ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ ಸ್ಯಾಟಲೈಟ್ ಟೌನ್‌: ಸಿ.ಎಂ

ತಾಲ್ಲೂಕಿನಲ್ಲಿ ₹139 ಕೋಟಿ ವೆಚ್ಚದ ಕಾಮಗಾರಿಗಳಿಗೆ ಬಸವರಾಜ ಬೊಮ್ಮಾಯಿ ಚಾಲನೆ
Last Updated 8 ಜೂನ್ 2022, 3:51 IST
ಅಕ್ಷರ ಗಾತ್ರ

ಹೊಸಕೋಟೆ: ‘ತಾಲ್ಲೂಕಿನಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದ್ದು, ಬೆಂಗಳೂರು ನಗರಕ್ಕೆ ಹೆಬ್ಬಾಗಿಲಾದ ಹೊಸಕೋಟೆಯನ್ನು ಸ್ಯಾಟಲೈಟ್ ಟೌನ್ ಆಗಿ ಅಭಿವೃದ್ಧಿಪಡಿಸಲಾಗುತ್ತದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೆ.ಆರ್.ರಸ್ತೆಯಲ್ಲಿರುವ ಸರ್ಕಾರಿ ಕನ್ನಡ ಬಾಲಕರ ಮಾಧ್ಯಮಿಕ ಶಾಲೆ ಆವರಣದಲ್ಲಿ ನಡೆದ ತಾಲ್ಲೂಕಿನಲ್ಲಿ ₹139 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

‘ರಾಜಕಾರಣದಲ್ಲಿ ಎರಡು ರೀತಿಯ ರಾಜಕಾರಣವಿರುತ್ತದೆ. ಒಂದು ಅಧಿಕಾರ ರಾಜಕಾರಣ ಮತ್ತೊಂದು ಅಭಿವೃದ್ಧಿ ರಾಜಕಾರಣ ತಾಲ್ಲೂಕಿನಲ್ಲಿ ಅಭಿವೃದ್ಧಿ ರಾಜಕಾರಣ ನಡೆಯುತ್ತಿದೆ. ಶಾಸಕ ಶರತ್ ಬಚ್ಚೇಗೌಡ ಮತ್ತು ಸಚಿವ ಎಂ.ಟಿ.ಬಿ. ನಾಗರಾಜ್ ಇಬ್ಬರೂ ತಾಲ್ಲೂಕಿನ ಅಭಿವೃದ್ಧಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಏನೆಲ್ಲಾ ಅಭಿವೃದ್ಧಿ ಮಾಡಬಹುದು ಎಂದು ಪೈಪೋಟಿ ಮಾಡುತ್ತಿದ್ದಾರೆ. ಇದು ಜನರಪರ ರಾಜಕಾರಣ’ ಎಂದರು.

‘ಜನನಾಯಕರಾದವರು ಚುನಾವಣೆ
ಗಳಲ್ಲಿ ಗೆದ್ದರೆ ಸಾಲದು ಜನರ ಹೃದಯ
ದಲ್ಲಿ ಸ್ಥಾನ ಪಡೆಯಬೇಕು’ ಎಂದರು.

‘ಹೊಸಕೋಟೆಯಲ್ಲಿ ಕೈಗಾರಿಕೆ, ವೇರ್‌ಹೌಸ್, ಇ-ಕಾಮರ್ಸ್ ಸೇರಿದಂತೆ ಆರ್ಥಿಕ ಚಟುವಟಿಕೆಗಳಿಗೆ ವಿಪುಲವಾಗಿ ಅವಕಾಶಗಳಿವೆ. ಹೊಸಕೋಟೆ ಯೋಜನಾ ಪ್ರಾಧಿಕಾರವು ದೂರದೃಷ್ಟಿ ಇಟ್ಟುಕೊಂಡು ಯೋಜನೆಗಳನ್ನು ರೂಪಿಸಬೇಕು’ ಎಂದು ಹೇಳಿದರು.

100 ಹಾಸಿಗೆಗಳ ಆಸ್ಪತ್ರೆ ಹೊಸಕೋಟೆ ತಾಲ್ಲೂಕಿನಲ್ಲೂ ಸ್ಥಾಪನೆಯಾಗಲಿದೆ. ಜೊತೆಗೆ ತಾಯಿ ಮಗುವಿನ ಆಸ್ಪತ್ರೆಯನ್ನೂ ತಾಲ್ಲೂಕಿಗೆ ನೀಡುತ್ತಿರುವುದಾಗಿ ತಿಳಿಸಿದರು.

ಪೌರಾಡಳಿತ, ಸಣ್ಣ ಕೈಗಾರಿಕೆಗಳು, ಸಾರ್ವಜನಿಕ ವಲಯ ಉದ್ಯಮಗಳ ಸಚಿವ ಎಂ.ಟಿ.ಬಿ. ನಾಗರಾಜ್ ಮಾತನಾಡಿ, ‘ಹೊಸಕೋಟೆ ತಾಲ್ಲೂಕು ತನ್ನದೇ ಆದ ಪರಂಪರೆ, ಐತಿಹಾಸಿಕ ಹಿನ್ನೆಲೆ ಹೊಂದಿದೆ. ಮಾತ್ರವಲ್ಲದೆ, ಕೈಗಾರಿ
ಕೋದ್ಯಮವು ಕೋಲಾರ, ಮಾಲೂರು, ನರಸಾಪುರದವರೆಗೂ ವಿಸ್ತರಿಸಿರುವು
ದರಿಂದ ಹೊಸಕೋಟೆಯವರೆಗೂ ಮೆಟ್ರೋ ರೈಲು ಸಂಚಾರವನ್ನು ವಿಸ್ತರಿಸ
ಬೇಕು’ ಎಂದು ಮನವಿ ಮಾಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಅವರು ಮಾತನಾಡಿ, ‘ಹೊಸಕೋಟೆ ತಾಲ್ಲೂಕಿಗೆ ₹38 ಕೋಟಿ ಅನುದಾನದಲ್ಲಿ ತಾಯಿ ಮತ್ತು ಮಗುವಿನ ಆಸ್ಪತ್ರೆಯನ್ನು ಮಂಜೂರು ಮಾಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಕೆಲವೇ ತಿಂಗಳಲ್ಲಿ ಗುದ್ದಲಿ ಪೂಜೆ ನೇರವೇರಿಸಲಾಗುವುದು’ ಎಂದು ತಿಳಿಸಿದರು.

ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಶರತ್ ಕುಮಾರ್ ಬಚ್ಚೇಗೌಡ ಮಾತನಾಡಿ, ಹೊಸಕೋಟೆ ನಗರ ಅಥವಾ ಕಸಬಾ ಭಾಗದಲ್ಲಿ ಡಿಪ್ಲೊಮಾ ಕಾಲೇಜು ಮಂಜೂರು ಮಾಡಿ, ವಿದ್ಯಾರ್ಥಿಗಳು ಕೌಶಲಯುತ ಶಿಕ್ಷಣ ಪಡೆಯಲು ಸಹಕರಿಸಬೇಕೆಂದು ಹೇಳಿದರು. ಇಂದು ಶಂಕುಸ್ಥಾಪನೆಯಾದ ಕೆಲವು ಕಾಮಗಾರಿಗಳಿಗೆ ಇನ್ನೂ ಮಂಜೂ
ರಾತಿಯೂ ಸಿಕ್ಕಿಲ್ಲ. ಆದರೂ ಜಿಲ್ಲಾಡಳಿತ ತರಾತುರಿಯಾಗಿ ಕಾರ್ಯಕ್ರಮವನ್ನು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯ ಬಿ.ಎನ್. ಬಚ್ಚೇಗೌಡ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರಂತರ ಸಂಪರ್ಕ ಸಾಧಿಸಿ, ಜನರ ಕಲ್ಯಾಣಕ್ಕೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್, ಲೋಕೋಪಯೋಗಿ ಇಲಾಖಾ ಸಚಿವ ಚಂದ್ರಕಾಂತ ಗೌಡ ಚನ್ನಪ್ಪ ಗೌಡ ಪಾಟೀಲ್, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ್, ಹೊಸಕೋಟೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಶಂಕರೇಗೌಡ, ಹೊಸಕೋಟೆ ನಗರಸಭೆ ಅಧ್ಯಕ್ಷ ಡಿ.ಕೆ.ನಾಗರಾಜ್, ಉಪಾಧ್ಯಕ್ಷೆ ಸುಗುಣ ಮೋಹನ್, ಸ್ಥಳೀಯ ಜನಪ್ರತಿನಿಧಿಗಳು, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇವಣಪ್ಪ.ಕೆ., ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಕೋನ ವಂಶಿಕೃಷ್ಣ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

39 ಕೆರೆಗಳಿಗೆ ನೀರು

ಎತ್ತಿನಹೊಳೆ ಕುಡಿಯುವ ನೀರು ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆಗೆ ಅನುದಾನ ಬಿಡುಗಡೆ ಮಾಡಲಾಗಿದ್ದು, ಇನ್ನೂ ಕೆಲವೇ ವರ್ಷಗಳಲ್ಲಿ ಬಯಲುಸೀಮೆಯ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ, ರಾಮನಗರ ಹಾಗೂ ಕೋಲಾರಕ್ಕೆ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ. ಅನುಗೊಂಡನಹಳ್ಳಿ ಹೋಬಳಿಯ 39 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ತಾಲ್ಲೂಕಿನ ಎಲೆ ಮಲ್ಲಪ್ಪ ಶೆಟ್ಟರ ಕೆರೆಯಿಂದ ಏತನೀರಾವರಿ ಮೂಲಕ ದೊಡ್ಡ ಕೆರೆಗೆ ನೀರು ತುಂಬುವ ಯೋಜನೆಗೆ ಕಳೆದ ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿದೆ. ವಸತಿ ಇಲಾಖೆಯಿಂದ ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳಿಗೆ ತಲಾ 100 ಮನೆಗಳಂತೆ 2800 ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿರುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT