆಗಿದೆ. ಅದು ಕಲುಷಿತವಾಗಿರುವ ಅಪಾಯವಿದೆ ಎಂದು ತಿಳಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಟಿ. ವೆಂಕಟರಮಣಯ್ಯ ಮಾತನಾಡಿ, ಕೆರೆಗಳಿಗೆ ಕಲುಷಿತ ನೀರು ಹರಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳನ್ನು ಎಚ್ಚರಿಸಲು ಪಾದಯಾತ್ರೆ ನಡೆಸಲಾಗುವುದು ಎಂದು
ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಾ ಇ. ರವಿಕುಮಾರ್ ಮಾತನಾಡಿ, ಸ್ಥಳೀಯ ಆಡಳಿತಗಳು ತ್ಯಾಜ್ಯ ನೀರನ್ನು ಶುದ್ಧೀಕರಿಸಬೇಕಿದೆ. ಬಾಶೆಟ್ಟಿಹಳ್ಳಿಯಲ್ಲಿ ಸಂಸ್ಕರಣಾ ಘಟಕ ಸ್ಥಾಪನೆಗೆ ಜಮೀನು ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶುದ್ಧೀಕರಣ ಘಟಕದ ಕಾಮಗಾರಿಗಳ ಟೆಂಡರ್ ಸರ್ಕಾರದ ಹಂತದಲ್ಲಿದೆ. ಕೈಗಾರಿಕೆ ಮಾಲೀಕರು ಹಾಗೂ ಕೆಐಎಡಿಬಿ ಅಧಿಕಾರಿಗಳ ಸಭೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ದೊಡ್ಡ ತುಮಕೂರು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ಕೆರೆ ಹೋರಾಟ ಸಮಿತಿ ಅಧ್ಯಕ್ಷ ಡಾ.ಆಂಜಿನಪ್ಪ, ಕೆಎಂಎಫ್‌ ನಿರ್ದೇಶಕ ಬಿ.ಸಿ. ಆನಂದ್‌ಕುಮಾರ್‌, ಟಿ.ಜಿ. ಮಂಜುನಾಥ್, ಸಂಜೀವ್‌ ನಾಯಕ್, ಅರವಿಂದ್, ಪ್ರಮೀಳಾ ಮಹದೇವ್, ಚಿಕ್ಕಣ್ಣಪ್ಪ, ಸಂದೇಶ್, ಹರೀಶ್‌ಗೌಡ, ಯತೀಶ್, ಡಾ.ಎಚ್.ಜಿ. ವಿಜಯಕುಮಾರ್, ಕೆ. ಸುಲೋಚನಮ್ಮ, ವೆಂಕಟರೆಡ್ಡಿ, ಹನುಮಂತರಾಜು, ನಾಗರಾಜು, ಲೋಕೇಶ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT