ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡ್ಡಿನಿಂದ ಗೆಲವು ಎಂಬುದು ಭ್ರಮೆ

ಎಂಟಿಬಿ ವಿರುದ್ಧ ಶಾಸಕ ಕೆ.ವೈ.ನಂಜೇಗೌಡ ವ್ಯಂಗ್ಯ
Last Updated 1 ಡಿಸೆಂಬರ್ 2019, 13:41 IST
ಅಕ್ಷರ ಗಾತ್ರ

ಸೂಲಿಬೆಲೆ:‘ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಜಯಶೀಲರನ್ನಾಗಿ ಮಾಡಿ. ಹೊಸಕೋಟೆ ಕ್ಷೇತ್ರದ ಅಭಿವೃದ್ಧಿಗೆ ಪ್ರಮಾಣಿಕವಾಗಿ ದುಡಿಯುತ್ತೇನೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅದು ಬಡವರ ಪರ ಕೆಲಸ ಮಾಡುವ ಸರ್ಕಾರ ಆಗಿರುತ್ತದೆ’ ಎಂದು ಹೊಸಕೋಟೆ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಮತದಾರರಲ್ಲಿ ಮನವಿ ಮಾಡಿದರು.

ನಂದಗುಡಿ ಹೋಬಳಿಯ ಕೆಂಬಳಿಗಾನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿದರು.

ಮಾಲೂರಿನ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ‘ವರ್ಷದ ಹಿಂದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮತ ಪಡೆದು ಶಾಸಕರಾಗಿದ್ದವರು, ಈಗ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಮತ ಕೇಳಲು ಬಂದಿದ್ದಾರೆ. ಹೊಸಕೋಟೆ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಯಾರು ಬರುತ್ತಾರೋ ನೋಡುತ್ತೇನೆ ಎಂದು ಚಾಲೆಂಜ್ ಮಾಡಿದ್ದರು’ ಎಂದು ಎಂಟಿಬಿ ವಿರುದ್ಧ ಗುಡುಗಿದರು.

‘ನಿಮ್ಮ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಹಿಳೆ ಬಂದಿದ್ದಾರೆ. ಮತ ನೀಡಿ ಆಶೀರ್ವದಿಸಿ’ ಎಂದು ಪದ್ಮಾವತಿ ಸುರೇಶ್ ಪರ ಮತ ಯಾಚಿಸಿದರು.

‘ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿ ಇಬ್ಬರೂ ಒಂದೇ ಆಗಿದ್ದಾರೆ. ಜನ ಕೊಟ್ಟ ತೀರ್ಪನ್ನು ಧಿಕ್ಕರಿಸಿ ಪಕ್ಷಕ್ಕೆ ದ್ರೋಹ ಮಾಡಿ ಹೋದವರನ್ನು ತಿರಸ್ಕರಿಸಿ. ಕಾರ್ಯಕರ್ತರ ಪರವಾಗಿ, ಬಡವರ ಅಭಿವೃದ್ಧಿಗಾಗಿ ಶ್ರಮಿಸುವ ಕಾಂಗ್ರೆಸ್ ಅಭ್ಯರ್ಥಿಯನ್ನು’ ಗೆಲ್ಲಿಸಿ ಎಂದರು.

‘ಲಕ್ಷೀದೇವಿ ರಾಮಣ್ಣ ಎಂಬುವವರು ಸುಮಾರು 50 ವರ್ಷಗಳ ಹಿಂದೆಯೇ ಹೊಸಕೋಟೆಯ ಶಾಸಕರಾಗಿದ್ದವರು. ಅವರ ಮೊಮ್ಮಗಳಾಗಿರುವ ಪದ್ಮಾವತಿ ಸುರೇಶ್ ಅವರಿಗೆ ಈಗ ಮತ್ತೆ ಅವಕಾಶ ಸಿಕ್ಕಿದೆ. ಮಹಿಳೆಯನ್ನು ಜಯಶೀಲರನ್ನಾಗಿ ಮಾಡಿ’ ಎಂದರು.

‘ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದ್ದು, ಗಾಂಧಿ, ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ಪ್ರಾಣ ತ್ಯಾಗ ಮಾಡಿ ದೇಶ ಕಟ್ಟಿದವರು. ಅಂತಹವರ ಪಕ್ಷ ಕಾಂಗ್ರೆಸ್’ ಎಂದರು.

ದುಡ್ಡಿನಿಂದ ಗೆಲವು ಎಂಬುದು ಭ್ರಮೆ:‘ದುಡ್ಡಿನಿಂದ ಮತದಾರರನ್ನು ಸೆಳೆಯಬಹುದು. ಮೂರು ಬಾರಿ ಶಾಸಕನಾಗಿದ್ದು ಈ ಉಪ ಚುನಾವಣೆಯಲ್ಲೂ ದುಡ್ಡಿನಿಂದ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದಾರೆ. ಈ ಹಿಂದೆ ಹೊಸಕೋಟೆ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೆಂದು ಮತ ಹಾಕಿ ಗೆಲ್ಲಿಸಿದ್ದರು. ಸಿದ್ದಾರಾಮಯ್ಯ ಅವರ ಯೋಜನೆಗಳಿಂದ ಮತದಾರರು ಶಾಸಕರಾಗಿ ಆಯ್ಕೆ ಮಾಡಿದ್ದರು’ ಎಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಗುಡುಗಿದರು.

ಯರೇಗೌಡ,ಕೆಪಿಸಿಸಿ ಸದಸ್ಯ ಶಿವಕುಮಾರ್,ಕೆಸಿಡಿಸಿ ಉಪಾಧ್ಯಕ್ಷ ಮುತ್ತುರಾಜ್, ನಂಜಪ್ಪ ಹಾಗೂ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT