ಬುಧವಾರ, ಫೆಬ್ರವರಿ 1, 2023
16 °C

ನಾನೂ ಬಿಜೆಪಿ ಟಿಕೆಟ್‌ ಆಕಾಂಕ್ಷಿ: ಚಂದ್ರಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ‘ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ನಡೆಯುತ್ತಿರುವ ವಿಜಯ ಸಂಕಲ್ಪ ಯಾತ್ರೆ ಸಂದರ್ಭದಲ್ಲಿ ಮತದಾರರು ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲವೇ ಎಂದು ಕೇಳುತ್ತಿರುವುದು ನನಗೆ ಬೇಸರ ತಂದಿದೆ. ಈಗಾಗಲೇ, ಎರಡು ಬಾರಿ ಶಾಸಕನಾಗಿ ಕೆಲಸ ಮಾಡಿರುವ ನಾನು ಕೂಡ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ’ ಎಂದು ಮಾಜಿ ಶಾಸಕ ಜಿ. ಚಂದ್ರಣ್ಣ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಪಕ್ಷದಲ್ಲಿನ ಬಣ ರಾಜಕೀಯದ ಬಗ್ಗೆ ಕಾರ್ಯಕರ್ತರು ಗಮನ ಹರಿಸಬಾರದು. ಪಕ್ಷವೇ ಒಂದು ಬಣವಾಗಿದೆ. ಇಬ್ಬರೂ ಮಾಜಿ ಶಾಸಕರು ಸೇರಿದಂತೆ ಹಲವರು ರೇಸ್‌ನಲ್ಲಿದ್ದಾರೆ. ಟಿಕೆಟ್‌ ಯಾರಿಗೆಂದು ಪಕ್ಷದ ವರಿಷ್ಠರು ತಿಳಿಸಿಲ್ಲ. ನಾನು 9 ವರ್ಷಗಳಿಂದಲೂ ನಿರಂತರವಾಗಿ ಪಕ್ಷಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ’ ಎಂದರು.

‘ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಎಲ್ಲಿಯೂ ತಿಳಿಸಿಲ್ಲ. ಪಕ್ಷದಲ್ಲಿರುವವರೇ ವದಂತಿ ಹಬ್ಬಿಸಿ ಈ ಬಾರಿ ಮಾಜಿ ಶಾಸಕ ಚಂದ್ರಣ್ಣ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಪ್ರಚಾರ ಮಾಡುತ್ತಿದ್ದಾರೆ. ವರಿಷ್ಠರ ಸೂಚನೆಯಂತೆ ರಾಜ್ಯ ಮಟ್ಟದಲ್ಲಿ ಕೆಲಸ ಮಾಡಿದ್ದೇನೆ. ಪಕ್ಷದ ನಿರ್ದೇಶನದಂತೆ ದೇವನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಬೆಳೆಸಲು ನಿರತನಾಗಿದ್ದೇನೆ. ಎಲ್ಲಿಯೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ತಿಳಿಸಿಲ್ಲ’ ಎಂದು ಹೇಳಿದರು.

ಬಿಜೆಪಿ ಖಜಾಂಚಿ ಚನ್ನಕೇಶವ ಮಾತನಾಡಿ, ‘ಪಕ್ಷ ಸಂಘಟನೆಯತ್ತ ಕಾರ್ಯಕರ್ತರು ಗಮನ ಹರಿಸಬೇಕು. ಟಿಕೆಟ್‌ ವಿಚಾರವಾಗಿ ಬಣಗಳಲ್ಲಿ ಗುರುತಿಸಿಕೊಂಡು ರಾಜಕೀಯವಾಗಿ ತಪ್ಪು ಸಂದೇಶ ರವಾನೆಯಾಗುವಂತೆ ಮಾಡಬಾರದು. ಟಿಕೆಟ್‌ ನೀಡುವವರೆಗೂ ತಾಳ್ಮೆಯ ಅಗತ್ಯವಿದೆ. ಪಕ್ಷಕ್ಕೆ ಬಂದಿರುವ ಪ್ರಮುಖ ನಾಯಕರು ಪಕ್ಷ ಕಟ್ಟುವ ಕೆಲಸ ಮಾಡಬೇಕೇ ಹೊರತು ಒಡೆಯುವ ಕೆಲಸ ಮಾಡಬಾರದು’ ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು