ಬುಧವಾರ, ನವೆಂಬರ್ 20, 2019
27 °C

ಹಿಂಡಿಗನಾಳ ಸರ್ಕಾರಿ ಶಾಲೆ ಆವರಣ ದನಗಳ ದೊಡ್ಡಿ

Published:
Updated:
Prajavani

ಸೂಲಿಬೆಲೆ: ನಂದಗುಡಿ ಹೋಬಳಿಯ ಹಿಂಡಿಗನಾಳ ಗ್ರಾಮದಲ್ಲಿರುವ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಆವರಣ ದನಗಳ ದೊಡ್ಡಿಯಾಗಿ ಪರಿವರ್ತನೆ ಆಗಿದೆ. ಮೂಲಭೂತ ಸೌಲಭ್ಯಗಳಿಂದ ಇದು ವಂಚಿತವಾಗಿದೆ.

ಹೊಸಕೋಟೆ ತಾಲ್ಲೂಕಿನ ಗಡಿಭಾಗವಾಗಿರುವ, ಚಿಂತಾಮಣಿ ಹೆದ್ದಾರಿಯಲ್ಲಿರುವ ಈ ಗ್ರಾಮದಲ್ಲಿ ಸುಮಾರು 3 ಎಕರೆಗಿಂತ ಹೆಚ್ಚು ಸ್ವಂತ ಸ್ಥಳವನ್ನು ಹೊಂದಿರುವ ಸರ್ಕಾರಿ ಶಾಲೆಯ ಆವರಣವಿದೆ. ಇದರ ಒಳಕ್ಕೆ ಹೊಕ್ಕರೆ, ನಾಲ್ಕೈದು ಪಾಳು ಬಿದ್ದ ಶಾಲಾ ಕಟ್ಟಡಗಳು, ಅಲ್ಲಲ್ಲಿ ಹಸುಗಳನ್ನು ಕಟ್ಟಿಹಾಕಿರುವುದು, ಗೊಬ್ಬರ, ಗಂಜಳದಿಂದ ಕೂಡಿದ್ದು, ಅಲ್ಲಲ್ಲಿ ಗಿಡಗಂಟಿಗಳು ಬೆಳೆದು ವಿದ್ಯಾಭ್ಯಾಸ ಮಾಡಲು ಬೇಕಾಗಿರುವ ವಾತಾವರಣದಿಂದ ದೂರವಾಗಿರುವಂತಹ ಚಿತ್ರಣ ಕಾಣಸಿಗುತ್ತದೆ.

ಈ ಶಾಲೆಯ ಆವರಣದಲ್ಲಿ ಅಂಗನವಾಡಿ ಕೇಂದ್ರ, ಅಂಚೆ ಕಚೇರಿ, ಪಡಿತರ ವಿತರಣ ಕೇಂದ್ರ ಎಲ್ಲವೂ ಇದ್ದರೂ ಯಾರೂ ಸಹ ಸ್ವಚ್ಛತೆಯ ಬಗ್ಗೆ ಗಮನ ಹರಿಸಿಲ್ಲ ಎಂಬ ಆಕ್ಷೇಪ ಕೇಳಿಸಿದೆ.

ಪಾಳು ಬಿದ್ದ ಕಾಂಪೌಂಡ್: ಶಾಲೆಯ ಕಾಂಪೌಂಡ್ ಅಲ್ಲಲ್ಲಿ ಹಾಳಾಗಿದೆ. ಸಮೀಪದ ಮನೆಗಳಲ್ಲಿ ಸಾಕಿರುವ ಎತ್ತುಗಳು, ಹಸುಗಳನ್ನು ಶಾಲೆಯ ಆವರಣದಲ್ಲಿ ಕಟ್ಟುವುದು ಸಾಮಾನ್ಯವಾಗಿದೆ. ಗೊಬ್ಬರವನ್ನೂ ಶಾಲೆ ಆವರಣದಲ್ಲಿ ಹಾಕುತ್ತಿರುವುದರಿಂದ ಇಡೀ ಆವರಣ ಗೊಬ್ಬರದ ತಿಪ್ಪೆಗಳಾಗಿ ಪರಿವರ್ತನೆಯಾಗಿದೆ.

ಹಸುಗಳು ಕೂಗುವುದರಿಂದ ತರಗತಿಗಳಲ್ಲಿ ಪಾಠ ಕೇಳುವ ವಿದ್ಯಾರ್ಥಿಗಳಿಗೆ ತೊಡಕು ಉಂಟಾಗುತ್ತಿದ್ದು, ಪ್ರಾಣಿಗಳ ಶಬ್ದದಿಂದ ಮಾನಸಿಕವಾಗಿಯೂ ಹಿಂಸೆ ಅನುಭವಿಸುವಂತಾಗಿದೆ.

ಶೌಚಾಲಯ ಸಮಸ್ಯೆ: ಶಾಲೆಯ ಮಕ್ಕಳು ಉಪಯೋಗಿಸುತ್ತಿದ್ದ ಶೌಚಾಲಯವನ್ನು ರಾತ್ರಿವೇಳೆ ಕೆಲವು ಕಿಡಿಗೇಡಿಗಳು ಮದ್ಯ ಸೇವನೆ ಮಾಡಿ ಬಾಟಲಿಗಳನ್ನು ಎಸೆದು ಹಾಳು ಮಾಡಿದ್ದು, ಶಾಲೆಯ ಸಿಬ್ಬಂದಿ ಉಪಯೋಗಿಸುವ ಶೌಚಾಲಯವನ್ನೇ ಹೆಣ್ಣು ಮಕ್ಕಳು ಉಪಯೋಗಿಸುತ್ತಿದ್ದಾರೆ. ಗಂಡು ಮಕ್ಕಳು ಬಯಲನ್ನು ಶೌಚಾಲಯ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಗ್ರಾ.ಪಂ.ಪಿಡಿಒ ಕೆಂಪಣ್ಣ ಅವರು ಪ್ರತಿಕ್ರಿಯೆ ನೀಡುತ್ತಾ ಎಂಜಿಎನ್ಆರ್ ಯೋಜನೆಯಲ್ಲಿ ಕಾಂಪೌಂಡ್‌ ನಿರ್ಮಿಸಲು ಯೋಜನೆ ರೂಪಿಸಲಾಗುವುದು ಎಂದರು.

ಪ್ರತಿಕ್ರಿಯಿಸಿ (+)