ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಕೋಟೆ | ಸ್ವಾಗತ ಕೋರುವ ಸೊಳ್ಳೆ, ಹುಳು, ಹಾವು!

ಹೊಸಕೋಟೆ ನಗರಸಭೆಗೆ ಕೂಗಳತೆ ದೂರದಲ್ಲಿರುವ ಉದ್ಯಾನದ ದುಃಸ್ಥಿತಿ
ವೆಂಕಟೇಶ್ ಡಿ.ಎನ್
Published : 12 ಆಗಸ್ಟ್ 2024, 4:51 IST
Last Updated : 12 ಆಗಸ್ಟ್ 2024, 4:51 IST
ಫಾಲೋ ಮಾಡಿ
Comments

ಹೊಸಕೋಟೆ: ನಗರದ ತಾಲ್ಲೂಕು ಕಚೇರಿ ಮುಂಭಾಗ, ನಗರಸಭೆಗೆ ಕೂಗಳತೆ ದೂರದಲ್ಲಿರುವ ಉದ್ಯಾನದಲ್ಲಿ ಸಮಸ್ಯೆಗಳದ್ದೇ ದರ್ಬಾರು. ಒಂದೂವರೆ ಎಕರೆ ವಿಸ್ತೀರ್ಣದಲ್ಲಿರುವ ಈ ಉದ್ಯಾನದಲ್ಲಿ ವಾಯುವಿಹಾರ, ಮಕ್ಕಳ ಆಟಕ್ಕಾಗಿ ಬರುವ ಸಾರ್ವಜನಿಕರಿಗೆ ಸೂಕ್ತ ವ್ಯವಸ್ಥೆ ಇಲ್ಲ.

ಉದ್ಯಾನದಲ್ಲಿ ನಡೆದಾಡಲು ಬೇಕಾದ ಟ್ರ್ಯಾಕ್ ಬಿಟ್ಟರೆ ಉಳಿದಂತೆ ಯಾವುದೇ ವ್ಯವಸ್ಥೆ ಸೂಕ್ತ ಇಲ್ಲ. ಅಲ್ಲಲ್ಲಿ ಬೆಂಚು ಇವೆಯಾದರೂ ಸೊಳ್ಳೆ ಕಾಟಕ್ಕೆ ಸಾರ್ವಜನಿಕರು ಅಂಜಬೇಕಾಗಿದೆ.

ಉದ್ಯಾನದಲ್ಲಿ ಹುಲ್ಲು ಬೆಳೆದು ಹುಳ–ಉಪ್ಪಟೆ ಹೆಚ್ಚಾಗಿದೆ. ಉದ್ಯಾನ ಪಕ್ಕದಲ್ಲಿಯೇ ಚರಂಡಿ ಹಾದು ಹೋಗಿದೆ. ಹಾವು ಮತ್ತಿತರ ವಿಷಕಾರಕ ಜೀವಿಗಳ ಕಾಟದಿಂದ ಹೆಚ್ಚಿನ ಜನರು ಉದ್ಯಾನಕ್ಕೆ ಬರಲು ಭಯಪಡುವಂತಾಗಿದೆ. 

ಹಲವು ಅವೈಜ್ಞಾನಿಕ ಕಾಮಗಾರಿ ಮಾಡಲು ಸ್ಥಳೀಯ ನಗರಸಭೆ ಮುಂದಾಗಿರುವುದರಿಂದ ಉದ್ಯಾನ ಅಂದಗೆಟ್ಟಿದೆ. ಉದ್ಯಾನ ಒಳಗೆ ಅಲ್ಲಲ್ಲಿ ಕಬ್ಬಿಣದ ಸಲಾಕೆ ನಾಟಿ ಮಾಡಲಾಗಿದೆ. ಜಲ್ಲಿ ಮತ್ತಿತರರ ಕಟ್ಟಡ ಸಾಮಗ್ರಿ ತಂದು ಅಲ್ಲಿ ಸುರಿದಿರುವುದರಿಂದ ವಾಯು ವಿಹಾರಕ್ಕೆ ಬರುವ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುವಂತಾಗಿದೆ.

ಶೌಚಾಲಯಗಳಿಗೆ ಬೀಗ: ಉದ್ಯಾನದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಅವುಗಳಿಗೆ ಸದಾ ಕಾಲ ಬೀಗ ಜಡಿಯಲಾಗಿದೆ. ಇದರಿಂದ ಜನರಿಗೆ ಇರಿಸುಮುರಿಸು ಉಂಟಾಗುತ್ತಿದೆ. ಅಲ್ಲದೆ, ಉದ್ಯಾನದಲ್ಲಿ ಅನೈತಿಕ ಚಟುವಟಿಕೆ ಕೂಡ ಹೆಚ್ಚಾಗಿದೆ.

ಉದ್ಯಾನವಕ್ಕೆ ಪ್ರವೇಶ ದ್ವಾರವಿದ್ದರೂ ಅದಕ್ಕೆ ಸೂಕ್ತ ಬಾಗಿಲಿನ ವ್ಯವಸ್ಥೆ ಇಲ್ಲದ ಕಾರಣ ದಿನದ 24 ಗಂಟೆಯೂ ಪಾರ್ಕ್ ತೆರೆದಿರುತ್ತದೆ. ಸೂಕ್ತ ಕಾಂಪೌಂಡ್ ಮತ್ತು ಗೇಟ್ ವ್ಯವಸ್ಥೆ ‌ಅಳವಡಿಸಬೇಕು ಎಂದು ವಾಯು ವಿಹಾರಿಗಳು ಮನವಿ ಮಾಡುತ್ತಾರೆ.

ಮಳೆ ವಂದರೆ ಕರೆಯಂತಾಗುವ ಪಾರ್ಕ್: ಇನ್ನು ಪಾರ್ಕ್‌ನ ದಕ್ಷಿಣ ಭಾಗದಲ್ಲಿ ಮಕ್ಕಳ ಆಟದ ಉಪಕರಣ ಮತ್ತು ಹಿರಿಯರಿಗಾಗಿ ವಿವಿಧ ದೈಹಿಕ ಅಭ್ಯಾಸದ ಉಪಕರಣ ಅಳವಡಿಸಲಾಗಿದೆ. ಈ ಭಾಗದಲ್ಲಿ ಮಳೆ ಬಂದರೆ ಪಕ್ಕದಲ್ಲಿಯೇ ಚರಂಡಿ ಇದ್ದರೂ ನೀರು ಸರಾಗವಾಗಿ ಹರಿದು ಕೆರೆ ಸೇರಿಕೊಳ್ಳಲಾಗದೆ ಇದ್ದಲ್ಲಿಯೇ ಉಳಿದು ಕೆರೆಯಂತಾಗುತ್ತದೆ.

ಮಳೆ ದಿನಗಳಲ್ಲಿ ಪಾರ್ಕ್‌ ಒಳಗೆ ಯಾರೂ ಹೆಜ್ಜೆ ಇಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸಂಗ್ರಹವಾಗುವ ನೀರು ಸರಾಗವಾಗಿ ಹರಿದು ಚರಂಡಿ ಸೇರುವಂತೆ ಸೂಕ್ತ ವ್ಯವಸ್ಥೆ ಮಾಡುವತ್ತ ಸ್ಥಳೀಯ ನಗರಸಭೆ ಅಧಿಕಾರಿಗಳು ವ್ಯವಸ್ಥೆ ಮಾಡಬೇಕಿದೆ.

ಹಾಳಾಗಿರುವ ಮಕ್ಕಳ ಆಟದ ಉಪಕರಣ: ಮಕ್ಕಳ ಆಟಿಕೆ ಉಪಕರಣ ಸಂಪೂರ್ಣವಾಗಿ ಹಾಳಾಗಿದೆ. ಜಾರು ಬಂಡಿ, ಉಯ್ಯಾಲೆ, ತಿರುಗುವ ಯಂತ್ರ ಸೇರಿದಂತೆ ಎಲ್ಲ ಆಟಿಕೆ ಹಾಳಾಗಿವೆ.

 ಮಕ್ಕಳ ಆಟಿಕೆಗಳ ಬಳಿ ನಿಂತಿರುವ ಮಳೆ ನೀರು
 ಮಕ್ಕಳ ಆಟಿಕೆಗಳ ಬಳಿ ನಿಂತಿರುವ ಮಳೆ ನೀರು
ಜಾರು ಬಂಡೆ ದುಃಸ್ಥಿತಿ
ಜಾರು ಬಂಡೆ ದುಃಸ್ಥಿತಿ
ಕುಡಿದು ಬಿಸಾಡಿರುವ ಮದ್ಯದ ಬಾಟಲಿ
ಕುಡಿದು ಬಿಸಾಡಿರುವ ಮದ್ಯದ ಬಾಟಲಿ
ಆನಂದ್ ವರದಾಪುರ ಹೊಸಕೋಟೆ
ಆನಂದ್ ವರದಾಪುರ ಹೊಸಕೋಟೆ
ವಿಜಯ್ ಕುಮಾರ್ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹೊಸಕೋಟೆ
ವಿಜಯ್ ಕುಮಾರ್ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹೊಸಕೋಟೆ
ತೇಜಸ್ ಪದವಿ ವಿದ್ಯಾರ್ಥಿ
ತೇಜಸ್ ಪದವಿ ವಿದ್ಯಾರ್ಥಿ

ಉದ್ಯಾನದ ಸಮಸ್ಯೆಗಳ ಬಗ್ಗೆ ಶೀಘ್ರವಾಗಿ ಸ್ಥಳೀಯ ಶಾಸಕರಾದ ಶರತ್ ಬಚ್ಚೇಗೌಡ ಮತ್ತು ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು.

-ವಿಜಯ್ ಕುಮಾರ್ ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹೊಸಕೋಟೆ

- ಅನುಕೂಲ ಕಲ್ಪಿಸಲಿ ನಗರದಲ್ಲಿ ಇರುವ ದೊಡ್ಡ ಉದ್ಯಾನ ಇದೊಂದೆ. ಅಲ್ಲದೆ ಇಲ್ಲಿಯೇ ಬಸ್ ನಿಲ್ದಾಣ ಇರುವ ಕಾರಣ ವಿದ್ಯಾರ್ಥಿಗಳು ಸಾರ್ವಜನಿಕರು ಇಲ್ಲಿಗೆ ಬಂದು ಮಧ್ಯಾಹ್ನ ಸಮಯದಲ್ಲಿ ಓದಿಕೊಳ್ಳಲು ಮತ್ತು ವಿಶ್ರಾಂತಿ ತೆಗೆದುಕೊಳ್ಳಲು ಬರುತ್ತಾರೆ. ಈಚೆಗೆ ಅನೈತಿಕ ಚಟುವಟಿಕೆ ಹೆಚ್ಚಾಗುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಒತ್ತಡ ತಂದು ಸುಸ್ಥಿತಿಯಲ್ಲಿಟ್ಟು ಎಲ್ಲರಿಗೂ ಅನುಕೂಲವಾಗುವಂತೆ ರೂಪಿಸಿಕೊಡಲಿ. ಆನಂದ್ ವರದಾಪುರ ಹೊಸಕೋಟೆ ಸರಿಪಡಿಸಲು ಮುಂದಾಗಿ ಹೊಸಕೋಟೆ ಉದ್ಯಾನದಲ್ಲಿಯೇ ಜಿಲ್ಲಾ ಕೇಂದ್ರ ಗ್ರಂಥಾಲಯ ಇದೆ. ಗ್ರಂಥಾಲಯ ಮುಂಭಾಗದಲ್ಲಿಯೇ ಕೆಲವೊಮ್ಮೆ ಕುಡಿದು ಖಾಲಿ ಬಾಟಿಲಿ ಎಸೆದಿರುತ್ತಾರೆ. ಉದ್ಯಾನವನ್ನು ಆದಷ್ಟು ಬೇಗ ಸರಿಪಡಿಸುವ ಕೆಲಸಕ್ಕೆ ಸ್ಥಳೀಯ ಅಧಿಕಾರಿಗಳು ಮುಂದಾಗಬೇಕು. ತೇಜಸ್ ವಿದ್ಯಾರ್ಥಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT