ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಡಿಗೆ ಕಟ್ಟಡಗಳೇ ಆಸರೆ

ಹೊಸಕಟ್ಟಡಗಳಿಗೆ ಜಾಗವಿಲ್ಲ, ಹಳೆ ಕಟ್ಟಡಗಳಿಗೆ ಮುಕ್ತಿ ಇಲ್ಲ * ತಾಲ್ಲೂಕು ಕೇಂದ್ರದ ಅವ್ಯವಸ್ಥೆ
Last Updated 31 ಅಕ್ಟೋಬರ್ 2020, 4:55 IST
ಅಕ್ಷರ ಗಾತ್ರ

ದೇವನಹಳ್ಳಿ: ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಖ್ಯಾತಿ ಹೊಂದಿರುವ ಇಲ್ಲಿನ ತಾಲ್ಲೂಕು ಕೇಂದ್ರದ ವಿವಿಧ ಸರ್ಕಾರಿ ಇಲಾಖೆಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಬೆರಳಣಿಕೆಯಷ್ಟು ಇಲಾಖೆಗಳಿಗೆ ಮಾತ್ರ ಸ್ವಂತ ಕಟ್ಟಡ ಇದೆ.

ಕೆಲ ಇಲಾಖೆಗಳು ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ ನಂತರ ಹಳೆ ಕಟ್ಟಡಗಳು ಪಾಳು ಬಿದ್ದಿದೆ. ಇದು ಸರ್ಕಾರದ ನಿರ್ಲಕ್ಷ್ಯಕ್ಕೆ ಕಾರಣ ಎಂದು ಬೊಟ್ಟು ಮಾಡುತ್ತಾರೆ ಸ್ಥಳೀಯರಾದ ಜಿ.ವೆಂಕಟೇಶ್.

ಹಳೆ ತಾಲ್ಲೂಕು ಕಚೇರಿ ಕಟ್ಟಡ 1880ರಲ್ಲಿ ಬ್ರಿಟಿಷರ ಆಡಳಿತದಲ್ಲಿ ನಿರ್ಮಾಣಗೊಂಡಿದೆ. 140 ವರ್ಷಗಳ ಇತಿಹಾಸ ಹೊಂದಿದೆ. ಕಟ್ಟಡ ಮಳೆ ಬಂದರೆ ಸೋರುತ್ತಿತ್ತು ಎಂಬ ಕಾರಣದಿಂದ ನೂತನ ಮಿನಿ ವಿಧಾನಸೌಧ ನಿರ್ಮಾಣವಾಗಿ 2012ರಿಂದ ಕಾರ್ಯನಿರ್ವಹಿಸುತ್ತಿದೆ. ಅಂದಿನಿಂದ ಈ ಹಳೆ ಕಟ್ಟಡ ಶಿಥಿಲವಾಸ್ಥೆಯಲ್ಲೇ ಮುಂದುವರಿದಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಹಳೆ ಕಟ್ಟಡ ನೆಲಸಮ ಮಾಡಿ ನೂತನ ಕಟ್ಟಡ ನಿರ್ಮಾಣ ಮಾಡಲು ಸಮ್ಮಿಶ್ರ ಸರ್ಕಾರದ ಮೊದಲ ಹಂತದಲ್ಲಿ ₹98ಲಕ್ಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅನುದಾನ ಹಿಂಪಡೆಯಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಎಂಜಿನಿಯರ್‌ಯೊಬ್ಬರು ಮಾಹಿತಿ ನೀಡಿದರು.

ಗ್ರಾಮಾಂತರ ಜಿಲ್ಲೆಯಲ್ಲಿ ಅತಿಹೆಚ್ಚು ರೇಷ್ಮೆ ಉತ್ಪಾದಿಸುವ ದೇವನಹಳ್ಳಿ ಕೇಂದ್ರದಲ್ಲಿ ರೇಷ್ಮೆ ಇಲಾಖೆಗೆ ಸ್ವಂತ ಕಟ್ಟಡವಿಲ್ಲ. ವಸತಿ ಗೃಹದಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತಿದೆ. ಅಬಕಾರಿ ಇಲಾಖೆಗೆ ತಾಲ್ಲೂಕಿನಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಆದಾಯ ₹140ರಿಂದ 150 ಕೋಟಿ ಇದೆ ಎಂದು ಅಂದಾಜಿಸಲಾಗಿದೆ. ಆದರೆ, ‌ಈ ಇಲಾಖೆಗೆ ಸ್ವಂತ ಕಟ್ಟಡವಿಲ್ಲ. ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.

ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಬಾಡಿಗೆ ಕಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿವಿಧ ಬಡಾವಣೆಗಳಿಗೆ ಅನುಮತಿ ನೀಡಿ ವಾರ್ಷಿಕ ₹150 ರಿಂದ ₹180 ಕೋಟಿ ವಿವಿಧ ತೆರಿಗೆ ಸಂಗ್ರಹಿಸಿ ಸರ್ಕಾರದ ಬೊಕ್ಕಸ ತುಂಬಿಸುವ ಬೆಂಗಳೂರು ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದು ಹತ್ತಾರು ವರ್ಷ ಕಳೆದರೂ ಇನ್ನು ಖಾಸಗಿ ಕಟ್ಟಡದಲ್ಲಿಯೇ ಕೆಲಸ ಮಾಡುತ್ತಿದೆ.

ಪೊಲೀಸ್ ಠಾಣೆ ಅಸ್ತಿತ್ವಕ್ಕೆ ಬಂದು ಹಲವು ದಶಕಗಳೇ ಕಳೆದರೂ ಪೊಲೀಸ್ ಸಿಬ್ಬಂದಿ ವಸತಿ ಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಸಂಚಾರ ಪೊಲೀಸ್ ಠಾಣೆಯೂ ಇದಕ್ಕೆ ಹೊರತಲ್ಲ. ಸಿಬ್ಬಂದಿಗೆ ಸ್ಥಳಾವಕಾಶವಿಲ್ಲ. ಅಪಘಾತಕ್ಕೀಡಾಗಿ ಜಖಂಗೊಂಡಿರುವ ವಾಹನಗಳು ಇಲ್ಲಿಯೇ ರಾಶಿಯಾಗಿ ಬಿದ್ದಿವೆ.

ಸಹಾಯಕ ಮೀನುಗಾರಿಕೆ ಇಲಾಖೆ, ಸಹಾಯಕ ಕೈಗಾರಿಕಾ ಇಲಾಖೆ, ಸಹಾಯಕ ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿವಿಧ ನಿಗಮಗಳ ಇಲಾಖೆಗಳಿಗೆ ಸ್ವಂತ ಕಟ್ಟಡವಿಲ್ಲ ಎಂದು ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT