ದೊಡ್ಡಬಳ್ಳಾಪುರ: ಚಂದ್ರಯಾನ–3ಕ್ಕೆ ಸಂಬಂಧಪಟ್ಟಂತೆ ಉಪನ್ಯಾಸಕ ಹುಲಿಕುಂಟೆ ಮೂರ್ತಿ ಅವರ ವೈಚಾರಿಕ ಹೇಳಿಕೆಯನ್ನು ಬೆಂಬಲಿಸಿ ಹಾಗೂ ಅವರ ಹೇಳಿಕೆಯನ್ನು ಟ್ರೋಲ್ ಮಾಡಿ ಮಾನಸಿಕ ಕಿರುಕುಳ ನೀಡಿದ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಕನ್ನಡ ಮತ್ತು ದಲಿತ ಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ನಗರದ ತಾಲ್ಲೂಕು ಕಚೇರಿ ಮುಂದೆ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಚಂದ್ರಯಾನ-3 ಉಪಗ್ರಹ ಉಡಾವಣೆ ಕುರಿತು ವಿಜ್ಞಾನಿಗಳು ತಿರುಪತಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ್ದು ಖಂಡನೀಯ. ಇದು ಯುವಜನರಲ್ಲಿ ಮೌಢ್ಯಾಚರಣೆಗೆ ಮೂಡಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಾತ್ಯತೀತ, ಧರ್ಮನಿರಪೇಕ್ಷ ಪ್ರಜಾಪ್ರಭುತ್ವ ದೇಶವಾದ ಭಾರತ ಸರ್ಕಾರದ ಅಂಗ ಸಂಸ್ಥೆಯಾದ ಇಸ್ರೋ ಒಂದು ಧರ್ಮದ ಧಾರ್ಮಿಕತೆಗೆ ಅಂಟಿಕೊಂಡಿದ್ದು ತರವಲ್ಲ ಎಂಬ ಅರ್ಥದಲ್ಲಿ ಹುಲಿಕುಂಟೆ ಮೂರ್ತಿ ಅವರು ಪೋಸ್ಟ್ ಮಾಡಿದ್ದರು. ಕೆಲವು ಕಿಡಿಗೇಡಿಗಳು ಈ ಪೋಸ್ಟ್‌ನ ಕೆಲ ತುಣುಕು ತೆಗೆದು ಎಡಿಟ್ ಮಾಡಿ ಟ್ರೋಲ್ ಮಾಡಿದ್ದಾರೆ. ಹುಲಿಕುಂಟೆಮೂರ್ತಿ ಅವರ ಪತ್ನಿಯ ಫೇಸ್‌ಬುಕ್ ಖಾತೆಯಲ್ಲೂ ಅಸಹ್ಯ ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ಮೂರ್ತಿ ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿರುವುದು ಖಂಡನಿಯ ಎಂದರು.
ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಕೆ.ವೆಂಕಟೇಶ್ ಮಾತನಾಡಿ, ಹುಲಿಕುಂಟೆ ಮೂರ್ತಿ ಅವರ ವೈಚಾರಿಕ ಹೇಳಿಕೆಗೆ ಆಕ್ಷೇಪಡಿಸಿ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಹಾಲಿ ಶಾಸಕರು ಮತ್ತು ಮಾಜಿ ಶಿಕ್ಷಣ ಸಚಿವರ ನಡೆ ಸಂವಿಧಾನ ವಿರೋಧಿಯಾಗಿದೆ. ಸಂವಿಧಾನಬದ್ಧವಾಗಿ ಆಯ್ಕೆಯಾಗಿರುವ ಸುರೇಶ್‌ಕುಮಾರ್ ಅವರು ಸಂವಿಧಾನದ ಆಶಯಗಳಿಗೆ ಲೋಪವಾಗದಂತೆ ನಡೆದುಕೊಳ್ಳಬೇಕು ಎಂದರು.
ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ಉಪನ್ಯಾಸಕ ಹುಲಿಕುಂಟೆಮೂರ್ತಿ ಅವರಿಗೆ ಮತ್ತು ಅವರ ಕುಟುಂಬಕ್ಕೆ ಮಾನಸಿಕ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಹುಲಿಕುಂಟೆ ಮೂರ್ತಿ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.
ಕನ್ನಡ ಜಾಗೃತ ಪರಿಷತ್ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕನ್ನಡ ಪಕ್ಷದ ರಾಜ್ಯ ಮುಖಂಡ ಸಂಜೀವನಾಯಕ್, ಪ್ರಜಾ ವಿಮೋಚನಾ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಗೂಳ್ಯಹನುಮಣ್ಣ, ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಸಿ.ಗುರುರಾಜಪ್ಪ, ಹಿರಿಯ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ್, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಮುಖಂಡ ಕುಮಾರ್ ಸಮತಳ, ದಲಿತ ಸಂಘಟನೆಗಳ ಮುಖಂಡ ರಾಜುಸಣ್ಣಕ್ಕಿ, ಪ್ರಜಾ ವಿಮೋಚನಾ ಸಮಿತಿ ತಾಲ್ಲೂಕು ಅಧ್ಯಕ್ಷ ರಾಜಶೇಖರ್, ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ತಾಲ್ಲೂಕು ಕನ್ನಡ ಪಕ್ಷದ ಅಧ್ಯಕ್ಷ ವೆಂಕಟೇಶ್, ಮುನಿಪಾಪಯ್ಯ, ಯುವ ಸಂಚಲನ ಅಧ್ಯಕ್ಷ ಚಿದಾನಂದ್, ಛಲವಾದಿ ಮಹಾಸಭಾ ತಾಲ್ಲೂಕು ಕಾರ್ಯದರ್ಶಿ ಮೂರ್ತಿ, ತಳಗವಾರ ಪುನೀತ್ ಇದ್ದರು.
ತಾಲ್ಲೂಕು ಕಚೇರಿ ಪೂಜೆ– ಅಸಮಾದಾನ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ಪೂಜೆ ನಡೆಯುತ್ತಿರುವುದಕ್ಕೆ ಆಕ್ಷೇಪಿಸಿದ ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಕೆ.ವೆಂಕಟೇಶ್ ಸರ್ಕಾರಿ ಕಚೇರಿಗಳು ಸಾರ್ವಜನಿಕರ ಆಸ್ತಿ. ಇಲ್ಲಿ ಒಂದು ಧರ್ಮಕ್ಕೆ ಸೇರಿದ ಧಾರ್ಮಿಕ ಆಚರಣೆ ನಡೆಸುತ್ತಿರುವುದು ಸಂವಿಧಾನ ವಿರೋಧಿ ನಡೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.