ಶನಿವಾರ, ಜನವರಿ 28, 2023
24 °C
ಸೂಲಿಬೆಲೆ: ಬಡ ರೋಗಿಗಳ ಆರೋಗ್ಯ ಸೇವೆಯಲ್ಲಿ ವ್ಯತ್ಯಯ

ವೈದ್ಯಾಧಿಕಾರಿ ನೇಮಕಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂಲಿಬೆಲೆ: ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರಿಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ವೈದ್ಯರನ್ನು ನೇಮಿಸಲು ತುರ್ತಾಗಿ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಹೊಸಕೋಟೆ ತಾಲ್ಲೂಕಿನಲ್ಲಿಯೇ ಅತಿ ದೊಡ್ಡ ಹೋಬಳಿ ಕೇಂದ್ರವಾಗಿರುವ ಸೂಲಿಬೆಲೆ ವ್ಯಾಪ್ತಿಯಲ್ಲಿ ಸುಮಾರು 30 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆಯಿದೆ. ತಾಲ್ಲೂಕು ಕೇಂದ್ರದಿಂದ 15 ಕಿ.ಮೀ ದೂರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಇಲ್ಲದೆ ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ, ಹೆರಿಗೆಗೆ ಬರುವವರಿಗೆ ತೊಂದರೆಯಾಗಿದೆ.

ಪ್ರತಿನಿತ್ಯ 100-150 ರೋಗಿಗಳು ಆರೋಗ್ಯ ಸೇವೆ ಪಡೆಯಲು ಪ್ರಾಥಮಿಕ ಆರೋಗ್ಯಕ್ಕೆ ಭೇಟಿ ನೀಡುತ್ತಾರೆ. ತಿಂಗಳಲ್ಲಿ ಸರಾಸರಿ 10 ಹೆರಿಗೆ ಪ್ರಕರಣಗಳು ದಾಖಲಾಗುತ್ತವೆ.
ಆದರೆ, ಅವರಿಗೆ ಆಯುಷ್‌ ವಿದ್ಯಾರ್ಥಿಗಳು ಹಾಗೂ ನರ್ಸ್‌ಗಳೇ ಚಿಕಿತ್ಸೆ ನೀಡುತ್ತಾರೆ. ಆಯುಷ್‌ ವ್ಯಾಸಂಗ ಮಾಡುವವರು ಮತ್ತು ಮಾಡಿದವರು ಇಂಗ್ಲಿಷ್‌ ಮೆಡಿಷನ್‌ ಚಿಕಿತ್ಸೆ ನೀಡುವಂತಿಲ್ಲ ಎಂಬ ನಿಯಮವಿದ್ದರೂ ಇಲ್ಲಿ ಅವರೇ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ಶೀಘ್ರವೇ ವೈದ್ಯರನ್ನು ನೇಮಿಸಬೇಕೆಂಬುದು ಸ್ಥಳೀಯರ ಒತ್ತಾಯ.

ಹಿರಿಯ ನಾಗರಿಕರು ಪಿಂಚಣಿ ಪಡೆಯಲು ಬೇಕಾಗಿರುವ ಆರೋಗ್ಯ ಪ್ರಮಾಣ ಪತ್ರ ಪಡೆಯಲು ವೈದ್ಯಾಧಿಕಾರಿ ಇಲ್ಲದೆ ಸಮಸ್ಯೆ
ಎದುರಿಸಬೇಕಾಗಿದೆ.

ಈ ಮೊದಲು ಇದ್ದ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಉನ್ನತ ವ್ಯಾಸಂಗಕ್ಕಾಗಿ ತೆರಳಿರುವುದರಿಂದ, ಒಂದು ವಾರದಿಂದ ವೈದ್ಯಾಧಿಕಾರಿ ಹುದ್ದೆ ಖಾಲಿ ಇದೆ. ಪ್ರಸ್ತುತ ಆಯುಷ್ ವೈದ್ಯರು ಇದ್ದರೂ, ರೋಗಿಗಳಿಗೆ ಸರಿಯಾದ ಆರೋಗ್ಯ ಸೇವೆ ಲಭ್ಯವಾಗುತ್ತಿಲ್ಲ. ಆದ್ದರಿಂದ ಎಂಬಿಬಿಎಸ್ ವೈದ್ಯರನ್ನು ನಿಯೋಜಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

‘ಹೋಬಳಿ ಕೇಂದ್ರದ ಆರೋಗ್ಯ ಕೇಂದ್ರದಲ್ಲಿ ರಾತ್ರಿ, ಹಗಲು ವೈದ್ಯರ ಸೇವೆ ಸಿಗಬೇಕು. ಆದರೆ, ದಿನದ ವೇಳೆಯಲ್ಲಿ ಸೇವೆ ಲಭ್ಯವಾಗುತ್ತಿಲ್ಲ. ಬಡವರು ಆರೋಗ್ಯ ಸೇವೆ ಪಡೆಯಲು ತಾಲ್ಲೂಕು ಕೇಂದ್ರಕ್ಕೆ ಹೋಗಿಬರಲು ಸಾಧ್ಯವಿಲ್ಲ. ತುರ್ತಾಗಿ ವೈದ್ಯಾಧಿಕಾರಿ ನೇಮಕ್ಕೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದು ಡಿವೈಎಫ್ಐ ತಾಲ್ಲೂಕು ಕಾರ್ಯದರ್ಶಿ ಮೋಹನ್ ಬಾಬು ಒತ್ತಾಯಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.